ಜಿಲ್ಲೆ

ಶ್ರೀ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ ಪ್ರಯುಕ್ತ ಪೂಜೆ

ರಮೇಶ ಜಹಗೀರದಾರ್

ದಾವಣಗೆರೆ : ಅಯೋಧ್ಯೆಯ ಭವ್ಯ ಶ್ರೀರಾಮ ಮಂದಿರದಲ್ಲಿ ಶ್ರೀರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಸೋಮವಾರ ನಗರದಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿತ್ತು. ದೇಗುಲಗಳಲ್ಲಿ ದಿನವಿಡೀ ವಿಶೇಷ ಪೂಜೆ, ಹೋಮ, ಭಜನೆ ಹಾಗೂ ಶ್ರೀರಾಮ ತಾರಕ ಮಂತ್ರ ಪಠಣ ನಡೆದವು. ಸರದಿಯ ಸಾಲಿನಲ್ಲಿ ನಿಂತು ಪ್ರಭು ಶ್ರೀರಾಮಚಂದ್ರನ ದರ್ಶನ ಮಾಡಿ ಕಣ್ತುಂಬಿಕೊಂಡ ಭಕ್ತರು ಭಕ್ತಿ ಸಮರ್ಪಿಸಿದರು.
 ಪಿ.ಜೆ.ಬಡಾವಣೆ ಶ್ರೀರಾಮ ದೇವಸ್ಥಾನ : ನಗರದ ಪಿ.ಜೆ.ಬಡಾವಣೆಯ ಖಮಿತ್ಕರ್ ಈಶ್ವರಪ್ಪನವರ ಶ್ರೀರಾಮ ದೇವಸ್ಥಾನಕ್ಕೆ ಬೆಳಗ್ಗೆಯಿಂದಲೇ ಭಕ್ತರ ದಂಡು ಹರಿದು ಬಂದು ಸರದಿಯ ಸಾಲಿನಲ್ಲಿ ನಿಂತು ಶ್ರೀರಾಮನ ದರ್ಶನ ಪಡೆದರು. ದೇಗುಲಕ್ಕೆ ಆಗಮಿಸಿದ ಭಕ್ತರಿಗೆ ಸೇವಾಕರ್ತರಿಂದ ಕೋಸಂಬರಿ, ಪಾನಕ ಹಾಗೂ ಲಾಡು ವಿತರಿಸಲಾಯಿತಲ್ಲದೆ ಜೈನ ಸಮಾಜದಿಂದ ದಾಸೋಹ ನಡೆಯಿತು.
 ಮಂದಿರದಲ್ಲಿ ಪ್ರಾತಃಕಾಲದಿಂದಲೇ ಪೂಜಾ ಕೈಂಕರ್ಯ ಆರಂಭಗೊಂಡವು. ಶ್ರೀರಾಮನಾಮ ಜಪ ಪಠಣ, ಹನುಮಾನ್ ಚಾಲೀಸಾ, ವಿಷ್ಣು ಸಹಸ್ರನಾಮ ಹಾಗೂ ಅಗ್ನಿಹೋತ್ರಿ ಹೋಮ, ಶ್ರೀ ರಾಮನ ಮೂಲ ಮೂರ್ತಿಗೆ ರುದ್ರಮಂತ್ರ, ಅಭಿಷೇಕ, ಗಣಹೋಮ, ನವಗ್ರಹ ಹೋಮ, ಶ್ರೀರಾಮ ತಾರಕ ಹೋಮ ನೆರವೇರಿದವು.
 ಸಂಜೆ ವಾಸವಿ ಸಮಾಜದ ವನಿತೆಯರು ಭಜನೆ ನಡೆಸಿ ರಘುರಾಮನನ್ನು ಭಜಿಸಿದ ನಂತರ ದೇವಾಲಯದ ಆವರಣದಲ್ಲಿ ದೀಪೋತ್ಸವ ನಡೆಯಿತು. ಭಕ್ತರು ಬಾಲರಾಮನಿಗೆ ದೀಪಗಳನ್ನು ಬೆಳಗುವ ಮೂಲಕ ರಾಮದೀಪಾವಳಿ ಆಚರಿಸಿದರು. ರಾತ್ರಿ ಚಂಡೆವಾದ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.
 ಶಂಕರಮಠದ ಶ್ರೀ ರಾಮಮಂದಿರ : ನಗರದ ಜಯದೇವ ವೃತ್ತದ ಶಂಕರ ಮಠದ ಆವರಣದ ಶ್ರೀರಾಮ ಮಂದಿರಕ್ಕೆ ಆಗಮಿಸಿದ ಭಕ್ತರು ವಿಶೇಷ ಅಲಂಕಾರದಿಂದ ಕಂಗೊಳಿಸುತ್ತಿದ್ದ ಶ್ರೀರಾಮ ಸಮೇತ ಸೀತಾ, ಲಕ್ಷ್ಮಣ ಹಾಗೂ ಆಂಜನೇಯ ಮೂರ್ತಿಗಳಿಗೆ ನಮನ ಸಲ್ಲಿಸಿದರು. ಉತ್ಸವ ಮೂರ್ತಿಗಳಿಗೆ ಕ್ಷೀರಾಭಿಷೇಕ ಹಾಗೂ ಜಲಾಭಿಷೇಕ ನೆರವೇರಿಸಿ ಕೃತಾರ್ಥರಾದರು.
