ಜಿಲ್ಲೆ

ಶಿಕ್ಷಣ, ಸಾಹಿತ್ಯದ ನಡುವೆ ಅವಿನಾಭಾವ ಸಂಬಂಧ

ರಮೇಶ ಜಹಗೀರದಾರ್

ದಾವಣಗೆರೆ : ಶಿಕ್ಷಣ ಮತ್ತು ಸಾಹಿತ್ಯದ ನಡುವೆ ಅವಿನಾಭಾವ ಸಂಬಂಧವಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ. ವಾಮದೇವಪ್ಪ ಹೇಳಿದರು.  ಶಿಕ್ಷಣ ತಜ್ಞ ಡಾ. ಎಚ್.ವಿ. ವಾಮದೇವಪ್ಪ ಚಾರಿಟಬಲ್ ಮತ್ತು ಎಜುಕೇಶನಲ್ ಟ್ರಸ್ಟ್ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ನಗರದ ಕುವೆಂಪು ಕನ್ನಡ ಭವನದಲ್ಲಿ ಶನಿವಾರ ಆಯೋಜಿಸಿದ್ದ, ಗುರುಚೇತನ ಹಾಗೂ ಗುರುಶ್ರೇಷ್ಠ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.  ಅನಕ್ಷರಸ್ಥರಿಂದ ಬಂದಿದ್ದು ಜಾನಪದ ಸಾಹಿತ್ಯವಾದರೆ ಶಿಕ್ಷಣ ತಜ್ಞರು ಶಿಷ್ಟ ಸಾಹಿತ್ಯಕ್ಕೆ ಕೊಡುಗೆ ನೀಡಿದ್ದಾರೆ. ಇಂಥವರ ಸೇವೆಯನ್ನು ಸಮಾಜ ಗುರುತಿಸಬೇಕು. ಅಂಥ ಉತ್ತಮ ಕೆಲಸವನ್ನು ಡಾ. ಎಚ್.ವಿ. ವಾಮದೇವಪ್ಪ ಚಾರಿಟಬಲ್ ಮತ್ತು ಎಜುಕೇಶನಲ್ ಟ್ರಸ್ಟ್ ಮಾಡುತ್ತಿದೆ. ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತು ಕೂಡಾ ಇಂಥ ಕಾರ್ಯಗಳಿಗೆ ಬೆಂಬಲಿಸುತ್ತದೆ ಎಂದು ಹೇಳಿದರು.  ಟ್ರಸ್ಟ್‌ನ ಠೇವಣಿಯ ಬಡ್ಡಿ ಹಣದಲ್ಲಿ ಈ ರೀತಿಯ ಸಮಾಜಮುಖಿ ಚಟುವಟಿಕೆಗಳು ನಿರಂತರವಾಗಿ ನಡೆಯಬೇಕು ಎಂದು ಸಲಹೆ ನೀಡಿದರು.  ಶಿಕ್ಷಣ ತಜ್ಞ ಡಾ.ಕೆ.ಎಸ್. ಅನಿಲ್ ಕುಮಾರ್ ಮಾತನಾಡಿ, ಸಾಧನೆಯ ದಾರಿಯಲ್ಲಿ ಸಾಗುವಾಗ ಸ್ಪಷ್ಟವಾದ ಗುರಿ ಇರಬೇಕು. ಈ ಟ್ರಸ್ಟ್ ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಿ ಅವರಲ್ಲಿ ಅಂಥ ಗುರಿಯನ್ನು ಮೂಡಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.  