ಜಿಲ್ಲೆ

ಸಮ ಸಮಾಜ ನಿರ್ಮಾಣ ಪ್ರಸ್ತುತ ಅಗತ್ಯ

ರಮೇಶ ಜಹಗೀರದಾರ್

ದಾವಣಗೆರೆ : ಭಕ್ತಿ ಭಂಡಾರಿ ಬಸವಣ್ಣ ಅವರು ನುಡಿದಂತೆ ಸಮ ಸಮಾಜದ ನಿರ್ಮಾಣ ಪ್ರಸ್ತುತ ಸಂದರ್ಭಕ್ಕೆ ಅಗತ್ಯವಿದೆ ಎಂದು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.  ತಾಲೂಕಿನ ಕಕ್ಕರಗೊಳ್ಳ ಗ್ರಾಮದಲ್ಲಿ ಬುಧವಾರ ನಡೆದ ಗ್ರಾಮದೇವತೆ ಊರಮ್ಮದೇವಿಯ ದೇವಸ್ಥಾನದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.  ಬಸವಣ್ಣ ನುಡಿದಂತೆ ನಾವೆಲ್ಲರೂ ಬಹಿರಂಗ ಶುದ್ಧಿಯ ಜತೆಗೆ ಅಂತರಂಗದ ಶುದ್ಧಿ ಮಾಡಿಕೊಳ್ಳಬೇಕು. ಸಮಾಜದಲ್ಲಿ ಸಮಾನತೆ, ಭ್ರಾತೃತ್ವ, ಶಾಂತಿ, ನೆಮ್ಮದಿಯ ಸಂದೇಶವನ್ನು 12ನೇ ಶತಮಾನದಲ್ಲಿ ಬಸವಣ್ಣ ಹೇಳಿದ್ದರು ಎಂದು ತಿಳಿಸಿದರು.  ಅನುಭವ ಮಂಟಪದಲ್ಲಿ ಯಾವುದೇ ಜಾತಿ ಭೇದವಿಲ್ಲದೇ ಸರ್ವರನ್ನು ಸಮಾನವಾಗಿ ಕಂಡ ಸಂಸತ್ತು ಇತ್ತು. ನಂತರ ಅಂಬೇಡ್ಕರ್ ಅವರು ಸಂವಿಧಾನ ರಚಿಸುವ ಮೂಲಕ ಎಲ್ಲರಿಗೂ ಸಮಾನತೆ ಪ್ರತಿಪಾದಿಸಿದರು ಎಂದರು.  ಊರಮ್ಮದೇವಿ ಜಾತ್ರೆಯಲ್ಲಿ ಈ ಹಿಂದೆ ನಾಟಕ ಪ್ರದರ್ಶನ ಮಾಡಲಾಗುತ್ತಿತ್ತು. ಈಗ ಮೊಬೈಲ್ಗಳು ಬಂದು ನಮ್ಮ ಸಂಸ್ಕೃತಿ ಮರೆಯಾಗುತ್ತಿದೆ. ನಮ್ಮ ಬಾಲ್ಯದ ಸಮಯ ಸುವರ್ಣ ಯುಗವಾಗಿತ್ತು ಎಂದು ಆ ದಿನಗಳನ್ನು ಮೆಲುಕು ಹಾಕಿದರು.  ಗ್ರಾಮೀಣ ಭಾಗದಲ್ಲಿ ಸೌಲಭ್ಯಗಳು ಸರಿಯಾಗಿ ದೊರೆಯಬೇಕಿದೆ. ಜಲಜೀವನ್ ಮಿಷನ್ ಮೂಲಕ ಕುಡಿಯುವ ನೀರಿನ ತೊಂದರೆ ಆಗದಂತೆ ಸೌಲಭ್ಯ ಒದಗಿಸಲಾಗಿದೆ. ಮುಂದಿನ ದಿನಗಳಲ್ಲಿ ಕಕ್ಕರಗೊಳ್ಳ ಗ್ರಾಮದಲ್ಲಿಯೂ ಈ ಸೌಲಭ್ಯ ಒದಗಿಸಲು ಕ್ರಿಯಾಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.  ಎಸ್‌ಎಸ್ ಕೇರ್ ಟ್ರಸ್ಟ್ ಮೂಲಕ ಕಕ್ಕರಗೊಳ್ಳ ಗ್ರಾಮದಲ್ಲಿ ಹಲವಾರು ಉಚಿತ ಆರೋಗ್ಯ ಸೇವೆ ಒದಗಿಸಲಾಗಿದೆ. ಟ್ರಸ್ಟ್ನಿಂದ ಮೂರು ಉಚಿತ ಸೇವೆಗಳನ್ನು ನೀಡಲಾಗುತ್ತಿದೆ. ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವವರಿಗೆ ಈಗಾಗಲೇ 600 ಕ್ಕೂ ಹೆಚ್ಚು ಡಯಾಲಿಸಿಸ್ ಮಾಡಲಾಗಿದೆ. 15 ರಿಂದ 20 ಲಕ್ಷ ಇದಕ್ಕಾಗಿ ಮೀಸಲಿಡಲಾಗಿದೆ ಎಂದು ತಿಳಿಸಿದರು.  ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆ ಮಾಡಲಾಗುತ್ತಿದೆ. ಕಳೆದ ಆರು ವರ್ಷದಿಂದ ಈ ಎಲ್ಲ ಸೇವೆ ಒದಗಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ದಾವಣಗೆರೆ ಜಿಲ್ಲೆಯಾದ್ಯಂತ ವಿಸ್ತರಿಸಲಾಗುತ್ತಿದೆ. ಕಕ್ಕರಗೊಳ್ಳ ಹಾಗೂ ಅರಸಾಪುರ ಗ್ರಾಮ ದತ್ತು ಪಡೆದು ವಾರದಲ್ಲಿ ಐದು ದಿನ ವೈದ್ಯರು ಆಗಮಿಸಿ ತಪಾಸಣೆ ಮಾಡುತ್ತಿದ್ದಾರೆ ಎಂದು ಹೇಳಿದರು.  ಮೊದಲೆಲ್ಲ ಗ್ರಾಮೀಣ ಭಾಗದಲ್ಲಿ ಕೂಡು ಕುಟುಂಬದ ಕಲ್ಪನೆ ಇತ್ತು. ನಾನೂ ಕೂಡ ಒಟ್ಟು ಕುಟುಂಬದಲ್ಲಿ ಬೆಳೆದು ಶಾಮನೂರು ಕುಟುಂಬದ ಸೊಸೆಯಾಗಿದ್ದೇನೆ. ನನ್ನ ತವರು ಮನೆ ಹಾಗೂ ಪತಿಯ ಮನೆ ಎರಡರಲ್ಲೂ ನನಗೆ ಸಹಕಾರ, ಪ್ರೀತಿ, ವಿಶ್ವಾಸ ಹಾಗೂ ಬೆಂಬಲ ದೊರೆತಿದೆ ಎಂದರು.  ಸ್ವ ಸಹಾಯ ಸಂಘಕ್ಕೆ ಬರುವ ಅನುದಾನವನ್ನು ಗ್ರಾಮದ ಮಹಿಳೆಯರು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕು ಹಾಗೂ ಆರ್ಥಿಕವಾಗಿ ಸದೃಢರಾಗಬೇಕು ಎಂದು ಸಲಹೆ ನೀಡಿದರು.  ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಗ್ರಾಮದ ಮುಖಂಡರಾದ ಕೆ.ಜಿ. ಬಸವನಗೌಡ್ರು, ದಾವಣಗೆರೆ ವಿವಿ ಕುಲಪತಿ ಪ್ರೊ.ಬಿ.ಡಿ. ಕುಂಬಾರ್, ಮುಖಂಡರಾದ ಸಿದ್ದಪ್ಪ, ಎನ್.ಜಿ. ಪುಟ್ಟಸ್ವಾಮಿ  ಸೇರಿದಂತೆ ಕಕ್ಕರಗೊಳ್ಳ ಗ್ರಾಮಸ್ಥರು ಇದ್ದರು. ಇದೇ ವೇಳೆ  ಗ್ರಾಮದಲ್ಲಿ ಸಂಸದರ ಅನುದಾನದಲ್ಲಿ ನೂತನ ಬಸ್ ನಿಲ್ದಾಣ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಾಯಿತು.