ದಾವಣಗೆರೆ : ಜಿಎಸ್‌ಟಿ ನಿಯಮಗಳ ಜಾರಿಯಲ್ಲಿ ಗೊಂದಲವಾಗದ ರೀತಿಯಲ್ಲಿ ನೋಡಿಕೊಳ್ಳಬೇಕಿದೆ ಎಂದು ಬಳ್ಳಾರಿಯ ಕೇಂದ್ರ ವಲಯದ ವಾಣಿಜ್ಯ ತೆರಿಗೆಗಳ (ಜಾರಿ) ಜಂಟಿ ಆಯುಕ್ತ ಎನ್.ಎಸ್. ನಾಗಸ್ವಾಮಿ ಹೇಳಿದರು. ಜಿಲ್ಲಾ ಟ್ಯಾಕ್ಸ್ ಪ್ರಾಕ್ಟಿಷನರ್ಸ್ ಅಸೋಸಿಯೇಷನ್ ವತಿಯಿಂದ ನಗರದ ಚಾರ್ಟರ್ಡ್ ಅಕೌಂಟೆಂಟ್ಸ್ ಭವನದಲ್ಲಿ ಗುರುವಾರ ಸರಕು ಮತ್ತು ಸೇವಾ ತೆರಿಗೆ ಕಾಯ್ದೆ ಕುರಿತು ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಮಾತನಾಡಿದರು. ಕಾನೂನು ಒಂದೇ ಇರುತ್ತದೆ, ಅದನ್ನು ಅನುಷ್ಠಾನಕ್ಕೆ ತರುವಾಗ ವ್ಯತ್ಯಾಸಗಳಾಗಬಾರದು. ಒಬ್ಬೊಬ್ಬರು ಒಂದೊಂದು ರೀತಿ ವ್ಯಾಖ್ಯಾನ ಮಾಡುವಂತಾಗಬಾರದು. ಉದ್ಯಮದ ಸುಗಮ ಕಾರ್ಯ ನಿರ್ವಹಣೆಗೆ ಸ್ಪಷ್ಟತೆ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಇಂಥ ಕಾರ್ಯಾಗಾರಗಳು ನೆರವಾಗುತ್ತವೆ ಎಂದು ಅಭಿಪ್ರಾಯಪಟ್ಟರು. ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಟ್ಯಾಕ್ಸ್ ಪ್ರಾೃಕ್ಟಿಷನರ್ಸ್ ಇಂಡಿಯಾದ ಚೇರ್ಮನ್ ಶ್ರೀಧರ ಪಾರ್ಥಸಾರಥಿ ಮಾತನಾಡಿ, ನಮ್ಮ ಮುಂದೆ ಹಲವು ಸವಾಲುಗಳಿವೆ. ಸಂಘಟಿತರಾಗುವ ಮೂಲಕ ಅವುಗಳನ್ನು ಮೆಟ್ಟಿ ನಿಲ್ಲಬೇಕಿದೆ ಎಂದು ತಿಳಿಸಿದರು. ಜಿಎಸ್‌ಟಿ ಕಾಯ್ದೆಯಲ್ಲಿ 1 ಸಾವಿರ ಅಧಿಸೂಚನೆಗಳು ಬಂದಿವೆ. ಇದು ವಿಶ್ವದಾಖಲೆಯಾದರೂ ಆಶ್ಚರ್ಯವೇನಿಲ್ಲ. ನಿರಂತರ ಕಲಿಕೆಯ ಅಗತ್ಯವಿದೆ. ನೋಡಿ ಕಲಿ, ಮಾಡಿ ತಿಳಿ ಎಂಬಂತೆ ಕ್ಷೇತ್ರದಲ್ಲಿ ಹೊಸ ವಿಷಯಗಳ ಕುರಿತು ನಮ್ಮ ಜ್ಞಾನವನ್ನು ವೃದ್ಧಿಸಿಕೊಳ್ಳಬೇಕು. ನಾವೆಲ್ಲ ಇಲಾಖೆಯ ದತ್ತು ಮಕ್ಕಳಾಗಿದ್ದು ಪ್ರೀತಿ, ಸಹಬಾಳ್ವೆಯೊಂದಿಗೆ ಸಾಗಬೇಕು ಎಂದು ಸಲಹೆ ನೀಡಿದರು. ದಾವಣಗೆರೆ ಚಾರ್ಟರ್ಡ್ ಅಕೌಂಟಂಟ್ಸ್ ಸಂಘದ ಅಧ್ಯಕ್ಷ ಉಮೇಶ ಶೆಟ್ಟಿ ಮಾತನಾಡಿ, ವೃತ್ತಿಯ ಒತ್ತಡದ ನಡುವೆ ನಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದು ಕಿವಿಮಾತು ಹೇಳಿದರು. ಜಿಲ್ಲಾ ಟ್ಯಾಕ್ಸ್ ಪ್ರಾಕ್ಟಿಷನರ್ಸ್ ಅಸೋಸಿಯೇಷನ್ ಅಧ್ಯಕ್ಷ ಎಚ್.