ಜಗಳೂರು : ವಿದ್ಯಾರ್ಥಿಯ ಜೀವನ ರಂಜನೆ, ಪ್ರಚೋದನೆ, ಶೋಕಿ, ಮೊಬೈಲ್ ಇವುಗಳ ನಡುವೆಯೇ ಯೌವ್ವನ ಕಳೆದು ಹೋಗುತ್ತಿದೆ ಎಂದು ದಾವಣಗೆರೆ ವಿಶ್ರಾಂತ ಪ್ರಾಚಾರ್ಯ ದಾದಾಪೀರ್ ನವೀಲೇಹಾಳ್ ಕಳವಳ ವ್ಯಕ್ತಪಡಿಸಿದರು. ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ 2024-25ನೇ ಸಾಲಿನ ಸಾಂಸ್ಕೃತಿಕ, ಕ್ರೀಡಾ, ರಾ.ಸೇ.ಯೋ, ಯುವ ರೆಡ್‌ಕ್ರಾಸ್, ರೋವರ್ಸ್ ಮತ್ತು ರೇಂಜರ್ಸ್ ಐಕ್ಯೂಎಸಿ ಅಂತಹ ವಿವಿಧ ಸಮಿತಿ ಹಾಗೂ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಅಧ್ಯಾಪಕನು ಅಕಾಡೆಮಿಕ್ ಆಗಿ ಸೌಂದರ್ಯ ಹೆಚ್ಚಿಸಿಕೊಳ್ಳಬೇಕು, ಅಂತೆಯೇ ವಿದ್ಯಾರ್ಥಿಯೂ ಜ್ಞಾನದ ಸೌಂದರ್ಯ ಹೆಚ್ಚಿಸಿಕೊಳ್ಳಬೇಕು. ಕ್ರಿಯಾಶೀಲತೆ ಕಳೆದು ಹೋಗಿದ್ದು, ಓದುವವರ ಸಂಖ್ಯೆ ಕಡಿಮೆ ಮತ್ತು ನೋಡುವವರ ಸಂಖ್ಯೆ ಹೆಚ್ಚಳವಾಗಿದೆ. ಇದು ದೇಶದ ಅಭಿವೃದ್ಧಿಗೆ ಮಾರಕವಾಗಲಿದೆ. ಆದ್ದರಿಂದ ಹೆಚ್ಚು ಪುಸ್ತಕಗಳನ್ನು ಓದಿ ಜ್ಞಾನ ಭಂಡಾರ ವೃದ್ಧಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಚಿಕ್ಕವರಿಂದ ದೊಡ್ಡವರ ವರೆಗೂ ಪ್ರತಿಯೊಬ್ಬರ ಕೈಯಲ್ಲೂ ಮೊಬೈಲ್ ಇರುತ್ತದೆ. ಮೊಬೈಲ್ ಬಳಕೆಯಿಂದ ಪುಸ್ತಕ ಓದುವ ಹವ್ಯಾಸ ಮಾಯವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಉಪನ್ಯಾಸಕಿ ರಾಜೇಶ್ವರಿ ಮಾತನಾಡಿ, ಗ್ರಾಮೀಣ ಪ್ರದೇಶ ವಿದ್ಯಾರ್ಥಿಗಳಿಗೆ ಸರ್ಕಾರಿ ಕಾಲೇಜು ಸಹಕಾರಿಯಾಗಿದೆ. ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಗ್ರಾಮೀಣ ಪ್ರದೇಶದ ಪಾಲಕರು ಹೆಚ್ಚು ಒತ್ತು ನೀಡುತ್ತಿದ್ದಾರೆ. ತರಗತಿಗೆ ನಿತ್ಯವೂ ಹೋಗಿ ಚೆನ್ನಾಗಿ ಓದಿ ಉನ್ನತ ಸ್ಥಾನಕ್ಕೆ ಏರಬೇಕು ಎಂದರು. ಕಾಲೇಜಿನ ಪ್ರಾಚಾರ್ಯ ಡಾ. ರಂಗಪ್ಪ ಮಾತನಾಡಿ, ಪ್ರತಿಯೊಬ್ಬರಿಗೂ ಶಿಕ್ಷಣದ ಅರಿವಿರಬೇಕು. ಅಕ್ಷರ ಕಲಿಯದೇ ಇದ್ದರೆ ಜಗತ್ತಿನಲ್ಲಿ ಏನೂ ಸಾಧನೆ ಮಾಡಲು ಸಾಧ್ಯವಿಲ್ಲ. ಪಾಲಕರು ಅವಿದ್ಯಾವಂತರಾದರೂ ಮಕ್ಕಳ ಶಿಕ್ಷಣಕ್ಕಾಗಿ ಹೋರಾಟ ಮಾಡುತ್ತಾರೆ. ಅವರಿಗೆ ಗೌರವ ತರುವ ಕೆಲಸ ಮಾಡಿ ಎಂದರು. ಉಪನ್ಯಾಸಕ ಮೌನೇಶ್ ಪ್ರಾಸ್ತಾವಿಕ ಮಾತನಾಡಿದರು. ಉಪನ್ಯಾಸಕರಾದ ಸಲ್ಮಾತಾಜ್, ಪಿ. ಚೈತ್ರಾ, ವಿದ್ಯಾಶ್ರೀ, ಅಜ್ಜಪ್ಪ ಇತರರಿದ್ದರು.