ದಾವಣಗೆರೆ : ಈ ಬಾರಿ ಮುಂಗಾರು ಮಳೆ ಸಮೃದ್ಧಿಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿರುವುದರಿಂದ ರಾಜನಹಳ್ಳಿ ಏತ ನೀರಾವರಿ ಯೋಜನೆ ವ್ಯಾಪ್ತಿಯ ಕೆರೆಗಳಿಗೆ ನೀರು ತುಂಬಿಸುವ ಕೆಲಸವನ್ನು ಸಂಬಂಧಪಟ್ಟ ಅಧಿಕಾರಿಗಳು ಮತ್ತು ನಿರ್ವಹಣೆ ಮಾಡುವ ಗುತ್ತಿಗೆದಾರರು ಮಾಡಬೇಕು ಎಂದು ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಸೂಚನೆ ನೀಡಿದರು.
ತಾಲೂಕಿನ ಮಲ್ಲಶೆಟ್ಟಿಹಳ್ಳಿ ಬಳಿಯ ಜಾಕ್‌ವೆಲ್ ಹಾಗೂ ಪಂಪ್‌ಹೌಸ್ ನಂ- 2 ಗೆ ಇತ್ತೀಚೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ರಾಜನಹಳ್ಳಿ ಬಳಿಯ ಮೊದಲ ಜಾಕ್‌ವೆಲ್‌ನಿಂದ ಮಲ್ಲಶೆಟ್ಟಿಹಳ್ಳಿ ಸಮೀಪದ ಎರಡನೇ ಜಾಕ್‌ವೆಲ್‌ಗೆ ನೀರು ಹರಿಸಲಾಗುತ್ತಿದೆ. ಆದರೆ ಪೈಪ್‌ನಲ್ಲಿ ಕಾಲು ಭಾಗ ನೀರು ಬರುತ್ತಿಲ್ಲ. ನೀರು ಬಿಟ್ಟು 2-3 ದಿನಗಳಾಗಿದ್ದರೂ ಇನ್ನೂ ಕೆರೆಯ ತಳಭಾಗದಲ್ಲೇ ಇದೆ ಎಂದರು.
ಮೊದಲ ಜಾಕ್‌ವೆಲ್‌ನಲ್ಲಿ ಒಂದೇ ಮೋಟಾರು ಆನ್ ಮಾಡಿರುವುದರಿಂದ ಪೈಪ್‌ನಲ್ಲಿ ಕಡಿಮೆ ಪ್ರಮಾಣದಲ್ಲಿ ನೀರು ಹರಿಯುತ್ತದೆ. ಎರಡು ತಿಂಗಳಾದರೂ ಕೆರೆ ತುಂಬುವುದಿಲ್ಲ. ಇಲ್ಲಿಂದ ಮುಂದಿನ ಕೆರೆಗಳಿಗೆ ನೀರು ಯಾವಾಗ ಹರಿಯಬೇಕು. ಮೊದಲ ಜಾಕ್‌ವೆಲ್‌ನ ಇನ್ನೊಂದು ಮೋಟಾರು ಆನ್ ಮಾಡಿದರೆ ಒತ್ತಡ ಉಂಟಾಗಿ ಕೆರೆ ತುಂಬಿಸಲು ಸಾಧ್ಯ ಎಂದು ಹೇಳಿದರು.
ಮಲ್ಲಶೆಟ್ಟಿಹಳ್ಳಿಯ ಎರಡನೇ ಜಾಕ್‌ವೆಲ್‌ನಲ್ಲಿರುವ 3 ಮೋಟಾರುಗಳಲ್ಲಿ 2 ಕೆಟ್ಟಿವೆ. ಅವುಗಳನ್ನು ಕೂಡಲೇ ದುರಸ್ತಿ ಮಾಡಬೇಕು. ಇಲ್ಲಿನ ಕೆರೆ ತುಂಬಿದ ಬಳಿಕ ಮುಂದಿನ ಕೆರೆಗಳಿಗೆ ನೀರು ತುಂಬಿಸಿ ರೈತರಿಗೆ ನೆರವಾಗಬೇಕು ಎಂದು ಇಂಜಿನಿಯರ್ ಮತ್ತು ಗುತ್ತಿಗೆದಾರರಿಗೆ ತಾಕೀತು ಮಾಡಿದರು.
ಯೋಜನೆ ವ್ಯಾಪ್ತಿಯ ಪೈಪ್‌ಲೈನ್ ಮಾರ್ಗದ ಅಲ್ಲಲ್ಲಿ ಸಮಸ್ಯೆಗಳಿದ್ದು ಅವುಗಳನ್ನು ದುರಸ್ತಿಗೊಳಿಸಬೇಕು. ಜಗಳೂರು ಮತ್ತು ಭರಮಸಾಗರ ಕೆರೆಗಳಿಗೆ ಸಮರ್ಪಕವಾಗಿ ನೀರು ಹರಿಯುತ್ತಿರುವಂತೆ ಈ ಭಾಗದ 22 ಕೆರೆಗಳಿಗೂ ನೀರು ತುಂಬಿಸಬೇಕು ಎಂದು ತಿಳಿಸಿದರು.
ಈ ಯೋಜನೆಯ ಆರಂಭದಲ್ಲಿ ಗುತ್ತಿಗೆದಾರರು ಕಳಪೆ ಕಾಮಗಾರಿ ಮಾಡಿದ ಪರಿಣಾಮ ಆಗಾಗ ಪೈಪ್‌ಲೈನ್ ಒಡೆದು ಮಳೆಗಾಲದಲ್ಲಿ ಕೆರೆಗಳಿಗೆ ಸಂಪೂರ್ಣ ನೀರು ತುಂಬಿಸಲು ಆಗುತ್ತಿಲ್ಲ. ಹೊಸ ಪೈಪ್‌ಲೈನ್ ಮಾಡಿದರೆ ಅನುಕೂಲವಾಗುತ್ತದೆ.
ಈ ಬಗ್ಗೆ ಸಿರಿಗೆರೆ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಜತೆಗೆ ಚರ್ಚಿಸಿ, ಸಿಎಂ ಮತ್ತು ಜಲಸಂಪನ್ಮೂಲ ಸಚಿವರ ಮೇಲೆ ಒತ್ತಡ ಹಾಕಿ ರೈತರಿಗೆ ನೀರೊದಗಿಸುವ ಕೆಲಸ ಮಾಡುವುದಾಗಿ ಭರವಸೆ ನೀಡಿದರು. ಎಪಿಎಂಸಿ ಅಧ್ಯಕ್ಷ ಚಂದ್ರಣ್ಣ, ಶಿವು ಪ್ರಕಾಶ್ ಪಾಟೀಲ್ ಇದ್ದರು.