ಜಿಲ್ಲೆ

ಇನ್ನೂ ನಿರ್ಧಾರವಾಗದ ಸ್ಮಾರ್ಟ್‌ಸಿಟಿ ಭವಿಷ್ಯ

ರಮೇಶ ಜಹಗೀರದಾರ್

ದಾವಣಗೆರೆ  : ಸ್ಮಾರ್ಟ್‌ಸಿಟಿ ಮಿಷನ್‌ನ ಪ್ರಗತಿಯಲ್ಲಿರುವ ಯೋಜನೆಗಳು ಮತ್ತು ಎಸ್‌ಪಿವಿಗಳ ಭವಿಷ್ಯ ಕುರಿತು ಚರ್ಚಿಸಲು ಕೇಂದ್ರದ ವಸತಿ ಮತ್ತು ನಗರ ವ್ಯವಹಾರಗಳ ಇಲಾಖೆಯಿಂದ ಸೋಮವಾರ ಕರೆದಿದ್ದ ಸಭೆಯಲ್ಲಿ ಯಾವುದೇ ಸ್ಪಷ್ಟ ನಿರ್ಧಾರ ಹೊರ ಬಿದ್ದಿಲ್ಲ.  ಇಲಾಖೆಯ ಸಚಿವ ಮನೋಹರ ಲಾಲ್ ಅಧ್ಯಕ್ಷತೆ ಮತ್ತು ರಾಜ್ಯ ಸಚಿವ ಟೋಖನ್ ಸಾಹು ಉಪಸ್ಥಿತಿಯಲ್ಲಿ ವಿಡಿಯೋ ಕಾನ್‌ಫರೆನ್ಸ್ ಮೂಲಕ ನಡೆದ ಸಭೆಯಲ್ಲಿ ವಿವಿಧ ರಾಜ್ಯಗಳ ಹಿರಿಯ ಅಧಿಕಾರಿಗಳು, ಸ್ಮಾರ್ಟ್‌ಸಿಟಿ ಅಧಿಕಾರಿಗಳು ಭಾಗವಹಿಸಿದ್ದರು.  ಯೋಜನೆ ಮುಂದುವರಿಸಬೇಕೇ ಬೇಡವೆ ಎನ್ನುವ ಬಗ್ಗೆ ಸಭೆಯಲ್ಲಿ ರಾಜ್ಯಗಳ ಅಭಿಪ್ರಾಯ ಕೇಳಲಾಯಿತು. ಕೆಲವು ರಾಜ್ಯಗಳು ಈ ಯೋಜನೆಯಡಿ ಮುಂದುವರಿಯುವ ಇಚ್ಛೆ ವ್ಯಕ್ತಪಡಿಸಿದರೆ, ಮತ್ತೆ ಕೆಲವು ರಾಜ್ಯಗಳು ಆ ಬಗ್ಗೆ ಒಲವು ತೋರಲಿಲ್ಲ.  ಸಭೆಯು ಅಭಿಪ್ರಾಯ ಕೇಳುವುದಕ್ಕೆ ಸೀಮಿತವಾಯಿತೇ ಹೊರತು ಸ್ಮಾರ್ಟ್‌ಸಿಟಿ ಮಿಷನ್ ಅಥವಾ ಎಸ್‌ಪಿವಿ ಮುಂದುವರಿಕೆಯ ಕುರಿತು ಯಾವುದೇ ತೀರ್ಮಾನವನ್ನು ಪ್ರಕಟಿಸಲಿಲ್ಲ ಎಂದು ತಿಳಿದು ಬಂದಿದೆ.  ಹೀಗಾಗಿ ಯೋಜನೆ ಮುಕ್ತಾಯಗೊಳ್ಳುವ ಸಾಧ್ಯತೆಯೇ ಹೆಚ್ಚಾಗಿದೆ. ಆದಾಗ್ಯೂ ಯಾವುದನ್ನೇ ಆಗಲಿ 2-3 ದಿನಗಳಲ್ಲಿ ಅಧಿಕೃತ ಆದೇಶದ ಮೂಲಕ ತಿಳಿಸುವ ಸಾಧ್ಯತೆಯಿದೆ ಎನ್ನಲಾಗಿದೆ.  ...