ದಾವಣಗೆರೆ : ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಅನುಷ್ಠಾನ ಹಾಗೂ ಲಿಂಗಾಯತ ಉಪ ಸಮಾಜಗಳನ್ನು ಕೇಂದ್ರ ಸರ್ಕಾರದ ಒಬಿಸಿ ಮೀಸಲಾತಿಗೆ ಶಿಫಾರಸು ಮಾಡುವಂತೆ ಒತ್ತಾಯಿಸಿ ಇಷ್ಟಲಿಂಗ ಪೂಜೆ ಮತ್ತು ರಸ್ತೆತಡೆಯನ್ನು ನಗರ ಹೊರ ವಲಯದ ರಾಷ್ಟ್ರೀಯ ಹೆದ್ದಾರಿಯಲ್ಲಿ ನ. 10 ರಂದು ಹಮ್ಮಿಕೊಳ್ಳಲಾಗಿದೆ.
ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.
ಅಂದು ಬೆಳಗ್ಗೆ 10 ಗಂಟೆಗೆ ಆವರಗೆರೆ ಸಮೀಪದ ರಾಷ್ಟ್ರೀಯ ಹೆದ್ದಾರಿ ಬಳಿ ಇರುವ ಚಿಂದೋಡಿ ಲೀಲಾ ಸಮುದಾಯ ಭವನದಿಂದ ವಿಶ್ವಾರಾಧ್ಯ ಕ್ಯಾನ್ಸರ್ ಆಸ್ಪತ್ರೆ ಮುಂಭಾಗದಲ್ಲಿ ಹೆದ್ದಾರಿಯ ಮೇಲೆ ಸಾಮೂಹಿಕ ಇಷ್ಟಲಿಂಗ ಪೂಜೆ ಮಾಡಲಾಗುವುದು. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಪೂರ್ವಭಾವಿ ಸಭೆಗಳನ್ನು ನಡೆಸಲಾಗುತ್ತಿದೆ. ಸಮಾಜದ 5 ಸಾವಿರ ಮಂದಿ ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ಹೇಳಿದರು.
ಸರ್ಕಾರ ಇನ್ನೂ ನಿದ್ರಾವಸ್ಥೆಯಲ್ಲಿದೆ. ನಮ್ಮ ಬೇಡಿಕೆಯ ಬಗ್ಗೆ ನಿರ್ಲಕ್ಷೃ ವಹಿಸಲಾಗಿದೆ ಎಂದು ಅಸಮಾಧಾನ ಹೊರಹಾಕಿದರು. ಸರ್ಕಾರದ ಕಣ್ತೆರೆಸುವ ಉದ್ದೇಶದಿಂದ ಬೆಳಗಾವಿಯಿಂದ ಆರಂಭಿಸಿ ಈಗಾಗಲೇ ವಿಜಯಪುರ, ಜಮಖಂಡಿ, ಯಲಬುರ್ಗ, ಧಾರವಾಡ ಮತ್ತು ಗದಗದಲ್ಲಿ ಈ ಹೋರಾಟ ಮಾಡಲಾಗಿದೆ. ಸರ್ಕಾರಕ್ಕೆ ಸದ್ಬುದ್ಧಿ ಬರಲಿ, ಬರಗಾಲ ನಿವಾರಣೆಯಾಗಲಿ ಎಂಬ ಆಶಯದೊಂದಿಗೆ ಲಿಂಗಪೂಜೆ ಕೈಗೊಳ್ಳಲಾಗುವುದು ಎಂದು ಹೇಳಿದರು.
ಸರ್ಕಾರ ನ. 10ರೊಳಗೆ ಸ್ಪಂದಿಸದಿದ್ದರೆ ಮುಂದಿನ ಹೋರಾಟದ ರೂಪುರೇಶೆಗಳನ್ನು ಹೋರಾಟದ ವೇಳೆ ಸಿದ್ಧಪಡಿಸಲಾಗುವುದು. ಎಲ್ಲ ಜಿಲ್ಲೆಗಳಲ್ಲೂ ಚಳವಳಿ ನಡೆಸಲಾಗುವುದು. ಇದರಿಂದ ಆಡಳಿತಾರೂಢ ಪಕ್ಷಕ್ಕೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ವ್ಯತಿರಿಕ್ತ ಪರಿಣಾಮವಾಗಬಹುದು ಎಂದು ಎಚ್ಚರಿಕೆ ನೀಡಿದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿ ಅಖಿಲ ಭಾರತ ಲಿಂಗಾಯತ ವೀರಶೈವ ಮಹಾಸಭಾ ಪಂಚಮಸಾಲಿ ಸಮಾಜದ ಹೋರಾಟಕ್ಕೆ ಬೆಂಬಲ ನೀಡಲಿ ಎಂದರು.
ದಲಿತ ಸಿಎಂ ಆದರೆ ತಪ್ಪೇನಿಲ್ಲ. ಎಲ್ಲ ಸಮುದಾಯದವರಿಗೂ ತಮ್ಮವರು ಮುಖ್ಯಮಂತ್ರಿ ಆಗಲಿ ಎನ್ನುವ ಅಪೇಕ್ಷೆ ಇರುತ್ತದೆ ಎಂದು ತಿಳಿಸಿದರು.
ಸಮಾಜದ ಮುಖಂಡ ಬಿ.ಜಿ. ಅಜಯಕುಮಾರ್ ಮಾತನಾಡಿ, ನ. 10ರ ಕಾರ್ಯಕ್ರಮಕ್ಕೆ ಶಾಸಕ ಬಸನಗೌಡ ಪಾಟೀಲ ಯತ್ನಾಳ್, ಅರವಿಂದ ಬೆಲ್ಲದ್, ವಿನಯ್ ಕುಲಕರ್ಣಿ ಇನ್ನಿತರರು ಭಾಗವಹಿಸುವರು. ಸಮಾಜದ ಮಠಾಧೀಶರು, ಯುವಜನರು ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.
ಮುಖಂಡರಾದ ಅಶೋಕ ಗೋಪನಾಳ್, ಓಂಕಾರಪ್ಪ, ಬಕ್ಕೇಶ್, ಈಶ್ವರಪ್ಪ, ಮಂಜುನಾಥ್ ಸುದ್ದಿಗೋಷ್ಠಿಯಲ್ಲಿದ್ದರು.
...
* ಸರ್ಕಾರದಿಂದ ತಾರತಮ್ಯ ನೀತಿ
ಮೀಸಲಾತಿ ವಿಚಾರದಲ್ಲಿ ಸರ್ಕಾರ ತಾರತಮ್ಯ ಮಾಡುತ್ತಿದೆ ಎಂದು ಮಾಜಿ ಶಾಸಕ ಎಚ್.ಎಸ್. ಶಿವಶಂಕರ್ ಆರೋಪಿಸಿದರು.
ಸರ್ಕಾರ ಸಕಾರಾತ್ಮಕ ತೀರ್ಮಾನ ತೆಗೆದುಕೊಳ್ಳದಿದ್ದರೆ ಲೋಕಸಭಾ ಚುನಾವಣೆಯಲ್ಲಿ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಇದು ಸಮಾಜದ ಕಾರ್ಯಕ್ರಮ. ಯಾರಿಗೂ ತಾಂಬೂಲ ನೀಡಿ ಕರೆಯಬೇಕಾದ ಸಂದರ್ಭವಲ್ಲ. ಸ್ವಾಭಿಮಾನಿ ಪಂಚಮಸಾಲಿಗಳೆಲ್ಲರೂ ಭಾಗವಹಿಸಬೇಕು. ಇದಕ್ಕೆ ಸ್ವಾಮೀಜಿಗಳೂ ಹೊರತಾಗಿಲ್ಲ. ಇಂಥ ಹೋರಾಟದಲ್ಲಿ ಪಾಲ್ಗೊಳ್ಳುವುದು ಅವರ ಜವಾಬ್ದಾರಿಯಾಗಿದೆ ಎಂದರು.
ಕೆಲವರು ಆಕಸ್ಮಿಕವಾಗಿ ಪೀಠಾಧಿಪತಿಗಳಾಗುತ್ತಾರೆ, ಮತ್ತೆ ಕೆಲವರು ಪರಿಶ್ರಮದಿಂದ ಆ ಸ್ಥಾನಕ್ಕೆ ಬರುತ್ತಾರೆ. ಹೃಷಿಕೇಷ, ಹರಿದ್ವಾರ ಇನ್ನಿತರ ಕಡೆಗಳಲ್ಲಿ ಪಾಂಡಿತ್ಯ ಪ್ರದರ್ಶನದಿಂದ ಗಮನ ಸೆಳೆದು ಪೀಠಾಧಿಪತಿಗಳಾಗುತ್ತಾರೆ ಎಂದು ತಿಳಿಸಿದರು.
ಸಂತೋಷ, ಸಮೃದ್ಧಿ ಇದ್ದಾಗ ಜಾತ್ರೆಗಳನ್ನು ಮಾಡುತ್ತೇವೆ. ಈಗ ಬರಗಾಲವಿದೆ. ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಜನರು ಕಂಗಾಲಾಗಿದ್ದಾರೆ. ಜಾತ್ರೆ ಮಾಡುವವರು ಮಾಡಿಕೊಳ್ಳಲಿ ಎಂದು ಹೇಳಿದರು.
...