ಜಿಲ್ಲೆ

ಕಾಪುವಿನಲ್ಲಿ ಶ್ರೀ ಮಾರಿಯಮ್ಮ ಶಿಲಾ ದೇಗುಲ ನಿರ್ಮಾಣ

ರಮೇಶ ಜಹಗೀರದಾರ್

ದಾವಣಗೆರೆ : ಉಡುಪಿ ಜಿಲ್ಲೆಯ ಕಾಪುವಿನಲ್ಲಿ ಅಂದಾಜು 99 ಕೋಟಿ ರೂ. ವೆಚ್ಚದಲ್ಲಿ ಶ್ರೀ ಮಾರಿಯಮ್ಮ ಶಿಲಾ ದೇಗುಲ ನಿರ್ಮಾಣಕ್ಕೆ ಮಾಸ್ಟರ್ ಪ್ಲಾನ್ ರೂಪಿಸಲಾಗಿದೆ ಎಂದು ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ವಾಸುದೇವ ಶೆಟ್ಟಿ ಹೇಳಿದರು.  ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ನಡೆಯಲಿರುವ ಬ್ರಹ್ಮಕಲಶೋತ್ಸವ ಹಾಗೂ ನವದುರ್ಗಾ ಲೇಖನ ಯಜ್ಞ ಪ್ರಯುಕ್ತ ನಗರದ ಬಂಟರ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲಾ ಸಮಿತಿ ರಚನೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.  ಪ್ರಥಮ ಹಂತದಲ್ಲಿ ಸುಮಾರು 30 ಕೋಟಿ ರೂ. ವೆಚ್ಚದಲ್ಲಿ ಮಾರಿಯಮ್ಮನ ಗರ್ಭಗುಡಿಯನ್ನು ಕುಂಕುಮ ವರ್ಣದ ಶಿಲೆಯಿಂದ ನಿರ್ಮಿಸಲಾಗುತ್ತಿದ್ದು, ಶೇ.80 ರಷ್ಟು ಕೆಲಸ ನಡೆದಿದೆ ಎಂದು ತಿಳಿಸಿದರು.  ಶ್ರೀ ಮಾರಿಯಮ್ಮ ದೇವಿಯು ನೆಲೆಸಿರುವ ಕಾಪು ಒಂದು ಪವಾಡ ಕ್ಷೇತ್ರವಾಗಿದೆ. ವಿಶ್ವಾದ್ಯಂತ ದೇವಿಯ ಭಕ್ತರು ನೆಲೆಸಿದ್ದು, ಸರ್ಕಾರಿ ಧಾರ್ಮಿಕ ದತ್ತಿ ಇಲಾಖೆಯ ‘ಎ’ ಗ್ರೇಡ್ ದೇಗುಲವನ್ನು,   ದೇವಸ್ಥಾನ ಹಾಗೂ ಭಕ್ತರ ಹಣದಿಂದ ನಿರ್ಮಿಸಲಾಗುತ್ತಿದೆ. ದೇಶದ ವಿವಿಧ ನಗರಗಳು ಸೇರಿ 18 ದೇಶಗಳಲ್ಲಿ ಸಮಿತಿ ರಚಿಸಲಾಗಿದೆ ಎಂದರು.  ರಜತ ಗದ್ದುಗೆಯಲ್ಲಿರುವ ಅಮ್ಮನನ್ನು ಸ್ವರ್ಣ ಗದ್ದುಗೆಯಲ್ಲಿ ಪ್ರತಿಷ್ಠಾಪಿಸುವ ಸಂಕಲ್ಪ ಮಾಡಿದ್ದು, ಇದಕ್ಕಾಗಿ ಕೇವಲ ಎರಡೂವರೆ ತಿಂಗಳಲ್ಲಿ 7.5 ಕೆಜಿ ಚಿನ್ನವನ್ನು ಭಕ್ತರು ನೀಡಿದ್ದಾರೆ. ಭಕ್ತರ ಮನವಿ ಮೇರೆಗೆ ಬಂಗಾರ ಸಮರ್ಪಿಸುವ ಅವಧಿಯನ್ನು ಅ.15ರ ವರೆಗೆ ವಿಸ್ತರಿಸಲಾಗಿದೆ ಎಂದು ಹೇಳಿದರು.  