ಜಿಲ್ಲೆ

ಸಮರ್ಪಣೆ ಸಾಧನೆ ಕಡೆಗೆ ಗಮನವಿರಲಿ

ರಮೇಶ ಜಹಗೀರದಾರ್

ದಾವಣಗೆರೆ : ಶಿಕ್ಷಣದಲ್ಲಿ ಸಮರ್ಪಣೆ ಇರಬೇಕು. ಉತ್ತಮ ಪ್ರತಿಭೆ ಮೆರೆಯುವ ಮೂಲಕ ದೇಶಕ್ಕೆ ಅದ್ಭುತ ಕೊಡುಗೆ ನೀಡಬೇಕು ಎಂದು ತೊಗಟವೀರ ಸಮಾಜದ ಕುಲಗುರು ಶ್ರೀ ದಿವ್ಯಜ್ಞಾನಾನಂದಗಿರಿ ಸ್ವಾಮೀಜಿ ಹೇಳಿದರು.
 ಶ್ರೀ ತೊಗಟವೀರ ಸಮಾಜ ಸೇವಾ ಸಮಿತಿ ಟ್ರಸ್ಟ್ ಹಾಗೂ ಶ್ರೀ ಚೌಡೇಶ್ವರಿ ದೇವಸ್ಥಾನ ಸಮಿತಿಯಿಂದ ನಗರದ ತೊಗಟವೀರ ಸಮುದಾಯ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.
 ಜೀವನದಲ್ಲಿ ನಾವು ಏನನ್ನು ಅನ್ವೇಷಣೆ ಮಾಡುತ್ತೇವೋ ಅದರ ಜತೆಗೆ ಸಾಧನೆ ಕಡೆಗೆ ಗಮನ ಇರಬೇಕು. ಧ್ಯೇಯ, ಉದ್ದೇಶ ಹಾಗೂ ಲಕ್ಷೃ ಸರಿಯಾಗಿರಬೇಕು. ಜೀವನದ ಸವಾಲುಗಳನ್ನು ಧೈರ್ಯ ಮತ್ತು ಆತ್ಮವಿಶ್ವಾಸದಿಂದ ಎದುರಿಸಿ ಮುನ್ನಡೆಯಬೇಕು ಎಂದು ತಿಳಿಸಿದರು.
 ಎಲ್ಲರೂ ಕೇವಲ ಮೆಡಿಕಲ್, ಇಂಜಿನಿಯರಿಂಗ್ ಎಂದು ಒಂದೇ ಕಡೆ ಹೋಗದೆ ಸರಿಯಾದ ದಾರಿ ಕಂಡುಕೊಳ್ಳಬೇಕು. ಜಗತ್ತಿನಲ್ಲಿ ಎಲ್ಲದಕ್ಕೂ ಒಂದು ಕೊನೆಯಿದೆ. ಆದರೆ, ತತ್ವಕ್ಕೆ ಎಂದಿಗೂ ಕೊನೆಯಿಲ್ಲ, ಶಿಕ್ಷಣದ ಜತೆಗೆ ಧಾರ್ಮಿಕ ಶಿಕ್ಷಣ ಪಡೆಯಬೇಕಿದೆ ಎಂದರು.
 ತೊಗಟವೀರ ಸಮಾಜ ಸೇವಾ ಸಮಿತಿ ಟ್ರಸ್ಟ್ ಅಧ್ಯಕ್ಷ ಎಲ್.ಟಿ. ದ್ವಾರಕನಾಥ್ ಮಾತನಾಡಿ, ತೊಗಟವೀರ ಸಮಾಜದಿಂದ ಸಮುದಾಯ ಭವನ, ಹಾಸ್ಟೆಲ್ ನಿರ್ಮಾಣ ಹಾಗೂ ದೇವಸ್ಥಾನ ನವೀಕರಣ ಸೇರಿ ಹಲವಾರು ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದೆ. ಸಮಾಜ ಬಾಂಧವರು ಸಮಾಜದ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ಬೆಂಬಲ ನೀಡಬೇಕು ಎಂದರು.
 ಪ್ರಸ್ತುತ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳು ಶಿಕ್ಷಣದ ಕಡೆಗೆ ಹೆಚ್ಚು ಗಮನಹರಿಸಬೇಕು. ಐಎಎಸ್, ಐಪಿಎಸ್ ಹಾಗೂ ಕೆಎಎಸ್ ಮೊದಲಾದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸಿ ಉನ್ನತ ಹುದ್ದೆ ಪಡೆಯಬೇಕು ಎಂದು ಹೇಳಿದರು.
 ಟ್ರಸ್ಟ್ ಕಾರ್ಯದರ್ಶಿ ಡಿ. ಬಸವರಾಜಪ್ಪ ಮಾತನಾಡಿ, ಸಮಾಜವು ಪ್ರಗತಿಯ ಹಾದಿಯಲ್ಲಿ ಮುನ್ನಡೆದಿದ್ದರೂ ಸಮಾಜ ಬಾಂಧವರು ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಒಗ್ಗಟ್ಟು ಪ್ರದರ್ಶಿಸುತ್ತಿಲ್ಲ. ಸಮಾಜ ಸಂಘಟನೆ ಹಾಗೂ ಅಭಿವೃದ್ಧಿಗೆ ಎಲ್ಲರೂ ಭಾಗವಹಿಸುವುದು ಮುಖ್ಯ ಎಂದು ತಿಳಿಸಿದರು.
 ಟ್ರಸ್ಟ್ ಸಹ ಕಾರ್ಯದರ್ಶಿ ಜಿ.ಎನ್. ರವಿಕುಮಾರ್, ಖಜಾಂಚಿ ಈ.ಆರ್. ಶಂಕರ್, ಸದಸ್ಯರಾದ ಕೆ.ಎಚ್. ಅನಂತ್, ಕೆ.ಎಸ್. ಚೌಡಪ್ಪ, ಅನಸೂಯಮ್ಮ, ಆರ್. ವೆಂಕಟಾಚಲಮೂರ್ತಿ, ಎನ್.ಎ. ರಮೇಶ್‌ಕುಮಾರ್, ದೇವಸ್ಥಾನ ಸಮಿತಿ ಅಧ್ಯಕ್ಷ ಎನ್.ಆರ್. ವೆಂಕಟೇಶ್, ಮಾಜಿ ಅಧ್ಯಕ್ಷ ಎಲ್.ಟಿ. ಜಗನ್ನಾಥ್ ಇತರರು ಇದ್ದರು. ಎಲ್.ಎಸ್. ಸುಧಾಕರ್ ಸ್ವಾಗತಿಸಿದರು.
 ಇದೇ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿ ಹಾಗೂ ಪದವಿ ತರಗತಿಗಳಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಲಾಯಿತು.