ಜಿಲ್ಲೆ

ಸಮಸ್ಯೆಗೆ ಆತ್ಮಹತ್ಯೆ ಪರಿಹಾರವಲ್ಲ

ರಮೇಶ ಜಹಗೀರದಾರ್

ದಾವಣಗೆರೆ  : ಎಲ್ಲ ಸಮಸ್ಯೆಗಳಿಗೂ ಆತ್ಮಹತ್ಯೆ ಒಂದೇ ಪರಿಹಾರವಲ್ಲ. ಮುಕ್ತ ಮನಸಿನಿಂದ ಚರ್ಚೆ ಮಾಡುವ ಮೂಲಕ ಉತ್ತರ ಕಂಡುಕೊಂಡು ಆತ್ಮಹತ್ಯೆ ಅಲೋಚನೆಯಿಂದ ಹೊರಬರಬಹುದು ಎಂದು 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಮಾನಸಿಕ ಆರೋಗ್ಯ ವಿಮರ್ಶಾ ಮಂಡಳಿಯ ಅಧ್ಯಕ್ಷ ಎಂ.ಎಚ್. ಅಣ್ಣಯ್ಯ ಹೇಳಿದರು.  ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ, ಚಿಗಟೇರಿ ಜಿಲ್ಲಾ ಆಸ್ಪತ್ರೆ ಮನೋವೈದ್ಯಕೀಯ ವಿಭಾಗ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಆಶ್ರಯದಲ್ಲಿ ನಗರದ ಬಿ.ಎಸ್. ಚನ್ನಬಸಪ್ಪ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.  ಆತ್ಮಹತ್ಯೆಯು ಸ್ವಂತಕ್ಕೆ ಮಾಡಿಕೊಳ್ಳುವ ಮಹಾ ಮೋಸ. ಆತ್ಮಹತ್ಯೆಗಳನ್ನು ತಡೆಗಟ್ಟಲು ನಾವು ಅಧ್ಯಾತ್ಮ ಚಟುವಟಿಕೆಗಳ ಕಡೆಗೆ ಒಲವು ತೋರುವುದು ಅತ್ಯವಶ್ಯಕ. ಹಿರಿಯರ ನುಡಿಗಳು, ಪುರಾಣ, ಧ್ಯಾನ, ಯೋಗದಿಂದ ಸಿಟ್ಟು, ಚಂಚಲತೆ ಹಾಗೂ ಗೊಂದಲಗಳಿಂದ ಹೊರಬರಲು ಮತ್ತು ಮನಸ್ಸನ್ನು ಶಾಂತಯುತವಾಗಿ ಇಟ್ಟುಕೊಳ್ಳಲು ಸಾಧ್ಯವಾಗುತ್ತದೆ ಎಂದರು.  ಆತ್ಮಹತ್ಯೆಗೆ ಶರಣಾಗುವುದು ಮಹಾಪಾಪ, ಏನೇ ಇದ್ದರೂ ಕೂಡ ಎದುರಿಸಿ ಹೋರಾಡಿ ಗೆಲ್ಲಬೇಕು. ನಮ್ಮನ್ನು ನಂಬಿಕೊಂಡು ಕುಟುಂಬಸ್ಥರು ಇರುತ್ತಾರೆ. ಅವರ ಬಗ್ಗೆಯಾದರೂ ಒಮ್ಮೆ ಯೋಚನೆ ಮಾಡಬೇಕು, ಆಗಲಾದರೂ ಮನಸ್ಸು ಬದಲಾಗುತ್ತದೆ. ಒತ್ತಡದಿಂದ ಮುಕ್ತರಾಗಲು ಧ್ಯಾನ, ಯೋಗ ಪ್ರಾಣಯಾಮ ಮಾಡಿದರೆ ಸಹಾಯವಾಗುತ್ತದೆ ಎಂದು ಹೇಳಿದರು.  ಜಿಲ್ಲಾ ಸರ್ಜನ್ ಡಾ. ಎಂ.ಬಿ. ನಾಗೇಂದ್ರಪ್ಪ ಮಾತನಾಡಿ ಸೃಷ್ಟಿಯಲ್ಲಿ ಕೋಟ್ಯಂತರ ಜೀವಿಗಳಿವೆ. ಪ್ರತಿಯೊಂದು ಜೀವಿಯು ಹುಟ್ಟಿದ ಮೇಲೆ ತನ್ನದೇ ಆದ ಕರ್ತವ್ಯವನ್ನು ನಿರ್ವಹಿಸುತ್ತವೆ. ಅದೇ ರೀತಿಯಾಗಿ ಮನುಷ್ಯ ಇತರೆ ಜೀವಿಗಳಿಗಿಂತ ಹೆಚ್ಚು ಆಲೋಚಿಸುವ, ಸರಿ, ತಪ್ಪು ಎಂದು ತಿಳಿದುಕೊಳ್ಳುವ ವಿಶಿಷ್ಟವಾದ ಶಕ್ತಿಯನ್ನು ಪಡೆದುಕೊಡಿರುತ್ತಾನೆ. ಆದ್ದರಿಂದ ಜೀವನದಲ್ಲಿ ತನ್ನ ಕರ್ತವ್ಯವೇನು ಎಂಬುದನ್ನು ಅರಿತು ಬದುಕಬೇಕು, ಸಮಾಜದಲ್ಲಿ ಸುಧಾರಣೆ ತರುವಂತಹ ಕೆಲಸವನ್ನು ಮಾಡಬೇಕು ಎಂದರು.  ಡಿಎಚ್‌ಒ ಡಾ. ಷಣ್ಮುಖಪ್ಪ ಮಾತನಾಡಿ ತಂದೆ, ತಾಯಿ ಅಥವಾ ಕುಟುಂಬದವರು ನಮ್ಮನ್ನು ಬೆಳೆಸಲು ಎಷ್ಟು ಕಷ್ಟ ಪಟ್ಟಿರುತ್ತಾರೆ. ಈ ನಿಟ್ಟಿನಲ್ಲಿ ಅವರ ನೋವುಗಳನ್ನು ಅರ್ಥ ಮಾಡಿಕೊಳ್ಳಬೇಕು, ಸಿಟ್ಟಿನ ಕೈಗೆ ಬುದ್ಧಿಯನ್ನು ಕೊಟ್ಟು ಆತ್ಮಹತ್ಯೆಗೆ ಪ್ರಯತ್ನಿಸಬಾರದು ಎಂದು ತಿಳಿಸಿದರು.  ಜಿಲ್ಲಾ ಕುಷ್ಠ ರೋಗ ನಿವಾರಣಾಧಿಕಾರಿ ಡಾ.ಮಂಜುನಾಥ ಎಲ್.ಪಾಟೀಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿ.ಎಸ್. ಚನ್ನಬಸಪ್ಪ ಪ್ರಥಮ ದರ್ಜೆ ಕಾಲೇಜಿನ ಬಿ.ಸಿ.ಶಿವಕುಮಾರ, ಪ್ರಾಚಾರ್ಯ ಪ್ರೊ.ಎಂ.ಸಿ. ಗುರು, ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಅಣ್ಣೇಶ್.ಪಿ, ಅನುಷಾ. ಎನ್.ಎಚ್. ಇದ್ದರು.