 ಮಠದಲ್ಲಿ ಬೆಳಗ್ಗೆ ಅಭಿಷೇಕ, ಶ್ರೀರಾಮ ತಾರಕ ಹೋಮ, ಸಂಜೆ ವಿಷ್ಣು ಸಹಸ್ರನಾಮ, ಶ್ರೀರಾಮಭಜನೆ ನಡೆದವು. ಆನಂತರ ಪ್ರಾಕಾರೋತ್ಸವ ಹಾಗೂ ದೀಪೋತ್ಸವಗಳನ್ನು ಭಕ್ತರು ಕಣ್ತುಂಬಿಕೊಂಡರು. ಭಕ್ತಾದಿಗಳಿಗೆ ಬೆಳಗ್ಗೆಯಿಂದ ರಾತ್ರಿಯವರೆಗೂ ಪ್ರಸಾದ ವಿತರಣೆ ಮಾಡಲಾಯಿತು.
 ಶ್ರೀ ಕೋದಂಡರಾಮ ದೇವಸ್ಥಾನ : ಸುಮಾರು 108 ವರ್ಷ ಇತಿಹಾಸ ಹೊಂದಿರುವ ನಗರದ ಮಂಡಿಪೇಟೆಯ ಶ್ರೀ ಕೋದಂಡರಾಮ ದೇವಸ್ಥಾನದಲ್ಲಿ ಬೆಳಗ್ಗೆ ಅಭಿಷೇಕ, ವಿಶೇಷ ಪೂಜೆ, ಅಲಂಕಾರ, ಭಜನೆ ಹಾಗೂ ಸಂಜೆ ದೀಪೋತ್ಸವ ನಡೆದವು. ಭಕ್ತರಿಗೆ ಪ್ರಸಾದ ವಿತರಣೆ ನಡೆಯಿತು. ಪಿ.ಬಿ.ರಸ್ತೆಯ ಶ್ರೀ ಕೋದಂಡರಾಮ ದೇವಸ್ಥಾನದಲ್ಲೂ ವಿಶೇಷ ಪೂಜೆ ಹಾಗೂ ಶ್ರೀರಾಮ ತಾರಕ ಹೋಮ ನೆರವೇರಿದವು.
 ಶ್ರೀ ಆಂಜನೇಯಸ್ವಾಮಿ ದೇವಸ್ಥಾನ : ಶಿವಾಜಿ ನಗರದ ಶ್ರೀ ವಡಕರಾಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಅಭಿಷೇಕ, ಫಲಪಂಚಾಮೃತ ಅಭಿಷೇಕ, ಜೇನುತುಪ್ಪ ಅಭಿಷೇಕ, ಶ್ರೀರಾಮ ತಾರಕ ಹೋಮ ಸೇರಿ ಹಲವು ಹೋಮಗಳು ನಡೆದವು. ಬೆಳಗ್ಗೆಯಿಂದಲೇ ದೇವಸ್ಥಾನಕ್ಕೆ ಆಗಮಿಸಿದ ಭಕ್ತರು ಶ್ರೀರಾಮನ ಸ್ಮರಣೆಯೊಂದಿಗೆ ರಾಮಭಕ್ತ ಹನುಮನಿಗೂ ಪೂಜೆ ಸಲ್ಲಿಸಿದರು. ಭಕ್ತರಿಗೆ ಪ್ರಸಾದ ವ್ಯವಸ್ಥೆ ಏರ್ಪಡಿಸಲಾಗಿತ್ತು.
 ಶ್ರೀ ಕನ್ಯಕಾಪರಮೇಶ್ವರಿ ದೇವಸ್ಥಾನ : ನಗರದ ಶ್ರೀ ಕನ್ಯಕಾಪರಮೇಶ್ವರಿ ದೇವಸ್ಥಾನದಲ್ಲಿ ಶ್ರೀರಾಮನೊಂದಿಗೆ ಸೀತಾ, ಲಕ್ಷ್ಮಣ ಹಾಗೂ ಆಂಜನೇಯ ವಿಗ್ರಹ ಪ್ರತಿಷ್ಠಾಪಿಸಿ ಅಭಿಷೇಕ ಹಾಗೂ ವಿಶೇಷ ಪೂಜೆ ಕೈಗೊಳ್ಳಲಾಯಿತು. ಭಕ್ತರಿಂದ ಶ್ರೀರಾಮನ ಮೂರ್ತಿಗೆ ಜಲಾಭಿಷೇಕ ನಡೆಯಿತು. ಸಂಜೆ ವಿಶೇಷ ಭಜನೆ, ದೀಪೋತ್ಸವ, ಶ್ರೀರಾಮನ ಪ್ರಾಕಾರೋತ್ಸವ ನಡೆದವು. ಪ್ರಸಾದ ವ್ಯವಸ್ಥೆ ಏರ್ಪಡಿಸಲಾಗಿತ್ತು.
 ರಾಂ ಅಂಡ್ ಕೋ ವೃತ್ತ : ಸಂಪೂರ್ಣ ಕೇಸರಿ ಬಟ್ಟೆಯಿಂದ ಅಲಂಕೃತಗೊಂಡು ಫ್ಲೆಕ್ಸ್‌ಗಳ ಮೂಲಕ ರಾಮಾಯಣದ ಸಂದೇಶ ಸಾರಿದ ನಗರದ ರಾಂ ಅಂಡ್ ಕೋ ವೃತ್ತದಲ್ಲಿ ಭವ್ಯ ಶ್ರೀರಾಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಕೇಸರಿ ಶಾಲು ಧರಿಸಿದ್ದ ಯುವಪಡೆ ಜೈ ಶ್ರೀರಾಮ್ ಘೋಷಣೆ ಮೊಳಗಿಸಿದರು ಹಾಗೂ ಸೆಲ್ಫಿ  ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು. ಮಧ್ಯಾಹ್ನ ಸಹಸ್ರಾರು ಜನರಿಗೆ ಅನ್ನಸಂತರ್ಪಣೆ, ಸಂಜೆ ವೈಭವದ ದೀಪೋತ್ಸವ ನಡೆಯಿತು.
 ----