ದಾವಣಗೆರೆ : ಜಿಲ್ಲಾಮಟ್ಟದ ಎಲ್ಲ ಸರ್ಕಾರಿ ನೌಕರರೂ ಕನ್ನಡ ಬಾವುಟದ ಬಣ್ಣದ ಕೊರಳುದಾರ (ಟ್ಯಾಗ್) ಧರಿಸಬೇಕು ಎಂದು ಕರ್ನಾಟಕ ಭೀಮ್ ಸೇನೆ ಜಿಲ್ಲಾಧ್ಯಕ್ಷ ಆರ್. ಸೂರ್ಯ ಪ್ರಕಾಶ್ ಹೇಳಿದರು. ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಸರ್ಕಾರವು ‘ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ’ ಎಂಬ ಅಭಿಯಾನದಡಿ ಎಲ್ಲ ಸರ್ಕಾರಿ ನೌಕರರು ಹಾಗೂ ಸಿಬ್ಬಂದಿ ಕಡ್ಡಾಯವಾಗಿ ಕನ್ನಡ ಬಾವುಟದ ಕೆಂಪು-ಹಳದಿ ಬಣ್ಣದ ಕೊರಳುದಾರ (ಟ್ಯಾಗ್)ಕ್ಕೆ ತಮ್ಮ ಗುರುತಿನ ಚೀಟಿ ಧರಿಸಿಕೊಳ್ಳಬೇಕು ಎಂದು ಆದೇಶಿಸಿದೆ ಎಂದರು. ಕರ್ನಾಟಕವೆಂದು ನಾಮಕರಣಗೊಂಡ 50 ವರ್ಷಗಳ ನೆನಪಿಗೆ ಜನರಲ್ಲಿ ಜಾಗೃತಿ ಮೂಡಿಸಲು ಮತ್ತು ಸರ್ಕಾರಿ ನೌಕರರು ಕಚೇರಿಗಳಲ್ಲಿ ಗುರುತಿಸಿಕೊಳ್ಳುವಂತಾಗಲು ಈ ಆದೇಶವಾಗಿದೆ. ಸಾರ್ವಜನಿಕರು ತಮ್ಮ ಕೆಲಸಗಳಿಗಾಗಿ ಸರ್ಕಾರಿ ಕಚೇರಿಗೆ ಭೇಟಿ ನೀಡಿದಾಗ, ಅಧಿಕಾರಿಗಳ ಹೆಸರು, ಹುದ್ದೆಯ ಗುರುತು ಸಿಗದೆ ಪರದಾಡಿ ಭೇಟಿ ಮಾಡಲಾಗದೆ ಸಾರ್ವಜನಿಕರು ಬರಿಗೈಯಲ್ಲಿ ವಾಪಸ್ ತೆರಳಬಾರದು ಎಂಬುದು ಇದರ ಉದ್ದೇಶವಾಗಿದೆ ಎಂದು ತಿಳಿಸಿದರು. ಕನ್ನಡ ರಾಜ್ಯೋತ್ಸವ ಸಮೀಪಿಸುತ್ತಿರುವ ಹೊತ್ತಿನಲ್ಲಿ ಸರ್ಕಾರಿ ನೌಕರರು ಕನ್ನಡ ಬಣ್ಣದ ಬಾವುಟದ ಕೊರಳುದಾರವನ್ನು ಧರಿಸಬೇಕು. ಇಲ್ಲವಾದರೆ ಅಂತಹ ಅಧಿಕಾರಿಗಳ ಜಿಪಿಎಸ್ ಫೋಟೋ ಸೆರೆ ಹಿಡಿದು ರಾಜ್ಯಪಾಲರಿಗೆ ಹಾಗೂ ಮುಖ್ಯಮಂತ್ರಿಗೆ ರವಾನಿಸಿ ದೂರು ನೀಡಲಾಗುವುದು ಎಂದರು. ಸಂಘಟನೆಯ ಮುಖಂಡರಾದ ಪುಂಡಲೀಕ ಎಂ. ಪಾಟೀಲ್, ಎನ್. ಸಂದೀಪ್, ಎನ್. ಸಂತೋಷ್, ಮೈಲಾರಿ, ಹರ್ಷ, ಎನ್. ಚಂದ್ರು ಇದ್ದರು.