ದಾವಣಗೆರೆ : ಒಳಪಂಗಡಗಳ ಹೆಸರಲ್ಲಿ ಛಿದ್ರವಾಗುತ್ತಿರುವ ವೀರಶೈವ ಲಿಂಗಾಯತ ಸಮಾಜವನ್ನು ವಿಘಟನೆಯ ದಿಕ್ಕಿನಿಂದ ಮೂಲ ವಾಹಿನಿಗೆ ತರುವ ಆಶಯದೊಂದಿಗೆ ದಾವಣಗೆರೆಯ ಅಭಿನವ ರೇಣುಕ ಮಂದಿರದಲ್ಲಿ ಜುಲೈ 21,22 ರಂದು ವೀರಶೈವ ಪೀಠಾಚಾರ್ಯರ ಹಾಗೂ ಶಿವಾಚಾರ್ಯರ ಶೃಂಗ ಸಮ್ಮೇಳನ ಆಯೋಜಿಸಲಾಗಿದೆ. ಈ ಸಮ್ಮೇಳನದ ಮೂಲಕ ವೀರಶೈವ ಲಿಂಗಾಯತ ಸಮಾಜದ ಸಂಘಟನೆ ಹಾಗೂ ಧರ್ಮ, ಸಂಸ್ಕೃತಿಯ ಪುನಶ್ಚೇತನಕ್ಕೆ ಹೊಸ ದಿಕ್ಕು ದೆಸೆ ನೀಡುವ ಸಂಕಲ್ಪಕ್ಕೆ ಬಲ ಬರಲಿದೆ ಎಂದು ರಂಭಾಪುರಿ ಪೀಠದ ಜಗದ್ಗುರು ಡಾ.ಶ್ರೀ ಪ್ರಸನ್ನ ರೇಣುಕ ವೀರಸೋಮೇಶ್ವರ ರಾಜದೇಶಿಕೇಂದ್ರ ಭಗವತ್ಪಾದರು ಶ್ರೀಶೈಲ ಮಠದಲ್ಲಿ ಉಜ್ಜಿನಿ, ಶ್ರೀಶೈಲ,ಕಾಶಿ ನೂತನ ಜಗದ್ಗುರುಗಳ ಸಮ್ಮುಖದಲ್ಲಿ ಮಂಗಳವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದರು. ಪಂಚ ಪೀಠಾಧೀಶ್ವರರ ಸಾನ್ನಿಧ್ಯದಲ್ಲಿ ಎರಡು ದಿನ ನಡೆಯಲಿರುವ ಈ ಸಮ್ಮೇಳನಕ್ಕೆ ಕರ್ನಾಟಕ ಮಾತ್ರವಲ್ಲದೇ ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ಮಧ್ಯಪ್ರದೇಶ, ಉತ್ತರ ಪ್ರದೇಶ ಸೇರಿ ಇತರ ರಾಜ್ಯಗಳಿಂದ ವೀರಶೈವ ಪರಂಪರೆಯ ಮಠಾಧೀಶರು ಪಾಲ್ಗೊಳ್ಳುವರು ಎಂದು ತಿಳಿಸಿದರು. ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ ಹಾಗೂ ರಾಜಕೀಯವಾಗಿ ವೀರಶೈವ ಲಿಂಗಾಯತ ಸಮಾಜ ಸಾಗಬೇಕಾದ ದಾರಿ, ಕ್ರಮಿಸಬೇಕಾದ ಗುರಿ, ಅನುಸರಿಸಬೇಕಾದ ಕ್ರಮಗಳ ಕುರಿತು ಈ ಸಮ್ಮೇಳನ ಆಳವಾಗಿ ಚಿಂತನ-ಮಂಥನ ನಡೆಸಲಿದೆ. ಸಮಾಜದ ಹಿತದೃಷ್ಟಿಯಿಂದ ಕೆಲವು ಮಹತ್ವದ ನಿರ್ಣಯಗಳನ್ನು ಕೈಗೊಂಡು ಅವುಗಳ ಜಾರಿಗೆ ಪ್ರಯತ್ನಿಸಲಾಗುವುದು ಎಂದರು. ಉಜ್ಜಿನಿ ಜಗದ್ಗುರು ಡಾ. ಸಿದ್ದಲಿಂಗ ಶ್ರೀ ಶಿವಾಚಾರ್ಯರು, ಶ್ರೀಶೈಲ ಜಗದ್ಗುರು ಶ್ರೀ ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು, ಕಾಶಿ ಪೀಠದ ನೂತನ ಜಗದ್ಗುರು ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯರು ಸಮ್ಮುಖ ವಹಿಸಿದ್ದರು. ಸುದ್ದಿಗೋಷ್ಠಿಗೂ ಮುನ್ನ ಶೃಂಗ ಸಮ್ಮೇಳನದ ಪೂರ್ವಭಾವಿ ಸಭೆ ನಡೆಯಿತು.