ದಾವಣಗೆರೆ : ಐಎಎಸ್ ಪರೀಕ್ಷೆಗಳಲ್ಲಿ ಕನ್ನಡದ ಪ್ರತಿಭೆಗಳು ಹೆಚ್ಚು ರ‌್ಯಾಂಕ್ ಗಳಿಸುವಂತಾಗಬೇಕು ಎಂದು, ಇನ್ಸೈಟ್ ಸಂಸ್ಥೆಯ ಸಂಸ್ಥಾಪಕ ಜಿ.ಬಿ. ವಿನಯ್ ಕುಮಾರ್ ಆಶಿಸಿದರು.
ರಾಜ್ಯ ಪರಿಶಿಷ್ಟ ಪಂಗಡಗಳ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದಿಂದ ಇಲ್ಲಿನ ರಾಜ್ಯ ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ಭಾನುವಾರ, ವಾಲ್ಮೀಕಿ ನಾಯಕ ಸಮುದಾಯದ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭದಲ್ಲಿ ವಿಶೇಷ ಉಪನ್ಯಾಸ ನೀಡಿದರು.
ರಾಜಸ್ಥಾನ ಸೇರಿ ಉತ್ತರ ಭಾರತದ ರಾಜ್ಯಗಳ ಅಭ್ಯರ್ಥಿಗಳು ರ‌್ಯಾಂಕುಗಳನ್ನು ಬಾಚಿಕೊಳ್ಳುತ್ತಿದ್ದಾರೆ. ನಮ್ಮ ರಾಜ್ಯದಲ್ಲೂ ಪ್ರತಿಭಾವಂತರಿದ್ದಾರೆ. ಸರಿಯಾದ ತರಬೇತಿ ಪಡೆದು ಪ್ರಯತ್ನ ಮಾಡಿದರೆ ಯಶಸ್ಸು ಸಾಧ್ಯವಿದೆ. ಅದರಲ್ಲೂ ತಳ ಸಮುದಾಯದ ಅಭ್ಯರ್ಥಿಗಳು ದೊಡ್ಡ ಹುದ್ದೆಗಳಿಗೆ ಏರಬೇಕಿದೆ ಎಂದು ತಿಳಿಸಿದರು.
ಐಎಎಸ್ ಪರೀಕ್ಷೆ ಉತ್ತೀರ್ಣರಾಗುವುದು ಸುಲಭವಲ್ಲ. ಕೇವಲ ಪುಸ್ತಕದ ಹುಳುವಾದರೆ ಪ್ರಯೋಜನವಿಲ್ಲ. ಆತ್ಮವಿಶ್ವಾಸ ಮೈಗೂಡಿಸಿಕೊಂಡು ಅದಕ್ಕೆ ಬೇಕಾದ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು. ವಿಮರ್ಶೆ, ವಿಶ್ಲೇಷಣೆ ಮಾಡುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಮಕ್ಕಳು ದಿನಪತ್ರಿಕೆಗಳನ್ನು ಹೆಚ್ಚಾಗಿ ಓದಬೇಕು. ಪಠ್ಯೇತರ ಚಟುವಟಿಕೆಗಳಲ್ಲಿ ಭಾಗಿಯಾಗಬೇಕು. ಪಾಲಕರು ಮಕ್ಕಳನ್ನು ಒಂದು ಪ್ರದೇಶಕ್ಕೆ ಮಿತಿಗೊಳಿಸದೆ ಹೊರಗಿನ ಪ್ರಪಂಚದೊಂದಿಗೆ ಬೆರೆಯುವಂತೆ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಪದವಿಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕರಿಸಿದ್ದಪ್ಪ ಮಾತನಾಡಿ, ಸಮಾಜದ ವತಿಯಿಂದ ಇಂಜಿನಿಯರಿಂಗ್, ಮೆಡಿಕಲ್ ಇನ್ನಿತರ ವೃತ್ತಿಪರ ಶಿಕ್ಷಣ ಕಾಲೇಜುಗಳನ್ನು ಆರಂಭಿಸುವ ಅಗತ್ಯವಿದೆ. ವಿದ್ಯಾರ್ಥಿಗಳು ಸಾಧನೆಯ ಮಾರ್ಗದಲ್ಲಿ ಪರಿಶ್ರಮಪಡಬೇಕು. ಪಾಲಕರು ಅವರಿಗೆ ಆಸರೆಯಾಗಿ ನಿಲ್ಲಬೇಕು ಎಂದು ತಿಳಿಸಿದರು.
ಸಂಘದ ಜಿಲ್ಲಾಧ್ಯಕ್ಷ ಕೆ.ಸಿ. ಶ್ರೀನಿವಾಸ ಮೂರ್ತಿ ಮಾತನಾಡಿ, ನಮ್ಮ ಸಮುದಾಯ ಶೈಕ್ಷಣಿಕ, ಸಾಮಾಜಿಕ, ರಾಜಕೀಯ ಕ್ಷೇತ್ರಗಳಲ್ಲಿ ಹಿಂದುಳಿದಿದೆ. ಸಮಾಜದವರು ವೈಜ್ಞಾನಿಕತೆ, ವೈಚಾರಿಕತೆ ಬೆಳೆಸಿಕೊಳ್ಳಬೇಕು. ದುಶ್ಚಟಗಳಿಂದ ದೂರವಿರಬೇಕು. ಭಯ, ಆತಂಕ, ಮೌಢ್ಯಗಳಿಂದ ಹೊರ ಬರಬೇಕು ಎಂದು ಅಭಿಪ್ರಾಯಪಟ್ಟರು.
ಕಾಂಗ್ರೆಸ್ ಮುಖಂಡ ಹೊದಿಗೆರೆ ರಮೇಶ್, ಜಿಲ್ಲಾ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಪಡೆದ ಎ.ಎಲ್. ನಾಗವೇಣಿ, ಪ್ರಗತಿಪರ ರೈತ ನಾಗೇಂದ್ರಪ್ಪ, ಶಂಕರ್, ಹಾಲೇಶಪ್ಪ, ಗುಮ್ಮನೂರು ಚನ್ನಬಸಪ್ಪ, ಬಸವರಾಜಪ್ಪ, ಶ್ರೀನಿವಾಸ್ ಹರಿಹರ, ಸಿದ್ದಪ್ಪ, ಉದ್ಯಮಿ ಕರೂರು ಹನುಮಂತಪ್ಪ ಇದ್ದರು. ಕೆ.ಎಂ. ಪ್ರಕಾಶ್ ಗುಮ್ಮನೂರು ಸ್ವಾಗತಿಸಿದರು.
...
(ಕೋಟ್)
ಯುವಕರು, ತಳ ಸಮುದಾಯದವರು ಎತ್ತರಕ್ಕೆ ಬೆಳೆಯಲು ಪ್ರೋತ್ಸಾಹ ನೀಡುವ ವಾತಾವರಣ ರಾಜಕಾರಣದಲ್ಲಿ ಕಂಡುಬರುತ್ತಿಲ್ಲ. ಮುಕ್ತ ವಾತಾವರಣ ಇರಬೇಕು, ಯಾವುದೇ ನಿರ್ಬಂಧ ಇರಬಾರದು. ಹೊಸಬರು ಬೆಳೆಯಲು ಅವಕಾಶ ನೀಡಬೇಕು. ಈ ಹಿನ್ನೆಲೆಯಲ್ಲಿ ನಾವೆಲ್ಲ ಪ್ರಜ್ಞಾವಂತರಾಗಬೇಕಿದೆ.
ಜಿ.ಬಿ. ವಿನಯ್ ಕುಮಾರ್, ಇನ್ಸೈಟ್ ಸಂಸ್ಥೆಯ ಸಂಸ್ಥಾಪಕ