ದಾವಣಗೆರೆ : ಹಿರಿಯ ವಿದ್ಯಾರ್ಥಿಗಳು ತಾವು ಓದಿದ ಸರ್ಕಾರಿ ಕಾಲೇಜಿನ ಅಭಿವೃದ್ಧಿಗೆ ಕೊಡುಗೆ ನೀಡಬೇಕು ಎಂದು ಕಾಲೇಜು ಶಿಕ್ಷಣ ಇಲಾಖೆ ನಿವೃತ್ತ ಜಂಟಿ ನಿರ್ದೇಶಕ ಪ್ರೊ.ಗಂಗಾಧರಯ್ಯ ಹೇಳಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ವಾಣಿಜ್ಯ ವಿಭಾಗದ ಹಳೆಯ ವಿದ್ಯಾರ್ಥಿಗಳ ವೇದಿಕೆಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಗೌರವ ಸಮರ್ಪಣೆ ಸ್ವೀಕರಿಸಿ ಮಾತನಾಡಿದರು.
ವಿದ್ಯಾರ್ಥಿಗಳು ತಾವು ಓದಿದ ಶಾಲಾ-ಕಾಲೇಜು, ವಿದ್ಯೆ ಕಲಿತ ಮಂದಿರ ಮರೆಯಬಾರದು. ಇಂದಿನ ಕಾರ್ಯ ಅತ್ಯಂತ ಶ್ಲಾಘನೀಯ ಹಾಗೂ ಇತರರಿಗೂ ಮಾದರಿ ಎಂದು ತಿಳಿಸಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬೆಳೆದು ಬಂದ ಹಾದಿ ರೋಚಕ. ಇಂದು ಇಡೀ ರಾಜ್ಯದಲ್ಲಿ ಅತಿ ಹೆಚ್ಚು ವಿದ್ಯಾರ್ಥಿಗಳು ಓದುತ್ತಿರುವ ಕಾಲೇಜು ಆಗಿ ಹೊರಹೊಮ್ಮಿದೆ. ವಿದ್ಯಾರ್ಥಿಗಳು ತಾವು ಓದಿದ ಕಾಲೇಜಿನ ಸ್ಥಿತಿಗತಿ ಕುರಿತು ಗಮನ ಹರಿಸಬೇಕು. ಆಗ ಮಾತ್ರ ಕಾಲೇಜಿನ ಅಭಿವೃದ್ದಿ ಸಾಧ್ಯ ಎಂದರು.
ನಿವೃತ್ತ ಪ್ರಾಚಾರ್ಯ ಡಾ.ಮಲ್ಲಿಕಾರ್ಜುನ ಕಲಮರಹಳ್ಳಿ ಸನ್ಮಾನ ಸ್ವೀಕರಿಸಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಗುರುಗಳ ಸೇವೆ ನೆನಪಿಸಿಕೊಂಡು ವಂದನೆ ಸಲ್ಲಿಸುವ ಬಹು ಪವಿತ್ರ ಕಾರ್ಯ ಮಾಡುವುದು, ಕೇವಲ ಗುರುಗಳಿಗೆ ಕೃತಜ್ಞತೆ ಸಲ್ಲಿಸಿದ ಹಾಗೆ ಅಲ್ಲ. ಬದಲಿಗೆ ಶಿಕ್ಷಣ ವೃತ್ತಿಯನ್ನು ಇನ್ನೂ ಗಂಭೀರವಾಗಿ ಕೈಗೊಳ್ಳಬೇಕು ಎಂದು ಎಚ್ಚರಿಸಿದಂತೆ ಎಂದು ತಿಳಿಸಿದರು.
ಕಾಲೇಜಿನ ಪ್ರಾಚಾರ್ಯ ಪ್ರೊ. ದಾದಾಪೀರ್ ನವಿಲೇಹಾಳ್ ಸನ್ಮಾನಿತರಾಗಿ ಮಾತನಾಡಿ, ಹಳೆಯ ವಿದ್ಯಾರ್ಥಿಗಳು ಓದಿದ ಕಾಲೇಜಿನ ಸ್ಥಿತಿಗತಿ ಅರಿತು ಉದ್ಧಾರಕ್ಕೆ ಶ್ರಮಿಸಬೇಕು. ಕೈಲಾದ ಕೊಡುಗೆ ನೀಡಬೇಕು ಎಂದರು.
ನಿವೃತ್ತ ಪ್ರಾಚಾರ್ಯ ಪ್ರೊ.ಬಿ.ಬಿ. ಪಾಟೀಲ್, ಡಾ.ಈಶ್ವರಪ್ಪ, ಪ್ರೊ. ಸಿ.ಕೆ. ಮಹೇಶ್ವರಪ್ಪ, ಡಾ.ಜಿ.ಎನ್. ಮಲ್ಲಿಕಾರ್ಜುನಪ್ಪ, ಪ್ರೊ. ಶಂಕರ್ ಆರ್. ಶೀಲಿ, ಪ್ರೊ.ಕೆ. ಬಿ. ಬುಳ್ಳಪ್ಪ, ಪ್ರೊ. ಪಿ.ಜೆ. ಶಿವಮೂರ್ತಿ , ಡಾ.ಮರುಳಸಿದ್ದಪ್ಪ, ಪ್ರೊ. ಜಯನಾಯ್ಕ, ಡಾ. ಎಸ್.ಆರ್.ಆಂಜನಪ್ಪ, ಪ್ರೊ. ಬಸವರಾಜ್ ಸಿ. ತಹಸೀಲ್ದಾರ್, ಕಾಲೇಜಿನ ಪತ್ರಾಂಕಿತ ವ್ಯವಸ್ಥಾಪಕಿ ಟಿ. ಗೀತಾದೇವಿ ಅವರನ್ನು ಗೌರವಿಸಲಾಯಿತು.
ವೇದಿಕೆಯ ಸಂಚಾಲಕ ಕೆ.ಬಿ. ಶ್ರೀಶೈಲ ಕುಮಾರ್, ಹಳೆಯ ವಿದ್ಯಾರ್ಥಿಗಳಾದ ಲೆಕ್ಕ ಪರಿಶೋಧಕ ನಾಗರಾಜಮಠ್ ರಾಚಯ್ಯ, ಅಬಕಾರಿ ಇಲಾಖೆ ಅಧೀಕ್ಷಕ ಎಂ.ಪಿ. ರಂಗಯ್ಯ ಇದ್ದರು. ವೀರನಗೌಡ ಪಾಟೀಲ್ ಪ್ರಾಸ್ತಾವಿಕ ಮಾತನಾಡಿದರು.
ಪ್ರಾಧ್ಯಾಪಕಿ ಆರ್. ಯಶೋದಾ ಪ್ರಾರ್ಥಿಸಿದರು. ದೀಪಾ ಸ್ವಾಗತಿಸಿದರು. ಉಪನ್ಯಾಸಕಿ ನಳಿನಿ ನಿರೂಪಿಸಿದರು.