ಡಾ.ಎಚ್.ವಿ ವಾಮದೇವಪ್ಪ ಅವರು ವಿದ್ಯಾರ್ಥಿಗಳಿಂದ ಅಪಾರ ಪ್ರೀತಿ ಗಳಿಸುವ ಮೂಲಕ ಈ ಭಾಗದ ರಾಧಾಕೃಷ್ಣನ್ ಆಗಿ ಹೊರಹೊಮ್ಮಿದ್ದಾರೆ ಎಂದು ಬಣ್ಣಿಸಿದರು.  ನಿವೃತ್ತ ಪ್ರಾಚಾರ್ಯ ಡಾ.ಎಚ್. ಮುದ್ದುಮಲ್ಲೇಶ ಮಾತನಾಡಿ, ಪ್ರಶಸ್ತಿ ಪಡೆಯಲು ಅರ್ಜಿ ಸಲ್ಲಿಸಬೇಕಾದ ಈ ದಿನಮಾನಗಳಲ್ಲಿ ನಿಜವಾದ ಪ್ರತಿಭೆ ಹಾಗೂ ಸಾಧನೆಯನ್ನು ಗುರುತಿಸುವ ಕಾರ್ಯವನ್ನು ಈ ಟ್ರಸ್ಟ್ ಮಾಡುತ್ತಿದೆ ಎಂದು ಶ್ಲಾಘಿಸಿದರು.  ‘ಗುರುಚೇತನ’ ಪ್ರಶಸ್ತಿ ಸ್ವೀಕರಿಸಿದ ಹಿರಿಯ ಉಪನ್ಯಾಸಕ ಡಾ.ಜಿ.ವಿ. ಹರಿಪ್ರಸಾದ್ ಮಾತನಾಡಿ, ಈ ರೀತಿಯ ಪ್ರಶಸ್ತಿಗಳು ‘ದಾರಿಬುತ್ತಿ’ ಇದ್ದಂತೆ. ಇದರಿಂದ ನಮ್ಮ ಜವಾಬ್ದಾರಿಯೂ ಹೆಚ್ಚಾಗುತ್ತದೆ. ನಮ್ಮಲ್ಲಿ ನಾವು ಬದಲಾವಣೆ ಕಂಡುಕೊಳ್ಳುವ ಮೂಲಕ ಬೆಳೆಯಬೇಕು ಎಂದು ಕಿವಿಮಾತು ಹೇಳಿದರು.  ‘ಗುರುಶ್ರೇಷ್ಠ’ ಪ್ರಶಸ್ತಿ ಪಡೆದ ಸಹಶಿಕ್ಷಕ ಎಂ. ರಮೇಶ್ ಮಾತನಾಡಿ, ಬದುಕಿನಲ್ಲಿ ಆದರ್ಶಗಳನ್ನು ಅನುಸರಿಸಬೇಕು, ನಮ್ಮತನವನ್ನು ಬಿಡಬಾರದು ಎಂದು ಹೇಳಿದರು. ಗುರುಗಳು ತಮ್ಮ ವ್ಯಕ್ತಿತ್ವವನ್ನು ಹೇಗೆ ರೂಪಿಸಿದರು ಎಂದು ವಿವರಿಸಿದರು. ಇದೇ ವೇಳೆ ಪಿಎಚ್.ಡಿ ಪದವೀಧರರನ್ನು ಸನ್ಮಾನಿಸಲಾಯಿತು.  ಸಿರಿಗೆರೆ ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಡಾ.ಎಚ್.ವಿ. ವಾಮದೇವಪ್ಪ, ಟ್ರಸ್ಟ್‌ನ ಅಧ್ಯಕ್ಷ ಪ್ರೊ. ಎಚ್.ಎಸ್. ಶಾಂತವೀರಪ್ಪ, ಕಾರ್ಯದರ್ಶಿ ಬಸವರಾಜ್ ಸೋಮನಹಳ್ಳಿ, ನಿರ್ದೇಶಕರಾದ ಡಾ.ಎನ್.ಟಿ. ಮರುಳಸಿದ್ದಪ್ಪ, ಡಾ. ಶಿವರಾಜ ಕಬ್ಬೂರ ಇದ್ದರು. ಪ್ರಶಿಕ್ಷಣಾರ್ಥಿ ಎಂ. ಗಾಯತ್ರಿ ನಿರೂಪಿಸಿದರು.