ದಾವಣಗೆರೆ/ಹೊನ್ನಾಳಿ : ಮಾಜಿ ಸಚಿವ ಬಿ.ಸಿ. ಪಾಟೀಲ್ ಅವರ ಅಳಿಯ ಕೆ.ಜಿ. ಪ್ರತಾಪ್ ಕುಮಾರ್ (42) ಹೊನ್ನಾಳಿ ತಾಲೂಕು ಅರಕೆರೆ ಗ್ರಾಮದ ಬಳಿಯ ಅರಣ್ಯ ಪ್ರದೇಶದಲ್ಲಿ ಸೋಮವಾರ ಮಧ್ಯಾಹ್ನ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೊಮಾರನಹಳ್ಳಿ ಅರಣ್ಯಪ್ರದೇಶದಲ್ಲಿ ರಸ್ತೆಬದಿ ಕಾರು ನಿಲ್ಲಿಸಿದ ಪ್ರತಾಪ್ ಕುಮಾರ್, ವಾಹನದಲ್ಲೇ ವಿಷ ಸೇವನೆ ಮಾಡಿದ್ದಾರೆ. ಅವರು ಅಸ್ವಸ್ಥಗೊಂಡಿದ್ದನ್ನು ನೋಡಿದ ಸ್ಥಳೀಯರು ಹೊನ್ನಾಳಿ ಆಸ್ಪತ್ರೆಗೆ ಕರೆದುಕೊಂಡು ಹೋದರು. ಅಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಚಿಂತಾಜನಕ ಸ್ಥಿತಿ ಇದ್ದುದರಿಂದ ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಷ್ಟು ಹೊತ್ತಿಗೆ ಮೃತಪಟ್ಟಿದ್ದರು ಎಂದು ಮೂಲಗಳು ಹೇಳಿವೆ. ಕಾರಿನಲ್ಲಿ ಪ್ರತಾಪ್ ಒಬ್ಬರೇ ಇದ್ದರು. ವಾಹನದಲ್ಲಿ ವಿಷದ ಬಾಟಲಿ (ಕೀಟನಾಶಕ) ಪತ್ತೆಯಾಗಿದೆ. ಯಾವುದೆ ಡೆತ್‌ನೋಟ್ ಸಿಕ್ಕಿಲ್ಲ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಹೊನ್ನಾಳಿ ಪೊಲೀಸರು ಸ್ಥಳಕ್ಕೆ ಧಾವಿಸಿ ತನಿಖೆ ಕೈಗೆತ್ತಿಕೊಂಡಿದ್ದಾರೆ. ಪ್ರತಾಪ್ ಅವರು ಶಿವಮೊಗ್ಗ ಕಡೆಯಿಂದ ಹೊನ್ನಾಳಿ ಮಾರ್ಗವಾಗಿ ಬಸವಾಪಟ್ಟಣ ಕಡೆಗೆ ಹೊರಟಿದ್ದರು ಎನ್ನಲಾಗುತ್ತಿದೆ. ಪ್ರತಾಪ್ ಸಹೋದರ ಪ್ರಭು ಅವರಿಂದ ಪೊಲೀಸರಿಗೆ ಹೆಚ್ಚಿನ ಮಾಹಿತಿ ದೊರೆತಿದೆ. ‘ಮೇಲ್ನೋಟಕ್ಕೆ ವೈಯಕ್ತಿಕ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ದೂರು ಸ್ವೀಕರಿಸಿದ ನಂತರ ವಿವರಗಳು ತಿಳಿಯಲಿದ್ದು ಅದನ್ನು ಆಧರಿಸಿ ಮುಂದಿನ ತನಿಖೆ ನಡೆಸಲಾಗುವುದು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಸುದ್ದಿಗಾರರಿಗೆ ತಿಳಿಸಿದರು. ... ಪ್ರತಾಪ್ ಕುಮಾರ್, ಬಿ.ಸಿ. ಪಾಟೀಲರ ಪತ್ನಿ ವನಜಾ ಪಾಟೀಲ್ ಅವರ ಸಹೋದರ. ಮೂಲತಃ ಚನ್ನಗಿರಿ ತಾಲೂಕು ಕತ್ತಲಗೆರೆ ಗ್ರಾಮದವರು. 15 ವರ್ಷಗಳ ಹಿಂದೆ ಬಿ.ಸಿ. ಪಾಟೀಲ್ ಅವರ ಹಿರಿಯ ಪುತ್ರಿ ಸೌಮ್ಯಾ ಅವರನ್ನು ಮದುವೆಯಾಗಿದ್ದರು. ಹಿರೇಕೆರೂರಿನಲ್ಲೇ ವಾಸವಾಗಿದ್ದ ಪ್ರತಾಪ್, ಕೃಷಿ ಭೂಮಿ ಮತ್ತು ಕೆಲ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದರು ಎಂದು ತಿಳಿದು ಬಂದಿದೆ. ಆದರೆ ಆತ್ಮಹತ್ಯೆಗೆ ಏನು ಕಾರಣ ಎಂಬುದು ತನಿಖೆಯ ನಂತರವೇ ತಿಳಿಯಬೇಕಿದೆ. ಸದ್ಯಕ್ಕೆ ವೈಯಕ್ತಿಕ ಕಾರಣ ಎಂದು ಹೇಳಲಾಗುತ್ತಿದೆ