ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ನೂತನ 6 ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಬುಧವಾರ ಭೂಮಿಪೂಜೆ ನೆರವೇರಿಸಿದರು.
ನಗರದ ಹೊಳೆಹೊನ್ನೂರು ತೋಟದ ಉರ್ದು ಶಾಲೆ, ಹೊಳೆಹೊನ್ನೂರು ತೋಟದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ತಾಲೂಕಿನ ಚಂದ್ರನಹಳ್ಳಿ, ಶಿರಗಾನಹಳ್ಳಿ ಮತ್ತು ಜಡಗನಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳ ಕೊಠಡಿಗಳ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದರು.
ಸರ್ಕಾರಕ್ಕೆ ಸಲ್ಲಿಸಿದ ಮನವಿಯಂತೆ ಪ್ರಥಮ ಹಂತದಲ್ಲಿ ಶಾಲಾ ಕೊಠಡಿಗಳ ನಿರ್ಮಾಣಕ್ಕೆ 83 ಲಕ್ಷ ರೂ. ಬಿಡುಗಡೆ ಆಗಿದೆ. ಹೆಚ್ಚಿದ ಕರೊನಾ ಪ್ರಕರಣಗಳ ಹಿನ್ನೆಲೆಯಲ್ಲಿ ಸ್ಥಗಿತವಾಗಿರುವ ಶಾಲಾ-ಕಾಲೇಜುಗಳು ಆರಂಭವಾಗುವ ವೇಳೆ ಕಾಮಗಾರಿಗಳು ಪೂರ್ಣಗೊಳ್ಳಬಹುದು ಎಂದರು.
ಕರೊನಾ ನಗರವಲ್ಲದೇ ಗ್ರಾಮೀಣ ಪ್ರದೇಶಗಳಿಗೂ ವ್ಯಾಪಿಸಿದ್ದು, ಸಾರ್ವಜನಿಕರು ಪರಸ್ಪರ ಅಂತರ ಹಾಗೂ ಮುಂಜಾಗ್ರತೆ ಕ್ರಮದ ಮೂಲಕ ರೋಗದಿಂದ ದೂರವಿರಬೇಕೆಂದರು.
ಪಾಲಿಕೆ ಸದಸ್ಯ ಉದಯಕುಮಾರ್, ಜಿ.ಡಿ.ಪ್ರಕಾಶ್, ಇಟ್ಟಿಗುಡಿ ಮಂಜುನಾಥ್, ಜಿಪಂ ಸದಸ್ಯರಾದ ಜಿ.ಸಿ.ನಿಂಗಪ್ಪ, ಕೆ.ಎಚ್.ಓಬಳಪ್ಪ, ತಾಪಂ.ಗ್ರಾಪಂ ಪ್ರತಿನಿಧಿಗಳು. ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಇದ್ದರು.