ಟಿ. ಸುಧೀಂದ್ರ ರಾವ್ ಮಾತನಾಡಿ, ಕಾನೂನಿನ ಬಗ್ಗೆ ಹೆಚ್ಚಾಗಿ ತಿಳಿದುಕೊಂಡು, ಇಲಾಖೆ ಅಧಿಕಾರಿಗಳ ಜತೆಗೆ ಪ್ರೀತಿ, ವಿಶ್ವಾಸದಿಂದ ಇರಬೇಕು ಎಂದು ಹೇಳಿದರು. ಸಂಘದ ಗೌರವಾಧ್ಯಕ್ಷ ಡಿ.ಆರ್. ಶಂಕರ್ ಮಾತನಾಡಿ, 53ನೇ ಜಿಎಸ್‌ಟಿ ಮಂಡಳಿ ಸಭೆಯಲ್ಲಿ 2017-20 ರ ನಡುವಿನ ಬಡ್ಡಿ ಮತ್ತು ದಂಡ ಮನ್ನಾ ಮಾಡಲು ನಿರ್ಧರಿಸಲಾಗಿದೆ ಎಂದು ಮಾಹಿತಿ ನೀಡಿದರು. ರಾಜ್ಯ ಟ್ಯಾಕ್ಸ್ ಪ್ರಾಕ್ಟಿಷನರ್ಸ್ ಅಸೋಸಿಯೇಷನ್ ವಲಯ ಉಪಾಧ್ಯಕ್ಷ ಜೆಂಬಗಿ ರಾಧೇಶ್ ಮಾತನಾಡಿದರು. ವಾಣಿಜ್ಯ ತೆರಿಗೆಗಳ ಜಂಟಿ ಆಯುಕ್ತ ಎಚ್. ವೀರೇಂದ್ರ ಪಾಟೀಲ್, ಜಿಲ್ಲಾ ತೆರಿಗೆ ಸಲಹೆಗಾರರ ಸಂಘದ ಕಾರ್ಯದರ್ಶಿ ಜಿ. ಮಹಾಂತೇಶ್ ಇದ್ದರು. ತಾಂತ್ರಿಕ ಸಭೆಯಲ್ಲಿ ‘53ನೇ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಬದಲಾವಣೆಗಳು ಮತ್ತು ಸಾಮಾನ್ಯ ದೋಷಗಳು’ ಕುರಿತು ಬೆಂಗಳೂರಿನ ಚಾರ್ಟರ್ಡ್ ಅಕೌಂಟಂಟ್ ಅನ್ನಪೂರ್ಣಾ ಕಾಬ್ರ, ‘ತೀರ್ಪು ಮತ್ತು ಮೇಲ್ಮನವಿ ಪ್ರಕ್ರಿಯೆಗಳ ತಯಾರಿ ಮತ್ತು ಫೈಲಿಂಗ್’ ವಿಷಯದ ಬಗ್ಗೆ ಟಿ.ಆರ್. ರಾಜೇಶ್ ಕುಮಾರ್, ‘ಮೌಲ್ಯಮಾಪನ, ಆಡಿಟ್, ವಿಚಾರಣೆ ಮತ್ತು ತನಿಖೆ ಹೇಗೆ ಎದುರಿಸುವುದು’ ವಿಷಯ ಕುರಿತು ಜತಿನ್ ಅನಿಲ್ ಕ್ರಿಸ್ಟೋಫರ್ ಮಾತನಾಡಿದರು. ... (ಕೋಟ್) ಆ. 4 ಮತ್ತು 5 ರಂದು ಮೈಸೂರಿನಲ್ಲಿ ಟ್ಯಾಕ್ಸ್ ಪ್ರಾಕ್ಟಿಷನರ್‌ಗಳ ದಿನವನ್ನು ಆಚರಿಸಲಾಗುವುದು. ಸಂಘದ ಸದಸ್ಯರಿಗೆ ಗುರುತಿನ ಚೀಟಿಗಳನ್ನು ನೀಡಲಾಗುತ್ತಿದೆ. ಕಟ್ಟಡ ನಿಧಿಗೆ ಹೆಚ್ಚು ನೆರವು ಕೊಡಿಸಬೇಕು. ತರಬೇತಿ ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ಪಾಲ್ಗೊಂಡು ನಮ್ಮ ಜ್ಞಾನವನ್ನು ವೃದ್ಧಿಸಿಕೊಳ್ಳಬೇಕು. ಎಸ್. ನಂಜುಂಡ ಪ್ರಸಾದ್, ರಾಜ್ಯ ಟ್ಯಾಕ್ಸ್ ಪ್ರಾಕ್ಟಿಷನರ್ಸ್ ಅಸೋಸಿಯೇಷನ್ ಅಧ್ಯಕ್ಷ