ಜಿಲ್ಲೆ

ವಿದ್ಯಾರ್ಥಿಗಳಿಗೆ ಬೇಕು ನಾಯಕತ್ವ ಗುಣ

ರಮೇಶ ಜಹಗೀರದಾರ್

ದಾವಣಗೆರೆ  : ವಿದ್ಯಾರ್ಥಿಗಳು ನಾಯಕತ್ವ, ಶಿಸ್ತು ಮತ್ತು ದೇಶಭಕ್ತಿಯನ್ನು ಬೆಳೆಸಿಕೊಳ್ಳಬೇಕು ಎಂದು ಸಶಸ್ತ್ರ ಮೀಸಲು ಪಡೆಯ ಡಿವೈಎಸ್ಪಿ ಪಿ.ಬಿ. ಪ್ರಕಾಶ ಹೇಳಿದರು.  ನಗರದ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರದಲ್ಲಿ (ಸಿಬಿಎಸ್‌ಇ) ಸೋಮವಾರ, ವಿದ್ಯಾರ್ಥಿ ಸಂಸತ್ತಿನ ಉದ್ಘಾಟನೆ ಹಾಗೂ ಪ್ರತಿಜ್ಞಾವಿಧಿ ಸ್ವೀಕಾರ ಸಮಾರಂಭದಲ್ಲಿ ಮಾತನಾಡಿದರು.  ಶಾಲೆಗಳಲ್ಲಿ ವಿದ್ಯಾರ್ಥಿ ಸಂಸತ್‌ನಂಥ ಕಾರ್ಯಕ್ರಮಗಳನ್ನು ಆಯೋಜಿಸುವುದರಿಂದ ವಿದ್ಯಾರ್ಥಿಗಳು ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಲು ಸಹಾಯಕವಾಗುತ್ತದೆ ಎಂದು ತಿಳಿಸಿದರು.  ಆರ್‌ವಿಕೆ ಶಾಲೆ ಕಾರ್ಯದರ್ಶಿ ಮತ್ತು ಆರ್‌ವಿಕೆ ಸಿಬಿಎಸ್‌ಇ ಉತ್ತರ ಕ್ಲಸ್ಟರ್ ಶಾಲೆಗಳ ಆಡಳಿತ ಮುಖ್ಯಸ್ಥ ಎಚ್. ಜಯಣ್ಣ ಮಾತನಾಡಿ, ಉತ್ತಮ ಶಾಲಾ ಪರಿಸರ ಮತ್ತು ಸಮಾಜವನ್ನು ರೂಪಿಸುವ ಅಗತ್ಯವನ್ನು ಒತ್ತಿ ಹೇಳಿದರು.  ಸುಧಾಕರ್ ನಾಯಕ್ ಶಾಲಾ ಸಂಸತ್ ಚುನಾವಣೆಯ ವಿಜೇತರನ್ನು ಘೋಷಿಸಿದರು. ಬ್ಯಾಡ್ಜಿಂಗ್ ಸಮಾರಂಭ ನಡೆಯಿತು. ಅಲ್ಲಿ ಚುನಾಯಿತ ವಿದ್ಯಾರ್ಥಿ ಪ್ರತಿನಿಧಿಗಳನ್ನು ಮುಖ್ಯ ಅತಿಥಿ ಮತ್ತು ಗಣ್ಯರು ತಮ್ಮ ಹೊಸ ಜವಾಬ್ದಾರಿಗಳನ್ನು ಸಂಕೇತಿಸುವ ಬ್ಯಾಡ್ಜ್ ಮತ್ತು ಸ್ಲ್ಯಾಷ್‌ಗಳೊಂದಿಗೆ ಗೌರವಿಸಿದರು.  ಹೊಸದಾಗಿ ಆಯ್ಕೆಯಾದ ಉಪಾಧ್ಯಕ್ಷ ಧನುಷ್ ಸಿ. ಗೌಡ ವಿದ್ಯಾರ್ಥಿ ನಾಯಕರ ಪರವಾಗಿ ಮಾತನಾಡಿದರು. ಸಂತೋಷ್ ಕ್ರೀಡಾ ತಂಡಗಳ ನಾಯಕರನ್ನು ಘೋಷಿಸಿದರು. ನಂತರ ಶಾಲೆಯ ನಾಲ್ಕು ಕ್ರೀಡಾ ತಂಡಗಳಾದ ಕದಂಬ, ಹೊಯ್ಸಳ, ರಾಷ್ಟ್ರಕೂಟ ಮತ್ತು ಚಾಲುಕ್ಯರ 8 ತಂಡ ನಾಯಕರಿಗೆ ಮುಖ್ಯ ಅತಿಥಿಗಳು ಮತ್ತು ಗಣ್ಯರು ಬ್ಯಾಡ್ಜ್ ಹಾಕಿದರು.  ಶಾಲಾ ಸಂಚಾಲಕ ಶಂಭುಲಿಂಗಪ್ಪ, ವಿನಾಯಕ ರಾನಡೆ, ಆರ್‌ವಿಕೆ ಆಡಳಿತ ಮಂಡಳಿ ಸದಸ್ಯೆ ಭಾರತಿ ಹೆಗಡೆ, ಪ್ರಾಚಾರ್ಯ ಪಿ.ಆರ್. ಮಂಜುನಾಥ್, ಉಪ ಪ್ರಾಚಾರ್ಯ ಶಶಿಧರ್ ಇದ್ದರು.  ಬಿ. ರಶ್ಮಿ ಸ್ವಾಗತಿಸಿದರು. ಎಸ್. ಮಂಜುನಾಥ್ ಪ್ರಾಸ್ತಾವಿಕ ಮಾತನಾಡಿದರು. ಸುನಿಲ್ ಕುಮಾರ್ ವಂದಿಸಿದರು. ನೇತ್ರಾವತಿ ನಿರೂಪಿಸಿದರು.