ದಾವಣಗೆರೆ : ಅಭಿವೃದ್ಧಿಯ ಚಿಂತನೆ, ರೈತಪರ ನಿಲುವಿನೊಂದಿಗೆ ಸಂಸದ ಜಿ.ಎಂ. ಸಿದ್ದೇಶ್ವರ ಅವರು ಜನಸೇವೆ ಮಾಡುತ್ತ ಬಂದಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
ನಗರದ ಅರುಣಾ ಟಾಕೀಸ್ ಎದುರಿನ ವಾಣಿ ಹೋಂಡಾ ಶೋರೂಂ ಆವರಣದಲ್ಲಿ ಬುಧವಾರ, ಅಭಿಮಾನಿಗಳ ಬಳಗದಿಂದ ಆಯೋಜಿಸಿದ್ದ, ಜಿ.ಎಂ. ಸಿದ್ದೇಶ್ವರ ಅವರ 71ನೇ ಜನ್ಮದಿನ ಸಮಾರಂಭದಲ್ಲಿ ಮಾತನಾಡಿದರು.
‘ಆಡು ಮುಟ್ಟದ ಸೊಪ್ಪಿಲ್ಲ, ಜಿ.ಎಂ. ಸಿದ್ದೇಶ್ವರ ಅವರು ಕ್ಷೇತ್ರದಲ್ಲಿ ತಲುಪದ ಹಳ್ಳಿಗಳಿಲ್ಲ’ ಎಂಬ ಮಾತಿದೆ. ಇದು ಅವರ ಜನಸೇವೆಯ ಪರಿಯನ್ನು ಹೇಳುತ್ತದೆ ಎಂದರು.
ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು 4 ಬಾರಿ ಸೋಲಿಸಿ ಬಿಜೆಪಿಯ ಭದ್ರ ಕೋಟೆಯಾಗಿಸಲು ಸಿದ್ದೇಶ್ವರ ಅವರ ಪಾತ್ರ ಅಪಾರವಾಗಿದೆ. ಕೇಂದ್ರ ಸಚಿವರಿದ್ದಾಗ ಹಲವು ಯೋಜನೆಗಳ ಮೂಲಕ ರಾಜ್ಯದ ಅಭಿವೃದ್ಧಿಗೆ ಶ್ರಮಿಸಿದರು ಎಂದು ತಿಳಿಸಿದರು.
ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲೂ ಕ್ಷೇತ್ರದ ಅಭಿವೃದ್ಧಿ ಮಾಡಿದ್ದಾರೆ. ದಾವಣಗೆರೆ ಸ್ಮಾರ್ಟ್‌ಸಿಟಿಯಾಗಲು ಕಾರಣರಾಗಿದ್ದಾರೆ. ಜಿಲ್ಲೆಯನ್ನು ವೇಗವಾಗಿ ಅಭಿವೃದ್ಧಿಪಡಿಸಿದ್ದಾರೆ ಎಂದು ಶ್ಲಾಘಿಸಿದರು.
ತಂದೆ ಜಿ. ಮಲ್ಲಿಕಾರ್ಜುನಪ್ಪ ಅವರು ಹಾಕಿಕೊಟ್ಟ ದಾರಿಯಲ್ಲಿ ಸಾಗಿದ್ದಾರೆ. ಜಿಎಂಐಟಿ ಇನ್ನಿತರ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದ್ದಾರೆ. ಶ್ರೀಮಂತ ಕುಟುಂಬದವರಾದರೂ ಬಡವರ ಬಗ್ಗೆ ಕಾಳಜಿ ಹೊಂದಿದ್ದಾರೆ ಎಂದರು.
ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ, ಸಿದ್ದೇಶ್ವರ ಅವರು ಸಾರ್ವಜನಿಕ ಬದುಕಿನಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಅವರಿಗೆ ಬಿ.ಎಸ್. ಯಡಿಯೂರಪ್ಪ, ಜನರು ಮತ್ತು ಗುರುಗಳ ಆಶೀರ್ವಾದವಿದೆ ಎಂದು ಹೇಳಿದರು.
ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಮಾತನಾಡಿ, ಸಿದ್ದೇಶ್ವರ ಅವರು ಸಾರ್ವಜನಿಕರ ಆಸ್ತಿ. ಬಡವರು, ರೈತರಿಗಾಗಿ ಅವರು ಜೀವನವನ್ನೇ ಮುಡಿಪಾಗಿಟ್ಟಿದ್ದಾರೆ ಎಂದು ತಿಳಿಸಿದರು.
ಮಾಜಿ ಸಚಿವ ಎಸ್.ಎ. ರವೀಂದ್ರನಾಥ್ ಮಾತನಾಡಿ, ರಾಜ್ಯದಲ್ಲಿ ಲೋಕಸಭಾ ಸದಸ್ಯರು ಹೇಗಿರಬೇಕು ಎಂಬುದನ್ನು ಸಿದ್ದೇಶ್ವರ ತೋರಿಸಿಕೊಟ್ಟಿದ್ದಾರೆ. ಅವರು ಸಂಸದರಾಗಿ ಇನ್ನು ಮುಂದೆಯೂ ಕೆಲಸ ಮಾಡಲಿ ಎಂಬುದು ಜನರ ಅಪೇಕ್ಷೆಯಾಗಿದೆ ಎಂದು ಹೇಳಿದರು.