ಜಗಳೂರು: ಪಟ್ಟಣದ ಮುಖ್ಯರಸ್ತೆಯಲ್ಲಿ ಜನರು ಅನಧಿಕೃತವಾಗಿ ಕಟ್ಟಡಗಳನ್ನು ನಿರ್ವಿುಸಿಕೊಂಡಿದ್ದು ಈಗಾಗಲೇ ಪರಿಶೀಲನೆ ಮಾಡಲಾಗಿದೆ. ಮಾಸ್ಟರ್ ಪ್ಲಾನ್ ಪ್ರಕಾರ 69 ಅಡಿಗೆ ರಸ್ತೆ ವಿಸ್ತರಣೆಯಾಗಲಿದ್ದು, ಅದರಂತೆ ಕಟ್ಟಡಗಳನ್ನು ತೆರವುಗೊಳಿಸಲಾಗುತ್ತಿದೆ ಎಂದು ದಾವಣಗೆರೆ ಉಪವಿಭಾಗಾಧಿಕಾರಿ ಸಂತೋಷ್ಕುಮಾರ್ ಹೇಳಿದರು.
ಪಟ್ಟಣದ ಮಧ್ಯದಲ್ಲಿ ಹಾದು ಹೋಗಿರುವ ಮಲ್ಪೆ- ಮೊಳಕಾಲ್ಮೂರು ರಾಜ್ಯ ಹೆದ್ದಾರಿ-65 ರ ರಸ್ತೆ ವಿಸ್ತರಣೆ ಹಿನ್ನೆಲೆ ಮಂಗಳವಾರ ಕಾಮಗಾರಿ ಪರಿಶೀಲಿಸಿ ಮಾತನಾಡಿದರು.
ರಸ್ತೆಯ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ನಿರ್ವಿುಸಿಕೊಂಡಿದ್ದ ಕಟ್ಟಡಗಳನ್ನು ಕೆಲವು ಮಾಲೀಕರು ಸ್ವತಃ ತೆರವುಗೊಳಿಸಿದ್ದಾರೆ. ಇನ್ನು ಕೆಲವರು ಕೇವಲ 50 ಅಡಿಗೆ ತೆರವು ಮಾಡಿ ಕಟ್ಟಡ ಮರು ನಿರ್ಮಾಣ ಮಾಡಿಕೊಂಡಿದ್ದಾರೆ. ಬುಧವಾರ ಬಲ ಮತ್ತು ಎಡಭಾಗದಲ್ಲಿ ಪರಿಶೀಲನೆ ಮಾಡಲಾಗುವುದು. ಒತ್ತುವರಿಯಾಗಿದ್ದರೆ ಮುಲಾಜಿಲ್ಲದೆ ತೆರವುಗೊಳಿಸಲಾಗುವುದು. 69 ಅಡಿಯೊಳಗೆ ಅಧಿಕೃತ ಕಟ್ಟಡ, ಖಾಲಿ ಜಾಗ, ಕಚ್ಚಾ, ಪಕ್ಕಾ ಆಸ್ತಿಗಳನ್ನು ಹೊಂದಿದ್ದರೆ ಅವರಿಗೆ ಪರಿಹಾರ ಕೊಡಿಸಲಾಗುವುದು ಎಂದರು.
ರಸ್ತೆಯಲ್ಲಿ ಸರ್ಕಾರಿ ಕಟ್ಟಡಗಳಿವೆ. ಅವುಗಳನ್ನೂ ತೆರವು ಮಾಡಲಾಗುವುದು. ಲೋಕೋಪಯೋಗಿ, ಸರ್ವೆ ಇಲಾಖೆ ಹಾಗೂ ಪಟ್ಟಣ ಪಂಚಾಯಿತಿ ಈ ಮೂರು ಇಲಾಖೆಯ ಅಧಿಕಾರಿಗಳು ಸೇರಿಕೊಂಡು ಎಷ್ಟು ಅಧಿಕೃತ ಕಟ್ಟಡಗಳಿವೆ ಎಂಬ ಅಧಿಕೃತ ಮಾಹಿತಿಯನ್ನು ಪಡೆಯಲಿದ್ದಾರೆ. ಈಗಾಗಲೇ ಅಂದಾಜುಪಟ್ಟಿ ತಯಾರು ಮಾಡಿ ಜಿಲ್ಲಾಧಿಕಾರಿಗಳಿಗೆ ಕಳಿಸಲಾಗಿದೆ ಎಂದು ತಿಳಿಸಿದರು.
