ಜಿಲ್ಲೆ

ದಾವಣಗೆರೇಲಿ ವಿದೇಶಿ ತಳಿ ಡ್ರಾೃಗನ್ ಘಮ

Davanagere

ಅನಿತಾ ಸಿ.ಪಿ.ದಾವಣಗೆರೆ
ಪ್ರಸ್ತುತ ಮಾರುಕಟ್ಟೆಯಲ್ಲಿ ಅಧಿಕ ಬೇಡಿಕೆ ಇರುವ ಡ್ರಾೃಗನ್ ಫ್ರೂಟ್ ಬೆಳೆದಿರುವ ದಾವಣಗೆರೆ ತಾಲೂಕು ಸಿದ್ದನೂರು ಗ್ರಾಮದ ಮೂವರು ಸಹೋದರರು ಕಡಿಮೆ ವೆಚ್ಚದಲ್ಲಿ ಅಧಿಕ ಲಾಭ ಪಡೆದಿದ್ದಾರೆ.

ಸಹೋದರರಾದ ಮಲ್ಲಿಕಾರ್ಜುನ್, ಪ್ರಶಾಂತ್, ವರುಣ್ ತಲಾ ಒಂದು ಎಕರೆಯಲ್ಲಿ ಡ್ರಾೃಗನ್ ಫ್ರೂಟ್ ಬೆಳೆಯುವ ವಿನೂತನ ಪ್ರಯೋಗಕ್ಕೆ ಕೈ ಹಾಕಿದವರು. ಮೊದಲ ಫಸಲಿನಲ್ಲೇ ತಲಾ ಮೂರು ಲಕ್ಷ ರೂ. ಆದಾಯ ಗಳಿಸಿದ್ದಾರೆ.

ಹೇರಳ ಫೋಷಕಾಂಶದ ಜೊತೆಗೆ ಡಯಟ್, ಫಿಟ್‌ನೆಸ್, ರೋಗ ನಿರೋಧಕ ಕಾರಣಗಳಿಂದ ಡ್ರಾೃಗನ್ ಫ್ರೂಟ್‌ಗೆ ಹೆಚ್ಚು ಡಿಮ್ಯಾಂಡ್ ಇದೆ. ಒಂದು ಹಣ್ಣಿಗೆ 50 ರೂ.ನಿಂದ ಕೆಜಿಗೆ 300 ರೂ. ವರೆಗೆ ದರ ಇದೆ.

ಬೆಳೆಯುವ ವಿಧಾನ: ಕ್ಯಾಕ್ಟಸ್ ಜಾತಿಗೆ ಸೇರಿದ ಈ ಗಿಡಕ್ಕೆ ಕಡಿಮೆ ನೀರಿನ ಅಗತ್ಯವಿದ್ದು, ಯಾವುದೇ ರೀತಿಯ ಮಣ್ಣಿನಲ್ಲಿ ಬೆಳೆಯಬಹುದಾಗಿದೆ. ನಿರ್ವಹಣೆ ವೆಚ್ಚ ಕಡಿಮೆ ಇದ್ದು, ರೈತರಿಗೆ ಲಾಭದಾಯಕವಾಗಿದೆ. ಆದರೆ ಒಮ್ಮೆ ಬಂಡವಾಳ ಹಾಕಿದರೆ ಇಪ್ಪತ್ತೈದು ವರ್ಷಗಳವರೆಗೆ ಇಳುವರಿ ಪಡೆಯಬಹುದಾಗಿದೆ. ಪ್ರತಿ ಪೋಲ್‌ಗೆ 600 ರೂ. ಖರ್ಚಾಗುತ್ತದೆ. ಎಕರೆಗೆ 2.5 ಲಕ್ಷ ವೆಚ್ಚವಿದೆ. ಕೆಂಪು ಡ್ರಾೃಗನ್‌ಗೆ ಬೇಡಿಕೆ ಅಧಿಕವಿದೆ ಎಂದು ತಾವು ಬೆಳೆದ ವಿಧಾನವನ್ನು ರೈತ ಮಲ್ಲಿಕಾರ್ಜುನ್ ವಿವರಿಸಿದರು.

ಮಹಾರಾಷ್ಟ್ರದಿಂದ ತಲಾ ರೂ. 80 ರೂ.ಗೆ ಒಂದರಂತೆ ಡ್ರಾೃಗನ್ ಸಸಿ ತಂದು ಡಿಸೆಂಬರ್‌ನಲ್ಲಿ ನಾಟಿ ಮಾಡಲಾಗಿದೆ. 12*8 ಅಳತೆಯಲ್ಲಿ ಸಾಲಿಗೆ ಕಲ್ಲಿನ ಕಂಬಗಳನ್ನು ನೆಟ್ಟು. ಕಂಬದ ಬುಡದಲ್ಲಿ ಕೊಟ್ಟಿಗೆ ಗೊಬ್ಬರ ಹಾಕಿ ಮಣ್ಣು ಹದಗೊಳಿಸಿ, ನೀರು ನಿಲ್ಲದಂತೆ ಬದುವಿನಂತೆ ಮಾಡಿಕೊಂಡು, ಒಂದು ಕಂಬಕ್ಕೆ ಮೂರ‌್ನಾಲ್ಕು ಡ್ರಾೃಗನ್ ಸಸಿ ನೆಡಲಾಗಿದೆ. ಎಕರೆಗೆ 360 ಕಂಬಗಳನ್ನು ಕೂರಿಸಲಾಗಿದೆ. ಕಲ್ಲಿನ ತುದಿಯಲ್ಲಿ ನಾಲ್ಕು ಬದಿಯಲ್ಲಿ ಗಿಡ ಹಬ್ಬಲು ಅನುವಾಗುವಂತೆ ಕಬ್ಬಿಣದ ರಾಡ್‌ಗಳನ್ನು ಹಾಕಿ, ಅದರ ಮೇಲೆ ಹಳೆಯ ಟೈರ್‌ಗಳನ್ನಿಡಲಾಗಿದೆ.

