ಜಿಲ್ಲೆ

ಶಿವರಾತ್ರಿ ಶಿವನಿಗೆ ವಿಶ್ರಾಂತಿಯ ಕಾಲ

ರಮೇಶ ಜಹಗೀರದಾರ್

ದಾವಣಗೆರೆ : ಮಹಾ ಶಿವರಾತ್ರಿಯು ಶಿವನ ವಿಶ್ರಾಂತಿಯ ಕಾಲವಾಗಿದೆ ಎಂದು ಯೋಗತಜ್ಞ ಡಾ. ರಾಘವೇಂದ್ರ ಗುರೂಜಿ ಹೇಳಿದರು.  ನಗರದ ದೇವರಾಜ ಅರಸು ಬಡಾವಣೆಯಲ್ಲಿರುವ ಆದರ್ಶ ಯೋಗ ಪ್ರತಿಷ್ಠಾನ, ಶ್ರೀ ಮಹಮ್ಮಾಯಿ ವಿಶ್ವಯೋಗ ಮಂದಿರ ಹಾಗೂ ಯೋಗ ಚಿಕಿತ್ಸಾ ಕೇಂದ್ರದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಬುಧವಾರ ಹಮ್ಮಿಕೊಳ್ಳಲಾಗಿದ್ದ ಸರಳ ಶಿವಧ್ಯಾನ ಯೋಗ ಎಂಬ ಕಾರ್ಯಕ್ರಮದಲ್ಲಿ ಶಿವರಾತ್ರಿಯ ಮಹತ್ವ ಕುರಿತು ಮಾತನಾಡಿದರು.  ಮಾಘ ಮಾಸ ಕೃಷ್ಣ ಪಕ್ಷ ಚತುರ್ದಶಿಯಂದು ದೇವಲೋಕದಲ್ಲಿ ಶಿವನು ರಾತ್ರಿಯ ಒಂದು ಪ್ರಹರ ವಿಶ್ರಾಂತಿಯನ್ನು ಪಡೆಯುವಾಗ ಅದು ಪೃಥ್ವಿಯ ಮೇಲೆ ವರ್ಷಕ್ಕೊಂದು ಸಲ ಮಹಾಶಿವರಾತ್ರಿ ಎಂದು ಆಚರಿಸಲಾಗುತ್ತದೆ ಎಂದು ಅಭಿಪ್ರಾಯಪಟ್ಟರು.  ಮಹಾ ಶಿವರಾತ್ರಿಯಂದು ಶಿವನು ಭೂಲೋಕಕ್ಕೆ ಬಂದು ಭಕ್ತರ ಇಷ್ಟಾರ್ಥಗಳನ್ನು ಅನುಗ್ರಹಿಸುವನು ಎಂಬ ನಂಬಿಕೆ ಇದೆ. ಆದ್ದರಿಂದ ಶಿವ ತತ್ವವು ಎಂದಿಗಿಂತ ಸಾವಿರಪಟ್ಟು ಹೆಚ್ಚು ಕಾರ್ಯ ನಿರತವಾಗಿರುತ್ತದೆ. ಈ ದಿನ ಮಾಡುವ ಉಪಾಸನೆಯಿಂದ ಹೆಚ್ಚಿನ ಪ್ರಮಾಣದಲ್ಲಿ ಶಿವ ತತ್ವದ ಲಾಭವು ಸಿಗಲಿದೆ ಎಂದು ತಿಳಿಸಿದರು.  ಭಾಗವಹಿಸಿದ್ದ ಪ್ರತಿಯೊಬ್ಬರೂ ಧನ್ಯತಾ ಭಾವದಿಂದ ಶಿವಭಜನೆ ಮತ್ತು ಧ್ಯಾನದಲ್ಲಿ ಮಗ್ನರಾಗಿ ಮಹಾಯೋಗಿ ಶಿವನಿಗೆ ಅಷ್ಟಾಂಗ ನಮಸ್ಕಾರ ಸಲ್ಲಿಸಿದರು. ಶಿವಭಜನೆಯ ನಂತರ ಕೊನೆಯಲ್ಲಿ ನಗರದ ಶ್ರೀ ಪಾತಾಳ ಲಿಂಗೇಶ್ವರ ದೇವಸ್ಥಾನದಲ್ಲಿ ಅಭಿಷೇಕಗೊಂಡ ಪವಿತ್ರ ತೀರ್ಥವನ್ನು ವಿತರಿಸಲಾಯಿತು.  ಶಿವಧ್ಯಾನದಲ್ಲಿ ಪತ್ರಕರ್ತ ಎಚ್.ಎನ್. ಪ್ರಕಾಶ್, ವರ್ತಕರಾದ ಅಜಯ್, ಆದಿತ್ಯ ಸೋಲಂಕಿ, ಎಚ್. ಸಂತೋಷ್, ಅಜ್ಜಂಪುರದ ಪಿ.ಡಿ.ಒ. ಕೆ.ಎಸ್. ಹರ್ಷ, ಸಾಫ್ಟ್‌ವೇರ್ ಉದ್ಯೋಗಿ ಭರತ್ ವದೋನಿ, ಕಾವ್ಯಾ, ವಿಜಯಲಕ್ಷ್ಮೀ ಭಾಗವಹಿಸಿದ್ದರು.