ದಾವಣಗೆರೆ : ಮುರುಘರಾಜೇಂದ್ರಗೆರೆ ಬಸವಕೇಂದ್ರ, ವಿರಕ್ತ ಮಠ, ಶಿವಯೋಗಾಶ್ರಮ ಟ್ರಸ್ಟ್ ವತಿಯಿಂದ, ಶ್ರೀ ಜಯದೇವ ಮುರುಘರಾಜೇಂದ್ರ ಸ್ವಾಮೀಜಿ ಅವರ 68 ನೇ ವರ್ಷದ ಸ್ಮರಣೋತ್ಸವ, ರಥೋತ್ಸವ ಹಾಗೂ ವಚನಗ್ರಂಥ ಮೆರವಣಿಗೆ ಕಾರ್ಯಕ್ರಮಗಳು ಸೋಮವಾರ ನಡೆಯಲಿವೆ. ನಗರದ ಬಸವಕೇಂದ್ರ, ಶಿವಯೋಗಶ್ರಮದಲ್ಲಿ ಅಂದು ಬೆಳಗ್ಗೆ 11 ಗಂಟೆಗೆ ನಡೆಯುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿರಕ್ತ ಮಠದ ಡಾ. ಶ್ರೀ ಬಸವಪ್ರಭು ಸ್ವಾಮೀಜಿ ವಹಿಸುವರು. ಚನ್ನಗಿರಿಯ ಪ್ರವಚನಕಾರರಾದ ಮಹಾಂತೇಶ ಶಾಸ್ತ್ರಿಗಳು ‘ಶ್ರೀ ಜಯದೇವ ಲೀಲೆ’ ಪ್ರವಚನ ನಡೆಸಿಕೊಡುವರು. ಬಸವ ಕಲಾ ಲೋಕದ ಕಲಾವಿದರು ವಚನ ಸಂಗೀತ ನಡೆಸಿಕೊಡುವರು. ಮಧ್ಯಾಹ್ನ ಮಹಾ ದಾಸೋಹ ನಡೆಯಲಿದೆ. ಅಂದು ಸಂಜೆ 5 ಗಂಟೆಗೆ 68ನೇ ವರ್ಷದ ರಥೋತ್ಸವ, ವಚನಗ್ರಂಥ ಮೆರವಣಿಗೆಯು ಜಯದೇವ ಜಗದ್ಗುರುಗಳ ಭಾವಚಿತ್ರ, ವಚನ ಗ್ರಂಥಗಳೊಂದಿಗೆ ನೆರವೇರುವುದು. ಸಂಜೆ 6 ಗಂಟೆಗೆ ವಚನ ಸಂಗೀತೋತ್ಸವ ಹಮ್ಮಿಕೊಳ್ಳಲಾಗಿದೆ.