ರಮೇಶ ಜಹಗೀರದಾರ್ : ದಾವಣಗೆರೆ ಗ್ರಾಮ ಪಂಚಾಯಿತಿಗಳ ಆದಾಯ (ಸ್ವಂತ ಸಂಪನ್ಮೂಲ) ಹೆಚ್ಚಿಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ನಡೆದ ಪ್ರಯತ್ನ ಫಲ ನೀಡಿದೆ. ಎರಡು ವರ್ಷಗಳ ಹಿಂದೆ ಮನೆ ಮನೆಗೆ ತೆರಳಿ ನಡೆಸಿದ ಸಮೀಕ್ಷೆಯಿಂದಾಗಿ ಆಸ್ತಿ ತೆರಿಗೆ ಪರಿಷ್ಕರಣೆಗೊಂಡು ಗ್ರಾ.ಪಂ.ಗಳ ಬಜೆಟ್ ಗಾತ್ರ ಹಿಗ್ಗಿದೆ. ಗ್ರಾ.ಪಂ.ಗಳಿಗೆ 2022-23 ಕ್ಕಿಂತ ಮುಂಚೆ ಜಿಲ್ಲೆಯಲ್ಲಿ ಒಟ್ಟಾರೆ ಸಂಗ್ರಹವಾಗುತ್ತಿದ್ದ ಆಸ್ತಿ ತೆರಿಗೆಯ ಮೊತ್ತ 10 ಕೋಟಿ ರೂ.ಗಳನ್ನು ದಾಟಿರಲಿಲ್ಲ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಂದ ಬರುವ ವಿವಿಧ ಅನುದಾನಗಳನ್ನೇ ಅವಲಂಬಿಸಬೇಕಿತ್ತು. ಆದಾಯದ ಮೂಲಗಳನ್ನು ಗಟ್ಟಿಗೊಳಿಸುವ ಕೆಲಸ ಆಗಿರಲಿಲ್ಲ. ಇದನ್ನು ಮನಗಂಡು 2022-23 ರಲ್ಲಿ ಗ್ರಾ.ಪಂ. ವ್ಯಾಪ್ತಿಯ ಆಸ್ತಿಗಳ ಸಮೀಕ್ಷೆ ಕಾರ್ಯ ಕೈಗೊಳ್ಳಲಾಯಿತು. ಮನೆ ಮನೆಗೆ ಭೇಟಿ ನೀಡಿ ಪರಿಶೀಲಿಸಲಾಯಿತು. ಆರ್‌ಸಿಸಿ ಕಟ್ಟಡ, ಹೆಂಚಿನ ಮನೆ, ಶೀಟ್ ಮನೆ, ಗ್ರಾನೈಟ್ ಬಳಸಿದ್ದಾರೆಯೆ ಅಥವಾ ರೆಡ್ ಆಕ್ಸೈಡ್ ಉಪಯೋಗಿಸಿದ್ದಾರೆಯೆ ಇತ್ಯಾದಿ ಅಂಶಗಳನ್ನು ದಾಖಲಿಸಲಾಯಿತು. ಅದಕ್ಕೆ ಅನುಗುಣವಾಗಿ ಆಸ್ತಿ ತೆರಿಗೆಯನ್ನು ಪರಿಷ್ಕರಿಸಲಾಯಿತು. ಸಮೀಕ್ಷೆಯ ಫಲವಾಗಿ ತೆರಿಗೆಯ ಬೇಡಿಕೆ ಮೊತ್ತ ದೊಡ್ಡದಾಯಿತು. 2023-24 ಮತ್ತು 2024-25 ನೇ ಸಾಲಿನ ಅಂಕಿ ಅಂಶಗಳನ್ನು ಗಮನಿಸಿದರೆ ತೆರಿಗೆ ಬೇಡಿಕೆ ಮತ್ತು ಸಂಗ್ರಹದಲ್ಲಿ ಆಗಿರುವ ವ್ಯತ್ಯಾಸ ತಿಳಿಯುತ್ತದೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ತೆರಿಗೆ ಸಂಗ್ರಹ ಮೊತ್ತವು ಮೂರು ಪಟ್ಟು ಹೆಚ್ಚಾಗಿದೆ. ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಖಜಾನೆಗೆ ಒಂದಿಷ್ಟು ಆದಾಯ ಹರಿದು ಬರುತ್ತಿದೆ. ಇದು ಗ್ರಾಮ ಪಂಚಾಯಿತಿಗಳ ಸಶಕ್ತೀಕರಣಕ್ಕೆ ದಾರಿ ಮಾಡಿಕೊಟ್ಟಿದೆ. ... * ಬಜೆಟ್ ರೂಪಿಸಲು ಉತ್ಸಾಹ ಆಸ್ತಿ ತೆರಿಗೆ ಹರಿದು ಬರುತ್ತಿರುವುದರಿಂದ ಗ್ರಾಮ ಪಂಚಾಯಿತಿಗಳು ವಾರ್ಷಿಕ ಬಜೆಟ್ ರೂಪಿಸಿಕೊಳ್ಳುತ್ತಿವೆ. ಬರುವ ಹಣಕಾಸು ವರ್ಷಕ್ಕೆ ಆದಾಯ ಮತ್ತು ಖರ್ಚು ಎಷ್ಟು ಮಾಡಬೇಕು ಎನ್ನುವ ಚೌಕಟ್ಟು ಹಾಕಿಕೊಳ್ಳುತ್ತಿವೆ. ಸ್ವಂತ ಸಂಪನ್ಮೂಲ ಲಭ್ಯವಿರುವುದರಿಂದ ಸ್ಥಳೀಯ ಅಗತ್ಯಗಳಿಗೆ ಅನುಗುಣವಾಗಿ ಅಭಿವೃದ್ಧಿ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಮೂಲಸೌಲಭ್ಯ, ಮಹಿಳಾ ಸಬಲೀಕರಣ, ಆರೋಗ್ಯ, ಶಿಕ್ಷಣ ಹೀಗೆ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರಲು ಪಂಚಾಯಿತಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಉತ್ಸಾಹ ತೋರಿದ್ದಾರೆ. ... (ಕೋಟ್) ಗ್ರಾಮೀಣ ಪ್ರದೇಶಗಳಲ್ಲಿ ಕೈಗೊಂಡ ಆಸ್ತಿ ಸಮೀಕ್ಷೆಯಿಂದಾಗಿ ಆಸ್ತಿ ತೆರಿಗೆಯ ಬೇಡಿಕೆಯೂ ಹೆಚ್ಚಾಗಿದೆ. ಎರಡು ವರ್ಷಗಳ ಹಿಂದೆ ಕೇವಲ 10 ಕೋಟಿಯಷ್ಟಿದ್ದ ಬೇಡಿಕೆ 34 ಕೋಟಿ ರೂ.ಗಳಿಗೆ ಏರಿಕೆಯಾಗಿರುವುದು ಸಕಾರಾತ್ಮಕ ಬೆಳವಣಿಗೆಯಾಗಿದೆ. ಇದರಿಂದ ಗ್ರಾ.ಪಂ.ಗಳ ಸಶಕ್ತೀಕರಣ ಆಗಲಿದೆ. ಸ್ವಂತ ಅನುದಾನವನ್ನು ಬಳಸಿಕೊಡು ಸ್ಥಳೀಯ ಅಗತ್ಯಕ್ಕೆ ಅನುಗುಣವಾಗಿ ಅಭಿವೃದ್ಧಿ ಕೈಗೊಳ್ಳಲು ಇದರಿಂದ ಅನುಕೂಲವಾಗಲಿದೆ. ಸುರೇಶ ಇಟ್ನಾಳ್, ಜಿ.ಪಂ. ಸಿಇಒ ಚಿತ್ರ: ಡಿವಿಜಿ ಸುರೇಶ ಇಟ್ನಾಳ್ (ಮಗ್‌ಶಾಟ್) ... (ಬಾಕ್ಸ್) ತೆರಿಗೆ ಬೇಡಿಕೆ-ಸಂಗ್ರಹ ಕಳೆದ ಮೂರು ವರ್ಷಗಳ ಆಸ್ತಿ ತೆರಿಗೆ ಬೇಡಿಕೆ ಮತ್ತು ಸಂಗ್ರಹದ ಅಂಕಿ ಅಂಶಗಳನ್ನು ಗಮನಿಸಿದರೆ ಆದಾಯ ಹೆಚ್ಚಳದ ಅಂದಾಜು ದೊರೆಯುತ್ತದೆ. 2022-2023ನೇ ಸಾಲಿನಲ್ಲಿ 9.55 ಕೋಟಿ ರೂ. ಬೇಡಿಕೆ ಇತ್ತು, 9.75 ಕೋಟಿ ರೂ. ಸಂಗ್ರಹಿಸಿ ಶೇ. 102.09 ರಷ್ಟು ಸಾಧನೆ ಮಾಡಲಾಗಿತ್ತು. ಆಸ್ತಿ ತೆರಿಗೆಯ ಬೇಡಿಕೆ 2023-24 ರಲ್ಲಿ 25.50 ಕೋಟಿಗೆ ಏರಿಕೆಯಾಯಿತು. ಆ ವರ್ಷ 10.67 ಕೋಟಿ ಸಂಗ್ರಹಿಸಲಾಯಿತು (ಶೇ. 41.86). 2024-25ನೇ ಸಾಲಿನಲ್ಲಿ ಬೇಡಿಕೆ 34.41 ಕೋಟಿ ರೂ.ಗೆ ಹೆಚ್ಚಳವಾಯಿತು. ಇದುವರೆಗೆ 26.84 ಕೋಟಿ ಸಂಗ್ರಹಿಸುವ ಮೂಲಕ ಶೇ. 78.01 ರಷ್ಟು ಸಾಧನೆ ಮಾಡಲಾಗಿದೆ.