ರಸ್ತೆ ವಿಸ್ತರಣೆ, ಅಭಿವೃದ್ಧಿಯಲ್ಲಿ ಸಾರ್ವಜನಿಕರ ಸಹಕಾರ ಮುಖ್ಯವಾಗಿದೆ. ಸ್ವಯಂ ಪ್ರೇರಿತರಾಗಿ ತೆರವು ಮಾಡಿದರೆ ಅಧಿಕಾರಿಗಳಿಗೆ ತೊಂದರೆ ತಪ್ಪುತ್ತದೆ. ಇಲ್ಲವಾದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ತಹಸೀಲ್ದಾರ್ ಸೈಯದ್ ಕಲೀಂ ಉಲ್ಲಾ, ಪಪಂ ಕಂದಾಯ ನಿರೀಕ್ಷಕ ಮೋಯಿದ್ದೀನ್, ಪಿಡಬ್ಲ್ಯುಡಿ ಎಇ ಪುರುಷೋತ್ತಮ ರೆಡ್ಡಿ, ಕಂದಾಯ ಇಲಾಖೆ ಆರ್ಐ ಕೀರ್ತಿಕುಮಾರ್, ಗ್ರಾಮ ಲೆಕ್ಕಾಧಿಕಾರಿ ಪ್ರದೀಪ್ ಮತ್ತಿತರರಿದ್ದರು.
ಗೊಂದಲ ಬಗೆಹರಿಸಲು ಅ.29ಕ್ಕೆ ಸಭೆ
ಪಟ್ಟಣದ ಮುಖ್ಯರಸ್ತೆ ವಿಸ್ತರಣೆಯಲ್ಲಿ ಸಾಕಷ್ಟು ಗೊಂದಲ ನಿರ್ವಣವಾಗಿದೆ. 69 ಅಥವಾ 50 ಅಡಿ ಎಂಬುವುದು ಸ್ಪಷ್ಟತೆ ಇಲ್ಲ. ಸರ್ಕಾರದ ನಿಯಮದ ಪ್ರಕಾರ ಎಷ್ಟು ಅಡಿ ವಿಸ್ತರಣೆಯಾಗಲಿದೆ ಎಂದು ಸಾರ್ವಜನಿಕರು ಅಧಿಕಾರಿಗಳನ್ನು ಪ್ರಶ್ನಿಸಿದಾಗ, ಇದಕ್ಕೆ ಎಸಿ ಸಂತೋಷ್ಕುಮಾರ್ ಪ್ರತಿಕ್ರಿಯಿಸಿ, ಬುಧವಾರ ಶಾಸಕ ಬಿ. ದೇವೇಂದ್ರಪ್ಪ ಅವರ ಅಧ್ಯಕ್ಷತೆಯಲ್ಲಿ ಅಧಿಕಾರಿಗಳ ಜತೆ ಸಭೆ ಕರೆಯಲಾಗಿದೆ. ಇಲ್ಲಿ ರ್ಚಚಿಸಿ ಸಲಹೆ ಸಹಕಾರ ಪಡೆದು ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.
52 ಕೋಟಿ ರೂ. ಪರಿಹಾರ ಮೀಸಲು
ನ್ಯಾಯಾಲಯದ ಮೊರೆ ಹೋದವರಿಗೆ ಅಧಿಕೃತವಾಗಿ ಕಟ್ಟಡ ಕಟ್ಟಿಕೊಂಡಿದ್ದರೆ, ನಿವೇಶನ ಹೊಂದಿದ್ದರೆ, ಪಪಂನಲ್ಲಿ ಖಾತೆ ಹೊಂದಿದ್ದರೆ ಅಂತವರಿಗೆ ಪರಿಹಾರ ಕೊಟ್ಟು ತೆರವುಗೊಳಿಸಿ ರಸ್ತೆ ವಿಸ್ತರಣೆ ಮಾಡಲಾಗುವುದು. ಹಾಗಾಗಿ ಎಡ ಮತ್ತು ಬಲ ಬದಿಯ ಅಧಿಕೃತ ಕಟ್ಟಡಗಳ ತೆರವಿಗೆ ಸುಮಾರು 52 ಕೋಟಿ ರೂ. ಪರಿಹಾರ ನಿಗದಿಪಡಿಸಲಾಗಿದೆ ಎಂದು ಎಸಿ ಸಂತೋಷ್ಕುಮಾರ್ ತಿಳಿಸಿದರು.