ಜಿಲ್ಲೆ

ಕೌಶಲದಿಂದ ಮಹಿಳೆಯರ ಆರ್ಥಿಕ ಸ್ವಾವಲಂಬನೆ

ರಮೇಶ ಜಹಗೀರದಾರ್

ದಾವಣಗೆರೆ  : ಹೆಣ್ಣು ಮಕ್ಕಳು ಸತತ ಪರಿಶ್ರಮ, ಶ್ರದ್ಧೆಯೊಂದಿಗೆ ಕೌಶಲಯುತರಾದರೆ ಆರ್ಥಿಕ ಸ್ವಾವಲಂಬನೆ ಸಾಧಿಸಬಹುದು ಎಂದು ಜವಳಿ ವರ್ತಕ ಬಿ.ಸಿ. ಉಮಾಪತಿ ಹೇಳಿದರು.  ಭಾರತ ವಿಕಾಸ್ ಪರಿಷತ್ ಗೌತಮ ಶಾಖೆ ದಾವಣಗೆರೆ ವತಿಯಿಂದ, ಸೇವಾ ಧ್ಯೇಯ ವಿಭಾಗದ ಮುಖ್ಯ ಅಂಗವಾದ ಮಹಿಳಾ ಸಬಲೀಕರಣ ಯೋಜನೆಯಡಿಯಲ್ಲಿ ನಗರದ ಆರ್ಥಿಕವಾಗಿ ಹಿಂದುಳಿದ ಮಹಿಳೆಯರಿಗೆ ಇಲ್ಲಿನ ವಿದ್ಯಾನಗರದಲ್ಲಿ ಗುರುವಾರ ಆಯೋಜಿಸಿದ್ದ ಹೊಲಿಗೆ ಮತ್ತು ಕೈಕಸೂತಿ ತರಬೇತಿ ತರಗತಿಯ ಆರಂಭ ಕಾರ್ಯಕ್ರಮದಲ್ಲಿ ಮಾತನಾಡಿದರು.  ಮಹಿಳೆಯರು ತಮ್ಮ ಕೌಶಲವನ್ನು ಕೇವಲ ಅಡುಗೆ ಮನೆಗೆ ಮೀಸಲಾಗಿಡದೇ ಸಾಮಾಜಿಕ, ಆರ್ಥಿಕ ಸುಧಾರಣೆಗೆ ಕೈ ಜೋಡಿಸಬಹುದು ಎಂದರು.  ರಾಮಕೃಷ್ಣ ಆಶ್ರಮದ ಶ್ರೀ ತ್ಯಾಗೀಶ್ವರಾನಂದ ಮಹಾರಾಜರು ಮಾತನಾಡಿ, ಹೆಣ್ಣು ಮಕ್ಕಳು ಮನೆಯ ಕೆಲಸದ ಜತೆಗೆ ಇಂತಹ ತರಬೇತಿಯ ಸದುಪಯೋಗ ಪಡೆದುಕೊಂಡು ಆರ್ಥಿಕವಾಗಿ ಸಬಲರಾಗಿ ಕುಟುಂಬಕ್ಕೆ ಆಧಾರವಾಗಬೇಕು ಎಂದು ತಿಳಿಸಿದರು.  ವರ್ತಕ, ಸಮಾಜ ಸೇವಕ ಕೊಂಡಜ್ಜಿ ಜಯಪ್ರಕಾಶ್, ಮಹಾನಗರ ಪಾಲಿಕೆ ಸದಸ್ಯೆ ಗೀತಾ ದಿಳ್ಯಪ್ಪ ಮಾತನಾಡಿದರು. ಸಂಘಟನೆಯ ದಕ್ಷಿಣ ಪ್ರಾಂತ ಪರಿಸರ ಕಾರ್ಯದರ್ಶಿ ಟಿ.ಎಸ್. ಜಯರುದ್ರೇಶ್ ಪ್ರಾಸ್ತಾವಿಕವಾಗಿ ಮಾತಾಡಿದರು.  ಜ್ಯೋತಿ ಧನಂಜಯ ಅವರು ತರಗತಿಗಳಲ್ಲಿ ನೀಡಲಾಗುವ ಕೌಶಲಗಳ ಬಗ್ಗೆ ವಿವರಿಸಿದರು. ಶಾಖೆಯ ಅಧ್ಯಕ್ಷ ಅಜ್ಜಂಪುರ ವಿಜಯ ಕುಮಾರ ಅಧ್ಯಕ್ಷೀಯ ನುಡಿಗಳನ್ನಾಡಿದರು. ಭವಾನಿ ಹಾಗೂ ಶೀಲಾ ನಾಯಕ ವಂದೇ ಮಾತರಂ ಗೀತೆ ಹಾಡಿದರು. ಶಾಖೆಯ ಕಾರ್ಯದರ್ಶಿ ಮಧುಕರ ಸ್ವಾಗತಿಸಿದರು. ಶಾಂತಾ ತಿಪ್ಪಣ್ಣ ವಂದಿಸಿದರು. ಡಾ. ಆರತಿ ಸುಂದರೇಶ್ ಕಾರ್ಯಕ್ರಮ ನಿರೂಪಿಸಿದರು.  ಶಾಖೆಯ ಬಾಲವಿಕಾಸ ಸಂಚಾಲಕರಾದ ಸಂಗೀತ ಮನೊಲಿ, ದಕ್ಷಿಣ ಪ್ರಾಂತೀಯ ಖಜಾಂಚಿ ಪುಟ್ಟಪ್ಪ ಕಾಶಿಪುರ, ಸದಸ್ಯರಾದ ನೇತ್ರ  ಮಧುಕರ, ಅಕ್ಷಯ ಸುರ್ವೆ ಹಾಗೂ ಸದಸ್ಯ ಜಯಣ್ಣ ಇದ್ದರು.