ಶತಾವರಿ ಪ್ರಯತ್ನ: ಮೂವರು ಸಹೋದರರು ತಲಾ ಒಂದು ಎಕರೆಯಲ್ಲಿ ಔಷಧೀಯ ಸಸ್ಯ ಶತಾವರಿಯನ್ನೂ ಬೆಳೆದಿದ್ದಾರೆ. ಮಧ್ಯಪ್ರದೇಶದ ಕಂಪನಿಯೊಂದಿಗೆ ಒಪ್ಪಂದದ ಮೇರೆಗೆ ಬೆಳೆದಿದ್ದಾರೆ. ನೂರಕ್ಕೂ ಅಧಿಕ ಸಮಸ್ಯೆಗಳಿಗೆ ಔಷಧವಾಗಿ ಬಳಸುವುದರಿಂದ ಆಯುರ್ವೇದ ಶಾಸ್ತ್ರದಲ್ಲಿ ಶತಾವರಿಗೆ ಹೆಚ್ಚು ಮಹತ್ವವಿದ್ದು, ದೆಹಲಿ, ಮಧ್ಯಪ್ರದೇಶದಲ್ಲಿ ಇದಕ್ಕೆ ಮಾರುಕಟ್ಟೆ ಇರುವುದಾಗಿ ವಿವರಿಸಿದರು.

ಮಲ್ಲಿಕಾರ್ಜುನ್ ಸಿದ್ದನೂರು ರೈತ

ಒಂದು ಎಕರೆಯಲ್ಲಿ ಡ್ರಾೃಗನ್ ಹಾಗೂ ಮಧ್ಯೆ ಶತಾವರಿಯನ್ನು ಹಾಕಿದ್ದೇನೆ. ಡ್ರಾೃಗನ್ ಮಳೆಗಾಲದಲ್ಲಿ ಹಣ್ಣು ಬಿಡುತ್ತದೆ. ಮೇನಿಂದ ಅಕ್ಟೋಬರ್‌ವರೆಗೆ ಇಳುವರಿ ಪಡೆಯಬಹುದು. ಒಂದು ಫಸಲು ಪಡೆದಿದ್ದೇವೆ. ಗಿಡವೊಂದಕ್ಕೆ 10 ಕೆಜಿಯಂತೆ ಎಕರೆಗೆ 4000 ಕೆಜಿ ಇಳುವರಿ ಪಡೆದಿದ್ದೇವೆ. ಕೆಜಿಗೆ 130 ರೂ. ಸಿಕ್ಕಿದೆ. ಹಾಪ್‌ಕಾಮ್ಸ್, ಬೆಂಗಳೂರಿಗೆ ಕಳಿಸಲಾಗುತ್ತದೆ. ಸ್ಥಳೀಯವಾಗಿ ಜ್ಯೂಸ್ ಸೆಂಟರ್‌ನವರೂ ಪಡೆಯುತ್ತಾರೆ.

ವರುಣ್ ಸಿದ್ದನೂರು ರೈತ

ಇಳುವರಿ ಬಂದ ಕಾಲಕ್ಕೆ ಮಾರುಕಟ್ಟೆ ದರ ಪರಿಶೀಲಿಸಿ, ಕನಿಷ್ಠ ದರ ಕೆಜಿಗೆ 170 ರೂ. ನೀಡುವ ಕಂಪನಿಯೊಂದರ ಒಪ್ಪಂದದೊಂದಿಗೆ ಶತಾವರಿ ಹಾಕಿದ್ದೇವೆ. ಡಿಸೆಂಬರ್‌ನಲ್ಲಿ ಕೊಯ್ಲಿಗೆ ಬರುತ್ತದೆ. ಡ್ರಾೃಗನ್ ಮಧ್ಯೆ ಹಾಗೂ ಒಂದು ಎಕರೆ ಪ್ರತ್ಯೇಕವಾಗಿ ಅರ್ಧ ಎಕರೆ ಶತಾವರಿ ಬೆಳೆದಿದ್ದೇನೆ.

ಅಡಕೆ ಬೆಳೆ ಮಧ್ಯೆ ಡ್ರಾೃಗನ್ ಫ್ರೂಟ್ ಮಧ್ಯೆ 1ಎಕರೆಯಲ್ಲಿ ಶತಾವರಿ ಹಾಕಿದ್ದೇನೆ. 400 ರೂ. ವರೆಗೂ ಡ್ರಾೃಗನ್ ಬೆಲೆ ಇತ್ತು. ಆದರೆ ಲಾಕ್‌ಡೌನ್ ಬಿಸಿಯಿಂದಾಗಿ ಈ ಬಾರಿ ಇಳಿಕೆಯಾಗಿದೆ. ಕೆಜಿ 130 ರೂ. ಲಭಿಸಿದೆ. ಎಕರೆಗೆ 3800 ಕೆಜಿ ಇಳುವರಿ ಪಡೆದಿದ್ದೇನೆ.
> ಪ್ರಶಾಂತ್ ರೈತ