ಜಿಲ್ಲೆ

ಸುಖ ಸಂತಸದ ಬದುಕಿಗೆ ಧರ್ಮವೊಂದೇ ಆಶಾಕಿರಣ

ರಮೇಶ ಜಹಗೀರದಾರ್

ದಾವಣಗೆರೆ : ಮಾನವ ಜೀವನದಲ್ಲಿ ಬದಲಾವಣೆ ಮತ್ತು ಬೆಳವಣಿಗೆ ಎರಡೂ ಮುಖ್ಯ. ಇಹಪರದ ಶ್ರೇಯಸ್ಸಿಗೆ ಧರ್ಮವೇ ಮೂಲ. ಸುಖ, ಸಂತಸದ ಬಾಳಿಗೆ ಧರ್ಮವೊಂದೇ ಆಶಾಕಿರಣ ಎಂದು ಬಾಳೆಹೊನ್ನೂರು ಪೀಠದ ಜಗದ್ಗುರು ಶ್ರೀ ಪ್ರಸನ್ನ ರೇಣುಕ ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಅಭಿಪ್ರಾಯಪಟ್ಟರು.  ಬಾಳೆಹೊನ್ನೂರು ಶ್ರೀ ಮದ್ವೀರಶೈವ ಸದ್ಬೋಧನಾ ಸಂಸ್ಥೆ ಮತ್ತು ಜಿಲ್ಲಾ ಘಟಕದ ಸಹಯೋಗದಲ್ಲಿ ನಗರದ ಶ್ರೀ ಅಭಿನವ ರೇಣುಕ ಮಂದಿರದಲ್ಲಿ ಶುಕ್ರವಾರ ಆಯೋಜಿಸಿದ್ದ ಜನಜಾಗೃತಿ ಧರ್ಮ ಸಮಾವೇಶದಲ್ಲಿ ಆಶೀರ್ವಚನ ನೀಡಿದರು.  ಸುಖದ ಬದುಕಿಗೆ ಪ್ರಯತ್ನ ಬೇಕು. ಸಾಧನೆ, ಪ್ರಯತ್ನವಿಲ್ಲದೇ ಉನ್ನತಿ ಸಾಧ್ಯವಿಲ್ಲ. ಬದುಕು ವಿಕಾಸಗೊಳ್ಳಲು ಅಧ್ಯಾತ್ಮದ ಅರಿವು ಬೇಕು. ನಡೆ ನುಡಿ ಮನಸ್ಸುಗಳ ಸಕ್ರಿಯ ಪರಿಪಾಠವೇ ನಿಜವಾದ ಅಧ್ಯಾತ್ಮ ಎಂದು ನುಡಿದರು.  ಬದುಕು ವ್ಯಕ್ತಿಯಿಂದ ವ್ಯಕ್ತಿಗೆ ಬೇರೆ ಬೇರೆಯಾಗಿರುತ್ತದೆ. ಕೆಲವರ ಬದುಕು ಸುಖಮಯ ಇನ್ನು ಕೆಲವರ ಬದುಕು ದುಃಖಮಯವಾಗಿರುತ್ತದೆ. ಕೆಲವರ ಜೀವನ ಸಂಘರ್ಷದಿಂದ ಕೂಡಿರುತ್ತದೆ, ತುಂಬಾ ಚಿಂತನೆಗಳಿಂದ ಕೂಡಿರುತ್ತದೆ ಎಂದು ತಿಳಿಸಿದರು.  ಹೃದಯವಂತಿಕೆ ಇಲ್ಲದೇ ಬುದ್ಧಿವಂತಿಕೆ ಎಷ್ಟೇ ಇದ್ದರೂ ಪ್ರಯೋಜನವಿಲ್ಲ. ಬುದ್ಧಿಗಿಂತ ಹೃದಯ ಶ್ರೀಮಂತಿಕೆ ಬಹಳ ಮುಖ್ಯ. ಮುಳ್ಳಿನ ನಡುವೆ ಹೂವು, ದಂತಗಳ ಮಧ್ಯೆ ನಾಲಿಗೆ, ಮೋಡದ ಮರೆಯಲ್ಲಿ ಚಂದ್ರ ಇರುವಂತೆ ಮನುಷ್ಯನ ಬದುಕು ಉಲ್ಲಾಸ ಮತ್ತು ನಗುತ ಬಾಳುವಂತಾದರೆ ಜೀವನ ಸಾರ್ಥಕ ಎಂದು ಹೇಳಿದರು.  ವೀರಶೈವ ಧರ್ಮದಲ್ಲಿ ಭಕ್ತಿ, ಶ್ರದ್ಧೆ, ಚಾರಿತ್ರ್ಯ, ಕ್ಷಮಾಶೀಲತೆ ಮತ್ತು ಪರೋಪಕಾರ ಸದ್ಗುಣಗಳು ಶಾಂತಿಯ ಬದುಕಿಗೆ ಅಡಿಪಾಯ ಎಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ್ದಾರೆ ಎಂದರು.