ಜಿಲ್ಲೆ

ಶಿವಯೋಗಿ ಸಿದ್ದರಾಮೇಶ್ವರರ ಆದರ್ಶ ಇಂದಿಗೂ ಪ್ರಸ್ತುತ

ರಮೇಶ ಜಹಗೀರದಾರ್

ದಾವಣಗೆರೆ : ಹನ್ನೆರಡನೇ ಶತಮಾನ ಶ್ರೇಷ್ಠ ವಚನಕಾರರ ಯುಗವಾಗಿದ್ದು ಶ್ರೀ ಶಿವಯೋಗಿ ಸಿದ್ದರಾಮೇಶ್ವರರ ಕಾಯಕ ತತ್ವ ಇಂದಿಗೂ ಪ್ರಸ್ತುತ ಎಂದು ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಹೇಳಿದರು.
 ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಭೋವಿ ಸಮಾಜದ ಸಹಯೋಗದೊಂದಿಗೆ ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಸೋಮವಾರ ನಡೆದ ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
 ಬಸವಣ್ಣ ಅವರ ಕಾಲದ ಅನುಭವ ಮಂಟಪದಲ್ಲಿ ಕಾಯಕ ನಿಷ್ಠೆ ಮೂಲಕ ಶಿವಯೋಗಿ ಸಿದ್ದರಾಮೇಶ್ವರರು ಗುರುತಿಸಿಕೊಂಡರು. ವಚನಗಳ ಮೂಲಕ ಸಮಾಜವನ್ನು ತಿದ್ದುವ ಕಾರ್ಯವನ್ನು ನಿರ್ವಹಿಸಿದರು. ನಾವೆಲ್ಲರೂ ಜಾತಿ, ಮತ, ಪಂಥಗಳೆನ್ನದೆ ಎಲ್ಲರೂ ಇವರ ಜಯಂತ್ಯುತ್ಸವವನ್ನು ಆಚರಿಸುವ ಜತೆಗೆ ಅವರ ಕಾಯಕ ತತ್ವಗಳನ್ನು ಜೀವನದಲ್ಲಿ ಅಳಡಿಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.
 ಇಂತಹ  ಮಹಾನ್ ಶರಣರ ಸ್ಮರಣೆಯ ಮೂಲಕ ಸಮಾಜ ತನ್ನನ್ನು ತಾನು ಅರಿತು ಬದಲಾಗಬೇಕಿದೆ. ಕೆರೆ, ಕಟ್ಟೆ, ಕಾಲುವೆ, ಕಟ್ಟುವ ಕರ್ಮ ಮಾರ್ಗದಲ್ಲಿ ಸಾಗಿ, ಮಾನವ ಜನ್ಮದ ಸಾರ್ಥಕತೆಯನ್ನು ನಿರೂಪಿಸಿದ ಇವರು ಬಸವಣ್ಣ ಹಾಗೂ ಶರಣರ ಭೇಟಿಯಿಂದ ಜ್ಞಾನ ಮಾರ್ಗದಲ್ಲಿ ಸಾಗಿದವರಾಗಿದ್ದಾರೆ ಎಂದರು.
 ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರವಿಚಂದ್ರ, ಮಹಾನಗರ ಪಾಲಿಕೆ ಸದಸ್ಯ ಶಿವಾನಂದ, ಕೆಪಿಸಿಸಿ ವಕ್ತಾರ ಡಿ. ಬಸವರಾಜ, ಸಮಾಜದ ಮುಖಂಡ ಮಂಜುನಾಥ್, ಎಚ್. ಶ್ರೀನಿವಾಸ್, ಜಯಣ್ಣ, ಆರ್.ಎಲ್. ಕಾನೂನು ಕಾಲೇಜಿನ ಪ್ರಾಧ್ಯಾಪಕ ಟಿ. ವಿದ್ಯಾಧರ ವೇದಮೂರ್ತಿ ಉಪನ್ಯಾಸ ನೀಡಿದರು.