ಜಿಲ್ಲೆ

ಶ್ರೀರಾಮ ಸೇನೆಯಿಂದ ಸಹಾಯವಾಣಿ ಆರಂಭ

ರಮೇಶ ಜಹಗೀರದಾರ್

ದಾವಣಗೆರೆ : ಲವ್ ಜಿಹಾದ್ ಜಾಲಕ್ಕೆ ಸಿಲುಕಿ ತೊಂದರೆಗೆ ಒಳಗಾಗುವ ಹಿಂದು ಯುವತಿಯರಿಗೆ ನೆರವಾಗಲು ಶ್ರೀರಾಮ ಸೇನೆ ಸಂಘಟನೆಯು ಸಹಾಯವಾಣಿ ಆರಂಭಿಸಿದೆ ಎಂದು ಸಂಘಟನೆಯ ರಾಜ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ಹೇಳಿದರು.
 ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಸಹಾಯವಾಣಿಯು ದಿನದ 24 ಗಂಟೆ ಕೆಲಸ ಮಾಡಲಿದೆ. ನೆರವಿಗಾಗಿ ರಾಜ್ಯದ ಯಾವುದೆ ಮೂಲೆಯಿಂದ ಕರೆ ಮಾಡಬಹುದು ಎಂದು ತಿಳಿಸಿದರು.
 ಕರೆ ಮಾಡಿ ತಮ್ಮ ಸಮಸ್ಯೆ ಹೇಳಿಕೊಂಡರೆ ಸಂಬಂಧಿಸಿದ ಜಿಲ್ಲಾ ತಂಡಗಳು ಸಹಾಯಕ್ಕೆ ಧಾವಿಸುತ್ತವೆ. ಆ ಮಹಿಳೆಯರಿಗೆ ಕಾನೂನು ಸಲಹೆ, ಶಿಕ್ಷಣಕ್ಕೆ ಸಹಾಯ, ಸ್ವಯಂ ಉದ್ಯೋಗ ಕಲ್ಪಿಸುವುದು ಸೇರಿ ಅವರಿಗೆ ಅಗತ್ಯವಿರುವ ನೆರವು ನೀಡಲಾಗುವುದು ಎಂದು ಹೇಳಿದರು.
 ಶ್ರೀರಾಮ ಸೇನೆಯು 20 ವರ್ಷಗಳಿಂದ ಲವ್ ಜಿಹಾದ್ ವಿರುದ್ಧ ಜಾಗೃತಿ ಮೂಡಿಸುತ್ತ ಬಂದಿದೆ. ಕಳೆದ 2-3 ತಿಂಗಳಲ್ಲಿ ಇಂಥ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ನೇಹಾ ಹತ್ಯೆ ಘಟನೆಯ ಉದಾಹರಣೆ ನೀಡಿದರು.
 ಲವ್ ಜಿಹಾದ್ ಕ್ಯಾನ್ಸರ್‌ನಂತೆ ವ್ಯಾಪಿಸಿದೆ. ದೇಶದಲ್ಲಿ ವ್ಯವಸ್ಥಿತ ಜಾಲ ಕೆಲಸ ಮಾಡುತ್ತಿದೆ. ದೇಶದಲ್ಲಿ ಪ್ರತಿ ದಿನ 172 ಯುವತಿಯರು ನಾಪತ್ತೆಯಾಗುತ್ತಿದ್ದಾರೆ, 169 ಯುವತಿಯರ ಅಪಹರಣವಾಗುತ್ತಿದೆ. ಆ್ಯಸಿಡ್ ದಾಳಿಗಳು ನಡೆಯುತ್ತಿವೆ ಎಂದು ತಿಳಿಸಿದರು.
 ದೇಶದಲ್ಲಿ 2014-19ರ ಅವಧಿಯಲ್ಲಿ 21,684 ಯುವತಿಯರು ನಾಪತ್ತೆಯಾಗಿದ್ದಾರೆ. 2019-21ರ ಅವಧಿಯಲ್ಲಿ 13.13 ಲಕ್ಷ ಮಹಿಳೆಯರ ಅಪಹರಣ, ಅತ್ಯಾಚಾರ ಘಟನೆಗಳು ನಡೆದಿವೆ ಎಂದು ಅಂಕಿ ಅಂಶ ನೀಡಿದರು.
