ದಾವಣಗೆರೆ : ಕಾಲೇಜಿನಲ್ಲಿ ಕನ್ನಡದ ಕಂಪು ಅರಳಿಸಿದ ಮೇಷ್ಟ್ರು ಇವರು. ಶಿಕ್ಷಣ ಕ್ಷೇತ್ರದ ಜತೆಗೆ ಸಾಹಿತ್ಯ, ಜಾನಪದ, ರಂಗಭೂಮಿಯ ನಂಟು ಬೆಳೆಸಿಕೊಂಡು ದಾವಣಗೆರೆಯ ಸಾಂಸ್ಕೃತಿಕ ವಲಯದಲ್ಲಿ ದೊಡ್ಡ ಹೆಸರು ಮಾಡಿದವರು ಡಾ. ಎಂ.ಜಿ. ಈಶ್ವರಪ್ಪ.
ಶಿವಮೊಗ್ಗ ಸಮೀಪದ, ಮಲೆನಾಡಿನ ಸೆರಗಿನ ಹಾಡೋನಹಳ್ಳಿಯಲ್ಲಿ ಕೃಷಿಕ ಮನೆತನದಲ್ಲಿ ಜನಿಸಿದ ಈಶ್ವರಪ್ಪ ಅವರು ಬದುಕು ಕಟ್ಟಿಕೊಂಡಿದ್ದು ವಾಣಿಜ್ಯ ನಗರಿ ದಾವಣಗೆರೆಯಲ್ಲಿ. ಅವರ ಸಾಂಸ್ಕೃತಿಕ ವ್ಯಕ್ತಿತ್ವ ನಾಡಿಗೆ ಪರಿಚಯವಾಗಿದ್ದೂ ಇಲ್ಲಿಂದಲೇ.
ಡಿಆರ್‌ಎಂ ಕಾಲೇಜಿನ ಅಧ್ಯಾಪಕರಾಗಿ, ಎಂಎಸ್‌ಬಿ ಕಾಲೇಜಿನ ಪ್ರಾಚಾರ್ಯರಾಗಿ, ಬಾಪೂಜಿ ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ಸದಸ್ಯರಾಗಿ, ವಿವಿಧ ವಿಶ್ವವಿದ್ಯಾಲಯಗಳ ಶೈಕ್ಷಣಿಕ ಸಮಿತಿಗಳ ಸದಸ್ಯರಾಗಿ ಶಿಕ್ಷಣ ಕ್ಷೇತ್ರಕ್ಕೆ ಅವರು ಸಲ್ಲಿಸಿದ ಸೇವೆ ಅಪಾರ.
ವಿದ್ಯಾರ್ಥಿ ದೆಸೆಯಿಂದಲೂ ರಂಗಭೂಮಿಯಲ್ಲಿ ಆಸಕ್ತಿ ಹೊಂದಿದ್ದ ಈಶ್ವರಪ್ಪ, ನಟನೆ ಮತ್ತು ನಿರ್ದೇಶನದಲ್ಲೂ ಸೈ ಎನಿಸಿಕೊಂಡವರು. ಅದಕ್ಕೆ ಇಂಬು ಕೊಟ್ಟಿದ್ದು ಕೇರಳದ ತ್ರಿಚೂರಿನ ಸ್ಕೂಲ್ ಆಫ್ ಡ್ರಾಮಾ ಮತ್ತು ಬಿ.ವಿ. ಕಾರಂತರ ಮಾರ್ಗದರ್ಶನದಲ್ಲಿ ಭೂಪಾಲ್ ಮತ್ತು ದೆಹಲಿಯಲ್ಲಿ ರಂಗಭೂಮಿಯ ತಲಸ್ಪರ್ಶಿ ಅಧ್ಯಯನ.
ಅದರ ಪ್ರತಿಫಲವಾಗಿ ಮೆರವಣಿಗೆ, ಸೆಜುವಾನಿನ ಸಾಧ್ವಿ, ಕೊಡೆಗಳು, ಈಡಿಪಸ್, ಸಂಕ್ರಾಂತಿ, ಸಂತೆಯಲ್ಲಿ ನಿಂತಾನ ಕಬೀರ ಮುಂತಾದ ನಾಟಕಗಳಲ್ಲಿ ಅಭಿನಯ. ಜಾತ್ರೆ, ಸಾಯೋ ಆಟ, ಅಪ್ಪ, ಕಡೇಮನೆ ಕಡೇಗಲ್ಲಿ, ಹಳ್ಳಿಚಿತ್ರ, ಹಳ್ಳಿಮೇಷ್ಟ್ರು, ಮಾರೀಚನ ಬಂಧುಗಳು, ಇಲಿಬೋನು, ನಾಗನ ಕತೆ ಮುಂತಾದ ನಾಟಕಗಳ ನಿರ್ದೇಶನ ಮಾಡಿದರು.
ದಾವಣಗೆರೆಯ ಹೆಸರಾಂತ ರಂಗ ತಂಡ ‘ಪ್ರತಿಮಾ ಸಭಾ’ದ ಉಸ್ತುವಾರಿ ವಹಿಸಿಕೊಂಡು ನಗರದಲ್ಲಿ ಹವ್ಯಾಸಿ ರಂಗಭೂಮಿಯ ಜೀವಂತಿಕೆ ಜತೆಗೆ ಪ್ರಸಿದ್ಧರ ಸಂಗೀತ ಕಛೇರಿಗಳನ್ನು ಆಯೋಜಿಸಿದರು. ಹತ್ತಾರು ಮಹತ್ವದ ಸಾಹಿತ್ಯ ಕೃತಿಗಳ ಪ್ರಕಟಣೆ ಜತೆಗೆ ಇವರ ಸಂಪಾದಕತ್ವದಲ್ಲಿ ಹಲವು ಮಹತ್ವದ ಕೃತಿಗಳು ಬೆಳಕು ಕಂಡಿವೆ. ಮ್ಯಾಸಬೇಡರ ಸಂಸ್ಕೃತಿ, ಜನಪದ ಇಬ್ಬನಿ, ಸಾಹಿತ್ಯ ಸಂಚಯ, ನಟ ಬಾಬಣ್ಣ ಮುಂತಾದ ಕೃತಿಗಳು ಇವರ ಲೇಖನಿಯಿಂದ ಮೂಡಿದ್ದವು.
ಜಿಲ್ಲಾ ಕಸಾಪದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದ ಈಶ್ವರಪ್ಪ ಅವರು ದಾವಣಗೆರೆಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ರೂವಾರಿಗಳಲ್ಲೊಬ್ಬರಾಗಿದ್ದರು.
ಸಾಣೇಹಳ್ಳಿಯ ಶಿವಕುಮಾರ ಕಲಾ ಸಂಘದ ಶಿವಕುಮಾರ ರಂಗ ಪ್ರಶಸ್ತಿ ಮತ್ತು ಡಾ. ಪಂ. ಪುಟ್ಟರಾಜ ಸೇವಾ ಸಮಿತಿಯ ರಾಜ್ಯಮಟ್ಟದ ಐದನೆಯ ಭಕ್ತಿ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಸ್ಥಾನ ಇವರಿಗೆ ಒಲಿದಿದ್ದವು. ಶಿವಮೊಗ್ಗ ತಾಲೂಕು ಸಾಹಿತ್ಯ ಸಮ್ಮೇಳನ ಮತ್ತು ದಾವಣಗೆರೆ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ಅಲಂಕರಿಸಿದ್ದರು.
...