ದಾವಣಗೆರೆ : ರಾಜ್ಯ ಸರ್ಕಾರದ ಅನೇಕ ಹಗರಣಗಳು ವಿಚಾರಣೆ ಹಂತದಲ್ಲಿವೆ. ಅದರಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಸಮಸ್ಯೆ ಅಲ್ಲದ ವಿಷಯಗಳನ್ನು ಸಮಸ್ಯೆಯಾಗಿ ಸೃಷ್ಟಿಸುತ್ತಿದೆ ಎಂದು ರಂಭಾಪುರಿ ಪೀಠದ ಜಗದ್ಗುರು ಡಾ. ಪ್ರಸನ್ನರೇಣುಕ ವೀರಸೋಮೇಶ್ವರ ರಾಜ ದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಅಸಮಾಧಾನ ವ್ಯಕ್ತಪಡಿಸಿದರು. ನಗರದ ದಾವಣಗೆರೆ ಹರಿಹರ ಅರ್ಬನ್ ಬ್ಯಾಂಕ್ ಸಮುದಾಯ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ, ಲಿಂ. ವಾಗೀಶ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದಂಗಳವರ 39ನೇ ವಾರ್ಷಿಕ ಸ್ಮರಣೋತ್ಸವ ಮತ್ತು ಲಿಂ. ಉಮಾಪತಿ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದಂಗಳವರ 14ನೇ ವರ್ಷದ ಪುಣ್ಯಾರಾಧನೆ, ಜನಜಾಗೃತಿ ಧರ್ಮ ಸಮ್ಮೇಳನದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಧರ್ಮಸ್ಥಳ ಪ್ರಕರಣ, ವೀರಶೈವ-ಲಿಂಗಾಯತರಲ್ಲಿ ಒಡಕಿನ ಧ್ವನಿ, ಕನ್ನೇರಿ ಶ್ರೀಗಳಿಗೆ ದಿಗ್ಬಂಧನ ವಿಧಿಸಿದ್ದು ಇವೆಲ್ಲ ಸರ್ಕಾರದ ಅರ್ಥವಿಲ್ಲದ ಕ್ರಮಗಳಾಗಿವೆ. ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತಗೊಂಡಿದೆ. ಆ ಬಗ್ಗೆ ಗಮನ ಹರಿಸುವ ಬದಲು ಸಾಮಾಜಿಕ ವಿಷಯಗಳನ್ನು ದೊಡ್ಡದು ಮಾಡುವುದು ಸರಿಯಲ್ಲ ಎಂದು ಹೇಳಿದರು. ಧರ್ಮದಲ್ಲಿ ರಾಜಕೀಯ ಪ್ರವೇಶ ಆಗಬಾರದು. ಹಾಗೆ ಆಗಿದ್ದರಿಂದ ಸಮಸ್ಯೆಗಳು ಎದರಾಗಿವೆ. ಸಾಮರಸ್ಯ, ಸೌಹಾರ್ದ ಮೂಡಿಸುವ ಕೆಲಸ ಆಗಬೇಕಿದೆ ಎಂದು ತಿಳಿಸಿದರು. ಪ್ರತ್ಯೇಕತಾವಾದಿಗಳು ಏನೇ ಕೂಗೆಬ್ಬಿಸಲಿ. ವೀರಶೈವ ಅಥವಾ ಲಿಂಗಾಯತ ಏನೇ ಬರೆಸಿದರೂ ಸ್ವತಂತ್ರ ಧರ್ಮ ಆಗುವುದಿಲ್ಲ, ಹಿಂದು ಧರ್ಮದ ಅಂಗವಾಗಿಯೇ ಇರುತ್ತೇವೆ. ಆದ್ದರಿಂದ ಸ್ವತಂತ್ರ ಧರ್ಮದ ಪ್ರಯತ್ನ ಕೈಬಿಟ್ಟು ಎಲ್ಲ ಒಳ ಪಂಗಡಗಳು ಒಂದಾಗಬೇಕು. ಒಡೆದ ಮನಸ್ಸುಗಳು, ಕವಲು ದಾರಿಯಲ್ಲಿರುವ ಮಠಾಧೀಶರು ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು. ವೀರಶೈವ-ಲಿಂಗಾಯತ ವಿಚಾರವಾಗಿ ಬಹಳ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ನಮಗೆ ಇತಿಹಾಸ, ಪರಂಪರೆ ಇದೆ. ಯಾರೋ ನಾಲ್ಕು ಜನ ಇಲ್ಲಸಲ್ಲದ ಮಾತುಗಳನ್ನಾಡಿದರೆ ದಕ್ಕೆ ಬೆಲೆ ಇಲ್ಲ. ‘ಆನೆ ಹೋಗುತ್ತಿರುತ್ತದೆ, ನಾಯಿ ಬೊಗಳುತ್ತಿರುತ್ತದೆ’ ಎಂದು ನುಡಿದರು. ‘ವೀರಶೈವ’ ಎಂಬ ಧರ್ಮವಾಚಕ ಪದಕ್ಕೆ ಇರುವ ಶಕ್ತಿ ‘ಲಿಂಗಾಯತ’ದಲ್ಲಿ ಇಲ್ಲ. ಅದು ರೂಢಿಯಿಂದ ಬಂದಿದ್ದು ಧರ್ಮ ಆಗಲಾರದು. ಹಾಗಾಗಿ ಒಡಕಿನ ಧ್ವನಿಗೆ ಬೆಲೆ ಇಲ. ಈ ಹಿನ್ನೆಲೆಯಲ್ಲಿ ಮಹಾಸಭೆ ಗಟ್ಟಿಯಾದ ಹೆಜ್ಜೆಗಳನ್ನಿಟ್ಟು ಸಮನ್ವಯ ಭಾವನೆ ಬೆಳೆಸಬೇಕು ಎಂದು ತಿಳಿಸಿದರು. ಶ್ರೀಶೈಲ ಪೀಠದ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಡಾ.ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ಓಂಕಾರ ಉಚ್ಚನಾಗಲಿಂಗ ಮಠದ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಗುರುಸಿದ್ದ ಶಿವಚಾರ್ಯ ಸ್ವಾಮೀಜಿ, ಆವರಗೊಳ್ಳದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ಇದ್ದರು. ಪುಣ್ಯಾರಾಧನಾ ಸಮಿತಿ ಕಾರ್ಯಾಧ್ಯಕ್ಷ ಎನ್.ಎ. ಮುರುಗೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವರ್ತಕ ಎಸ್.ಜಿ. ಉಳುವಯ್ಯ, ವಕೀಲ ತ್ಯಾವಣಗಿ ಮಲ್ಲಿಕಾರ್ಜುನ್, ಡಿ.ಎಂ. ಹಾಲಸ್ವಾಮಿ ಪಾಲ್ಗೊಂಡಿದ್ದರು. ಬಿ.ಎಂ. ವಾಗೀಶ ಸ್ವಾಮಿ ಸ್ವಾಗತಿಸಿದರು. ಸಂಗೀತಾ ರಾಘವೇಂದ್ರ ಪ್ರಾರ್ಥಿಸಿದರು. ಸೌಭಾಗ್ಯ ಹಿರೇಮಠ ನಿರೂಪಿಸಿದರು. ವಿಜಯಾ ಹಿರೇಮಠ ಸಂಗೀತ ಸೇವೆ ನೀಡಿದರು.