 ಲವ್ ಜಿಹಾದ್ ಹೆಸರಿನಲ್ಲಿ ಅಪ್ರಾಪ್ತ ಬಾಲಕಿಯರ ಹತ್ಯೆಗಳಾಗಿವೆ. ಆರೋಪಿಗಳು ತಮ್ಮ ಮೂಲ ಗುರುತನ್ನು ಮುಚ್ಚಿಟ್ಟು ವಂಚಿಸಿದ್ದಾರೆ. ಅಶ್ಲೀಲ ವಿಡಿಯೋ ಮಾಡುವುದು, ಫೋಟೋ ತೆಗೆಯುವುದು, ಮಾದಕ ವಸ್ತುಗಳ ಜಾಲಕ್ಕೆ ತಳ್ಳುವುದು ಹೀಗೆ ವಿವಿಧ ರೀತಿಯಲ್ಲಿ ಅವರ ಶೋಷಣೆಯಾಗುತ್ತಿದೆ ಎಂದು ವಿವರಿಸಿದರು.
 ರಾಜ್ಯದಲ್ಲಿ 2022 ರಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರಲಾಯಿತು. ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಉಪ ನೋಂದಣಾಧಿಕಾರಿಗಳು ಅದನ್ನು ಪಾಲನೆ ಮಾಡುತ್ತಿಲ್ಲ. ಅಂಥವರನ್ನು ಎಚ್ಚರಿಸುವ ಕೆಲಸ ಮಾಡಲಾಗುವುದು ಎಂದು ತಿಳಿಸಿದರು.
 ಸಂಘಟನೆಯ ಜಿಲ್ಲಾಧ್ಯಕ್ಷ ಮಣಿ ಸರ್ಕಾರ್ ಮಾತನಾಡಿ, ದಾವಣಗೆರೆ ಜಿಲ್ಲೆಯಲ್ಲೂ ಲವ್ ಜಿಹಾದ್ ಹಾವಳಿಯಿದೆ. ಇದರ ವಿರುದ್ಧ ಜಾಗೃತಿ ಮೂಡಿಸಲಾಗುವುದು. ಕಾಲೇಜುಗಳು, ಹೋಟೆಲ್, ಜೂಸ್ ಸ್ಟಾಲ್ ಇನ್ನಿತರ ಕಡೆಗಳಲ್ಲಿ ಅರಿವು ಮೂಡಿಸುವ ಸ್ಟಿಕ್ಕರ್ ಅಂಟಿಸಲಾಗುವುದು ಎಂದು ಹೇಳಿದರು.
 ಚನ್ನಗಿರಿ ಘಟನೆ ಹಿನ್ನೆಲೆಯಲ್ಲಿ ಡಿವೈಎಸ್ಪಿ ಅವರ ಅಮಾನತು ಆದೇಶವನ್ನು ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು.
 ಸಂಘಟನೆಯ ರಾಜ್ಯ ಸಂಪರ್ಕ ಪ್ರಮುಖ್ ಪರಶುರಾಮ ನಡುಮನಿ, ಮುಖಂಡರಾದ ಪಿ. ಸಾಗರ್, ಬಿ.ಜಿ. ರಾಹುಲ್, ಶ್ರೀಧರ್, ಶಶಿಕುಮಾರ್, ಶಿವರಾಜ ಪೂಜಾರಿ, ಸುನಿಲ್ ವಾಲಿ, ರಾಜು, ಸಿದ್ಧಾರ್ಥ, ವಿನಯ್ ಇದ್ದರು.
 ...
 (ಬಾಕ್ಸ್)
 ತ್ರಿಶೂಲ ದೀಕ್ಷೆ
 ಲವ್ ಜಿಹಾದ್ ಆತಂಕದ ಹಿನ್ನೆಲೆಯಲ್ಲಿ ರಕ್ಷಣೆಗಾಗಿ ಹಿಂದು ಯುವತಿಯರಿಗೆ ತ್ರಿಶೂಲ ದೀಕ್ಷೆ ನೀಡುವ ಕಾರ್ಯಕ್ರಮವನ್ನು ಶ್ರೀರಾಮ ಸೇನೆ ರೂಪಿಸಿದೆ ಎಂದು ಗಂಗಾಧರ ಕುಲಕರ್ಣಿ ತಿಳಿಸಿದರು.
 ಜೂನ್ 9 ರಂದು ಹುಬ್ಬಳ್ಳಿ ಅಥವಾ ಧಾರವಾಡದಲ್ಲಿ ತ್ರಿಶೂಲ ದೀಕ್ಷೆಯ ಉದ್ಘಾಟನೆ ನಡೆಯಲಿದ್ದು 50 ಯುವತಿಯರಿಗೆ ತಲ್ವಾರ್, ಏರ್ ಗನ್ ನೀಡಿ ತರಬೇತಿ ಕೊಡಲಾಗುವುದು. ಪ್ರತಿ ಜಿಲ್ಲೆಯಲ್ಲೂ ಇಂಥ ಕಾರ್ಯಕ್ರಮ ಮಾಡಲಾಗುವುದು ಎಂದು ಹೇಳಿದರು.