ದಾವಣಗೆರೆ : ಭಗವಂತನಲ್ಲಿ ಭಕ್ತಿ ಮಾಡಬೇಕಾದರೆ ಚಂಚಲತೆ ಇಲ್ಲದ, ಏಕಾಗ್ರತೆಯುಳ್ಳ ಮನಸ್ಸು ಅಗತ್ಯ ಎಂದು ಹಿರಿಯ ಪತ್ರಕರ್ತ ಡಾ. ಎಚ್.ಬಿ. ಮಂಜುನಾಥ ಹೇಳಿದರು. ನಗರದ ಜಯದೇವ ವೃತ್ತದಲ್ಲಿರುವ ಶ್ರೀ ಶಿವಾನಂದ ತೀರ್ಥ ಗುರು ಅಧ್ಯಾತ್ಮ ಮಂದಿರದಲ್ಲಿ ನೆರವೇರಿದ, ಶ್ರೀ ದತ್ತಾತ್ರೇಯ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಬ್ರಹ್ಮ, ವಿಷ್ಣು, ಶಿವ ಎಂದರೆ ಸೃಷ್ಟಿ, ಸ್ಥಿತಿ, ಲಯಗಳ ಸಮ್ಮಿಲನವಾಗಿರುವ ದತ್ತಾತ್ರೇಯರ ಸಂಕೇತವೆಂದರೆ, ಸುಜ್ಞಾನವು ನಮ್ಮ ಚಿತ್ತದಲ್ಲಿ ಸದಾ ಸೃಷ್ಟಿಯಾಗುತ್ತಿರಬೇಕು. ಇದು ಬ್ರಹ್ಮ ಮುಖದ ಸಂಕೇತ. ಅಂತಹ ಸುಜ್ಞಾನವು ನಮ್ಮ ಚಿತ್ತದಲ್ಲಿ ಸದಾ ಉಳಿದಿರಬೇಕು ಇದು ವಿಷ್ಣು ಮುಖದ ಸಂಕೇತ. ಅಜ್ಞಾನ, ಅಸಂಬದ್ಧ ವಿಚಾರಗಳು ನಾಶವಾಗಬೇಕು ಇದು ಶಿವ ಮುಖದ ಸಂಕೇತವಾಗಿದೆ ಎಂದರು. ಚಿಂತಕ ಜಗನ್ನಾಥ ನಾಡಿಗೇರ್ ಮಾತನಾಡಿ, ಅಸೂಯೆ ಇಲ್ಲದವರಿಗೆ ದೇವರು ಒಲಿಯುತ್ತಾರೆ ಎನ್ನುವುದೇ ಅನಸೂಯಾ ಅತ್ರಿಯರಿಗೆ ದತ್ತಾತ್ರೇಯರು ಮಗನಾಗಿ ಬಂದುದರ ಸಂದೇಶವಾಗಿದೆ. ಇಂತಹ ಏಕೀಕೃತ ಬಹು ದೇವತಾ ಉಪಾಸನೆ ನಮ್ಮ ಸನಾತನ ಚಿಂತನೆಯ ವಿಶೇಷತೆಯಾಗಿದೆ ಎಂದು ತಿಳಿಸಿದರು. ರಾಜನಹಳ್ಳಿ ಹರಿಹರಪ್ಪ ಟ್ರಸ್ಟ್ ಹಾಗೂ ಭಕ್ತ ವೃಂದದವರಿಂದ ಕಾಕಡಾರತಿ, ಶ್ರೀ ಗಣಪತಿ, ಶ್ರೀ ವೀರಾಂಜನೇಯ ಪೂಜೆ, ಶ್ರೀ ದತ್ತಾತ್ರೇಯ ಮೂರ್ತಿ ಹಾಗೂ ಶ್ರೀ ಗುರುಗಳ ಪಾದುಕೆಗೆ ಏಕಾದಶವರ್ತನ ರುದ್ರಾಭಿಷೇಕ ನೆರವೇರಿತು. ಆರ್.ಜಿ. ನಾಗೇಂದ್ರ ಪ್ರಸಾದ್, ಆರ್.ಎಚ್. ಶ್ರೀಧರ ಶ್ರೇಷ್ಠಿ, ಟ್ರಸ್ಟಿನ ಹಾಗೂ ಅಧ್ಯಾತ್ಮ ಮಂದಿರದ ಪ್ರಮುಖರು ಇದ್ದರು. ದತ್ತಾತ್ರೇಯ ಮೂರ್ತಿಗೆ ಹೂವಿನ ಅಲಂಕಾರ ಸೇವೆಯನ್ನು ಡಾ. ಜಾಧವ್ ಕುಟುಂಬ ವರ್ಗದವರು ಮಾಡಿದ್ದರು. ಅಷ್ಟಾವಧಾನ, ಮಹಾ ಮಂಗಳಾರತಿ ನಂತರ ಅನ್ನ ಸಂತರ್ಪಣೆಯೂ ಏರ್ಪಾಡಾಗಿತ್ತು.