ದಾವಣಗೆರೆ : ವಿದ್ಯಾರ್ಥಿಗಳು ದೇಶದ ಅಭಿವೃದ್ಧಿಯ ಪರವಾದ ಚಿಂತನೆಗಳನ್ನು ಬೆಳೆಸಿಕೊಳ್ಳಬೇಕು ಎಂದು ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದರು. ನಗರದ ಜಿಎಂ ವಿಶ್ವವಿದ್ಯಾಲಯದ ಆವರಣದಲ್ಲಿ ಗುರುವಾರ, ಜಿಎಂ ಸಮೂಹ ಸಂಸ್ಥೆಗಳಿಂದ ಆಯೋಜಿಸಿದ್ದ 78ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಎನ್.ಸಿ.ಸಿ ವಿದ್ಯಾರ್ಥಿಗಳು, ಜಿಎಂಎಚ್ ಪಿಯು ಕಾಲೇಜಿನ ವಿದ್ಯಾರ್ಥಿಗಳಿಂದ ನಡೆದ ಪಥ ಸಂಚಲನದ ಗೌರವ ವಂದನೆ ಸ್ವೀಕರಿಸಿ, ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ನಾವು ಜಾಗೃತರಾಗಿ ಒಳ್ಳೆಯ ಕಾರ್ಯಗಳನ್ನು ಮಾಡುತ್ತ ದೇಶದ ಸಂಸ್ಕೃತಿ ಹಾಗೂ ಮೂಲ ಸೌಕರ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ನಮ್ಮ ಸುತ್ತಮುತ್ತಲಿನವರಿಗೆ ಅರಿವು ಮೂಡಿಸಿ ರಾಷ್ಟ್ರವನ್ನು ಎಲ್ಲ ಕ್ಷೇತ್ರಗಳಲ್ಲಿ ಬಲಿಷ್ಠಗೊಳಿಸೋಣ ಎಂದು ತಿಳಿಸಿದರು. ಜಿಎಂ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ. ಎಸ್.ಆರ್. ಸಂಕಪಾಲ್ ಮಾತನಾಡಿ, ಭಾರತ ಆರ್ಥಿಕತೆಯಲ್ಲಿ ಮುನ್ನಡೆ ಸಾಧಿಸಲು ಬೇಕಾಗಿರುವ ಉದ್ದೇಶಗಳು ಹಾಗೂ ಅವುಗಳನ್ನು ಈಡೇರಿಸಲು ಉನ್ನತ ಶಿಕ್ಷಣದ ಮಹತ್ವ, ವಿದ್ಯಾರ್ಥಿಗಳು ಅದಕ್ಕೆ ಯಾವ ರೀತಿ ಸಜ್ಜಾಗಬೇಕು ಎಂದು ವಿವರಿಸಿದರು. ಗಾಯತ್ರಿ ಸಿದ್ದೇಶ್ವರ, ಜಿಎಂ ಸಮೂಹ ಸಂಸ್ಥೆಗಳ ಆಡಳಿತಾಧಿಕಾರಿ ವೈ.ಯು. ಸುಭಾಷ್ ಚಂದ್ರ, ಕಾಲೇಜಿನ ಸಹ ಆಡಳಿತಾಧಿಕಾರಿ ಜಿ.ಜೆ. ಶಿವಕುಮಾರ್ ಇದ್ದರು. ವಿದ್ಯಾರ್ಥಿಗಳು ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸಿಕೊಟ್ಟರು.