ದಾವಣಗೆರೆ : ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಸ್ಥಿಪಂಜರ ಪತ್ತೆ ಪ್ರಕರಣದ ತನಿಖೆ ತೀವ್ರಗೊಂಡಿದೆ. ಘಟನಾ ಸ್ಥಳದಲ್ಲಿ ಮತ್ತೊಂದು ಅಸ್ಥಿಪಂಜರ ದೊರೆಯುವುದರೊಂದಿಗೆ ಕೇಸ್ ಮಹತ್ವದ ತಿರುವು ಪಡೆದುಕೊಂಡಿದೆ. ಅವರಿಬ್ಬರೂ ವಿವಾಹಿತರು. ಆತನಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದಾರೆ. ಪ್ರೇಯಸಿಗೆ ಮೂವರು ಮಕ್ಕಳಿದ್ದು ಆಕೆ ಒಬ್ಬ ವಿಧವೆ ಎಂದು ತಿಳಿದು ಬಂದಿದೆ. ಇಬ್ಬರ ನಡುವೆ ಸಂಬಂಧ (ಅಫೇರ್) ಬೆಳೆದಿತ್ತು ಎನ್ನುವ ಅನುಮಾನವೂ ವ್ಯಕ್ತವಾಗಿದೆ. ಇಬ್ಬರೂ ನಾಪತ್ತೆಯಾಗಿ ಒಂದು ತಿಂಗಳಿಗೂ ಹೆಚ್ಚು ಸಮಯವಾಗಿರಬಹುದು. ಅವರು ಜಗಳೂರು ತಾಲೂಕಿನಿಂದ ಬೈಕಿನಲ್ಲಿ ಹೊರಟಿದ್ದನ್ನು ಕೆಲವರು ನೋಡಿದ್ದರಂತೆ. ತಾಲೂಕಿನ ಆಲೂರುಹಟ್ಟಿ-ಮೆಳ್ಳೆಕಟ್ಟೆ ಮಧ್ಯೆ ರಸ್ತೆ ಪಕ್ಕದ ಸ್ಮಶಾನ ಜಾಗದಲ್ಲಿ ಬೈಕ್ ಜತೆಯಲ್ಲಿ ಇಬ್ಬರ ಅಸ್ಥಿಪಂಜರ ಪತ್ತೆಯಾಗಿರುವುದು ನೋಡಿದರೆ ಅಪಘಾತ ಸಂಭವಿಸಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಪೊದೆಗಳ ನಡುವೆ ಬೈಕ್ ಮತ್ತು ಅಸ್ಥಿಪಂಜರ ಪತ್ತೆಯಾಗಿತ್ತು. ಕುರಿಗಾಹಿಗಳು ನೀಡಿದ ಮಾಹಿತಿ ಆಧಾರದ ಮೇಲೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದಾಗ ತಲೆ ಬುರುಡೆ ಮತ್ತು ಮೂಳೆಗಳು ಇದ್ದವು. ಒಬ್ಬ ವ್ಯಕ್ತಿ ಅಪಘಾತದಲ್ಲಿ ಮೃತಪಟ್ಟಿರಬಹುದು ಎಂದು ಪ್ರಾಥಮಿಕವಾಗಿ ಅಂದಾಜು ಮಾಡಲಾಗಿತ್ತು. ತನಿಖೆ ತೀವ್ರಗೊಳ್ಳುತ್ತಿದ್ದಂತೆ ಮತ್ತಷ್ಟು ವಿಷಯಗಳು ಬೆಳಕಿಗೆ ಬಂದವು. ಬೈಕ್‌ನ ಆಸುಪಾಸಿನಲ್ಲೇ ಮತ್ತೊಂದು ಅಸ್ಥಿಪಂಜರ ಕಾಣಿಸಿದೆ. ಸಮೀಪದಲ್ಲೇ ಗೆಜ್ಜೆಗಳು, ಪರ್ಸ್, ವೇಲ್, ಪಾದರಕ್ಷೆಗಳು, ಎಟಿಎಂ ಕಾರ್ಡ್ ಮತ್ತು ಫೋಟೋಗಳು ದೊರೆತಿವೆ. ಅಲ್ಲಿ ದೊರೆತ ವಸ್ತುಗಳ ಎಳೆಯನ್ನು ಹಿಡಿದು ಪೊಲೀಸರು ಅವರಿಬ್ಬರ ಗುರುತು ಪತ್ತೆಹಚ್ಚುವ ಪ್ರಯತ್ನ ಮಾಡಿದ್ದಾರೆ. ಎರಡೂ ಕುಟುಂಬದವರನ್ನು ಮಾತನಾಡಿಸಿ, ಅವರೇ ಇರಬಹುದು ಎನ್ನುವ ನಿರ್ಧಾರಕ್ಕೆ ಬಂದಿದ್ದಾರೆ. ಆದರೆ ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ನಡೆಯುವ ಡಿಎನ್‌ಎ ಪರೀಕ್ಷೆಯ ವರದಿ ಬಂದ ನಂತರವಷ್ಟೇ ಸ್ಪಷ್ಟತೆ ಸಿಗಲಿದೆ.