ಅ.29 ರಂದು ವಾಗೀಶ್ವರಿ ಪೂಜೆಯೊಂದಿಗೆ ಉಡುಪಿ ಪೇಜಾವರ ಸ್ವಾಮೀಜಿ ಹಾಗೂ ಎಂಟು ಜನರು ನವದುರ್ಗಾ ಲೇಖನ ಯಜ್ಞ ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಬರುವ 2025ರ ಮಾರ್ಚ್ ನಲ್ಲಿ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು.  ಕಾಪು ದೇವಸ್ಥಾನ ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ, ಶಾಸಕ ಸುರೇಶ್ ಶೆಟ್ಟಿ ಮಾತನಾಡಿ, ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳ, ಕಟೀಲು, ಕೊಲ್ಲೂರು, ಮುರುಡೇಶ್ವರದಂತೆ ಕಾಪು ಒಂದು ಪ್ರಸಿದ್ಧ ಕ್ಷೇತ್ರ ಆಗಬೇಕು. ಇಲ್ಲಿಗೆ ಬರುವ ಭಕ್ತರಿಗೆ ಸಕಲ ಸವಲತ್ತು ಒದಗಿಸಬೇಕು ಎಂಬ ಚಿಂತನೆಯಿದೆ ಎಂದು ತಿಳಿಸಿದರು.  ಮಹಾನಗರ ಪಾಲಿಕೆ ಮೇಯರ್ ಕೆ.ಚಮನ್‌ಸಾಬ್, ನವದುರ್ಗಾ ಲೇಖನ ಯಜ್ಞ ಸಮಿತಿ ಕಾರ್ಯಾಧ್ಯಕ್ಷ ಉದಯ್‌ಕುಮಾರ್ ಮುನಿಯಾಲು ಮಾತನಾಡಿದರು. ಉಪ ಮೇಯರ್ ಸೋಗಿ ಶಾಂತ್‌ಕುಮಾರ್, ನವದುರ್ಗಾ ಲೇಖನ ಸಮಿತಿ ಅಧ್ಯಕ್ಷ, ಮಾಜಿ ಶಾಸಕ ಕೆ.ರಘುಪತಿ ಭಟ್, ಕಾರ್ಯಾಧ್ಯಕ್ಷ ಯೋಗೀಶ್ ಶ್ರೀ ಶೆಟ್ಟಿ,  ಕೋಶಾಧಿಕಾರಿ ಕೆ.ವಿಶ್ವನಾಥ್, ಸಂಚಾಲಕ ಸುವರ್ಧನ್, ಅರುಣ್ ಶೆಟ್ಟಿ, ಪ್ರಚಾರ ಸಮಿತಿ ಸಂಚಾಲಕ ರಘುರಾಮ ಶೆಟ್ಟಿ, ಬಂಟರ ಸಂಘದ ಕಾರ್ಯದರ್ಶಿ ಉಮೇಶ್ ಶೆಟ್ಟಿ, ಬಿ.ಚಿದಾನಂದಪ್ಪ, ಮೋತಿ ಪರಮೇಶ್ವರರಾವ್, ಬ್ರಾಹ್ಮಣ ಸಂಘದ ಅಧ್ಯಕ್ಷ ಶಶಿಕಾಂತ್ ಭಟ್, ಆನಂದಪ್ಪ, ಲಯನ್ಸ್ ಕ್ಲಬ್ ಅಧ್ಯಕ್ಷ ಉಳುವಯ್ಯ ಇತರರು ಇದ್ದರು. ದೂಡಾ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ ಸ್ವಾಗತಿಸಿದರು, ಲತಿಕಾ ದಿನೇಶ್ ಶೆಟ್ಟಿ ನಿರೂಪಿಸಿದರು.