ದಾವಣಗೆರೆ : ನಗರದ ಎಂ.ಸಿ.ಸಿ. ‘ಬಿ’ ಬ್ಲಾಕ್‌ನಲ್ಲಿರುವ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಾಲಯವು ಏಕ ವ್ಯಕ್ತಿಯ ಸುಪರ್ದಿಯಲ್ಲಿದ್ದು ಭಕ್ತರಿಂದ ಬಂದ ಹಣದ ದುರುಪಯೋಗವಾಗುತ್ತಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಉಪ ವಿಭಾಗಾಧಿಕಾರಿ ಸಂತೋಷ್ ಪಾಟೀಲ್ ನೇತೃತ್ವದ ತಂಡವು ಮಂಗಳವಾರ ದೇವಸ್ಥಾನಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ದೇವಸ್ಥಾನದ ವಿಚಾರವಾಗಿ ಸಾರ್ವಜನಿಕ ಅಭಿವೃದ್ಧಿ ಸಮಿತಿ ವತಿಯಿಂದ ಧಾರ್ಮಿಕ ದತ್ತಿ ಇಲಾಖೆಗೆ ದೂರು ನೀಡಲಾಗಿತ್ತು. ಅದನ್ನು ಆಧರಿಸಿ ಇಲಾಖೆಯ ಆಯುಕ್ತರು ದಾವಣಗೆರೆ ಜಿಲ್ಲಾಧಿಕಾರಿಗೆ ಪತ್ರ ಬರೆದು, ವರದಿ ಸಲ್ಲಿಸುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ಅಧಿಕಾರಿಗಳ ತಂಡ ಭೇಟಿ ನೀಡಿತ್ತು. ಪರಿಶೀಲನೆಯ ನಂತರ ಉಪ ವಿಭಾಗಾಧಿಕಾರಿ ಸಂತೋಷ್ ಪಾಟೀಲ್ ಸುದ್ದಿಗಾರರೊಂದಿಗೆ ಮಾತನಾಡಿ, ದಾಖಲಾತಿಗಳನ್ನು ಪರಿಶೀಲನೆ ಮಾಡುತ್ತಿದ್ದೇವೆ. ದೇವಸ್ಥಾನದ ಜಾಗ ಎಷ್ಟಿದೆ, ದಾಖಲಾತಿಗಳು ಯಾರ ಹೆಸರಿನಲ್ಲಿವೆ ಇತ್ಯಾದಿ ಮಾಹಿತಿಯನ್ನು ಪಡೆಯುತ್ತಿದ್ದೇವೆ. ಪರಿಶೀಲನೆಯ ನಂತರ ಒಂದು ಅಭಿಪ್ರಾಯಕ್ಕೆ ಬರಲಾಗುವುದು ಎಂದು ತಿಳಿಸಿದರು. ಕನ್ನಡಪರ ಹೋರಾಟಗಾರ ಕೆ.ಟಿ. ಗೋಪಾಲಗೌಡ ಮಾತನಾಡಿ, ಏಕ ವ್ಯಕ್ತಿಯ ಆಡಳಿತದಲ್ಲಿರುವ ದೇವಸ್ಥಾನವನ್ನು ಮುಜರಾಯಿ ಇಲಾಖೆಗೆ ಸೇರಿಸಿ ಸಮಿತಿ ರಚಿಸಬೇಕು. ಚಿಕ್ಕ ತಿರುಪತಿಯ ರೀತಿಯಲ್ಲಿ ದೇವಾಲಯವನ್ನು ಅಭಿವೃದ್ಧಿಪಡಿಸಬೇಕು ಎಂದು ಆಗ್ರಹಿಸಿದರು. ಸಾಮಾಜಿಕ ಕಾರ್ಯಕರ್ತ ಎಂ.ಜಿ. ಶ್ರೀಕಾಂತ್ ಮಾತನಾಡಿ, ದೇವಸ್ಥಾನಕ್ಕೆ ಬಂದಿರುವುದು ಸಾರ್ವಜನಿಕರ ಹಣವಾಗಿದ್ದು ಅದು ಸದ್ಬಳಕೆಯಾಗಬೇಕು. ಸಾರ್ವಜನಿಕರಿಗೆ ದೇವಾಲಯದಲ್ಲಿ ಮುಕ್ತ ಪ್ರವೇಶ ಇರಬೇಕು ಎಂದು ಒತ್ತಾಯಿಸಿದರು. ... * ದೂರಿನಲ್ಲೇನಿದೆ? ‘ಶ್ರೀ ವೈಷ್ಣವ ಸಭಾ’ ಎಂಬ ಹೆಸರಿನಡಿ ಹಾಸ್ಟೆಲ್ ನಿರ್ಮಿಸುವ ಉದ್ದೇಶದಿಂದ 80*100 ಅಡಿ ವಿಸ್ತೀರ್ಣದ ನಾಗರಿಕ ಸೇವಾ ನಿವೇಶನವನ್ನು ಸರ್ಕಾರದಿಂದ ಮಂಜೂರು ಮಾಡಲಾಗಿತ್ತು. ಆ ಜಾಗದಲ್ಲಿ ದೇವಸ್ಥಾನವನ್ನು ನಿರ್ಮಿಸಲಾಯಿತು. ಸರ್ಕಾರದಿಂದ ಮಂಜೂರಾದ ನಿವೇಶನವನ್ನು ಸ್ವಂತ ಜಾಗ ಎನ್ನುವಂತೆ ಸಾರ್ವಜನಿಕರಲ್ಲಿ ಬಿಂಬಿಸಿ ಭಕ್ತರಿಗೆ ವಂಚನೆ ಮಾಡಲಾಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ. ಸರ್ಕಾರಿ ನಿವೇಶನ ಆಗಿರುವುದರಿಂದ ದೇವಾಲಯವನ್ನು ಸರ್ಕಾರದ ಸುಪರ್ದಿಗೆ ತೆಗೆದುಕೊಂಡು, ಸಮಿತಿಯೊಂದನ್ನು ರಚಿಸಿ, ಭಕ್ತರಿಂದ ವಂಚಿಸಿ ಪಡೆದ ಲಕ್ಷಾಂತರ ರೂ. ಹಣವನ್ನು ದೇವಾಲಯದ ಅಭಿವೃದ್ಧಿಗೆ ಬಳಸಬೇಕು ಎಂದು ದೂರುದಾರರು ಮನವಿ ಮಾಡಿದ್ದರು. ದೇವಸ್ಥಾನದ ಆಡಳಿತವು 33 ವರ್ಷಗಳಿಂದ ನಡೆದುಕೊಂಡು ಬಂದಿದೆ. ಈ ಹಿಂದೆ ನರಸಿಂಹ ಅಯ್ಯಂಗಾರ್ ಎಂಬುವರು ಗೌರವ ಕಾರ್ಯದರ್ಶಿಯಾಗಿದ್ದರು. ಅವರ ನಂತರ ಅವರ ಪುತ್ರ ಎಂ.ಎನ್. ರಾಮ್ ಮೋಹನ್ ಅವರೊಬ್ಬರೇ ದೇವಸ್ಥಾನದ ಆಡಳಿತ ನಡೆಸುತ್ತಿದ್ದಾರೆ ಎಂದು ದೂರಲಾಗಿದೆ.