ಜಿಲ್ಲೆ

ಮಾಯಕೊಂಡದ ಹೋರಾಟಗಾರ ಎಂ.ಎಸ್.ಕೆ. ಶಾಸ್ತ್ರಿ ಇನ್ನಿಲ್ಲ

ರಮೇಶ ಜಹಗೀರದಾರ್

ಮಾಯಕೊಂಡ  : ದಾವಣಗೆರೆ ಜಿಲ್ಲೆ ರಚನೆ ಸೇರಿದಂತೆ ವಿವಿಧ ಹೋರಾಟಗಳಲ್ಲಿ ಸಕ್ರಿಯ ಪಾತ್ರ ವಹಿಸಿದ್ದ, ಮಾಯಕೊಂಡ ಗ್ರಾಮದ ಹಿರಿಯ ಮುಖಂಡ ಎಂ.ಎಸ್.ಕೆ. ಶಾಸ್ತ್ರಿ (84) ಶುಕ್ರವಾರ ಅನಾರೋಗ್ಯದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.  ಅವರಿಗೆ ಇಬ್ಬರು ಪುತ್ರಿಯರು, ಒಬ್ಬ ಪುತ್ರ ಇದ್ದಾರೆ. ಅಂತ್ಯಸಂಸ್ಕಾರ ಶನಿವಾರ ಬೆಂಗಳೂರಿನಲ್ಲಿ ನೆರವೇರಿತು.  ...  (ಬಾಕ್ಸ್)  ಹೋರಾಟದ ಹಾದಿ  ಎಂ.ಎಸ್.ಕೆ. ಶಾಸ್ತ್ರಿ ಅವರು ಹಲವು ಹೋರಾಟಗಳ ಮೂಲಕ ಜನರ ಧ್ವನಿಯಾಗಿ ಕೆಲಸ ಮಾಡಿದರು. ರೈತರು, ಬಡವರು, ಮಹಿಳೆಯರಿಗೆ ಸರ್ಕಾರದಿಂದ ಸಿಗಬೇಕಿದ್ದ ಸವಲತ್ತುಗಳನ್ನು ದೊರಕಿಸಿಕೊಡಲು ನಿರಂತರವಾಗಿ ಶ್ರಮಿಸಿದವರು.  ಚಿತ್ರದುರ್ಗ ಜಿಲ್ಲೆಯ ವ್ಯಾಪ್ತಿಯಲ್ಲಿದ್ದ ದಾವಣಗೆರೆಯನ್ನು ನೂತನ ಜಿಲ್ಲೆಯಾಗಿಸಬೇಕೆಂಬ ಕೂಗನ್ನು ಸರ್ಕಾರಕ್ಕೆ ಮುಟ್ಟಿಸಿದ ಹೋರಾಟಗಾರರ ಪೈಕಿ ಶಾಸ್ತ್ರಿ ಅವರೂ ಪ್ರಮುಖರಾಗಿದ್ದರು. ಮಾಯಕೊಂಡ ತಾಲೂಕು ರಚನೆಯಾಗಬೇಕು ಎಂಬುದು ಅವರ ಕನಸಾಗಿತ್ತು. ಅದಕ್ಕಾಗಿ ಅನೇಕ ಹೋರಾಟಗಳನ್ನು ಮಾಡಿದ್ದರು. ದಾವಣಗೆರೆ ವಿಶ್ವವಿದ್ಯಾಲಯ ಸ್ಥಾಪನೆಗಾಗಿಯೂ ಅವರು ಧ್ವನಿ ಎತ್ತಿದ್ದರು.  ಮಧ್ಯ ಕರ್ನಾಟಕದ ದಾವಣಗೆರೆಯನ್ನು ರಾಜ್ಯದ ಎರಡನೇ ರಾಜಧಾನಿಯನ್ನಾಗಿ ಮಾಡಬೇಕು ಎಂದು ಅವರು ಬಲವಾಗಿ ಪ್ರತಿಪಾದನೆ ಮಾಡಿದ್ದರು. ಗಂಗಾ-ಕಾವೇರಿ ನದಿ ಜೋಡಣೆ ಮಾಡಬೇಕು ಎಂಬುದು ಅವರ ಒತ್ತಾಯವಾಗಿತ್ತು. ಜಿಲ್ಲೆಗೆ ಐಐಟಿ ಮುಂತಾದ ಉನ್ನತ ಶಿಕ್ಷಣ ಸಂಸ್ಥೆಗಳು ಬರಬೇಕು ಎಂದು ಆಗ್ರಹಿಸಿದ್ದರು.  ಮಾಯಕೊಂಡ ಗ್ರಾಮದ ಸರ್ವಾಂಗೀಣ ಅಭಿವೃದ್ಧಿಯ ನಿಟ್ಟಿನಲ್ಲಿ ಜಿಲ್ಲಾ ಕೇಂದ್ರ ದಾವಣಗೆರೆಯ ಹಲವಾರು ಕಚೇರಿಗಳಿಗೆ ಸೈಕಲ್‌ನಲ್ಲೇ ಸುತ್ತಾಡಿ ಹತ್ತಾರು ಸೌಲಭ್ಯಗಳನ್ನು ಗ್ರಾಮಕ್ಕೆ ತರುವಲ್ಲಿ ಯಶಸ್ವಿಯಾಗಿದ್ದರು.  ಅನ್ಯ ಗ್ರಾಮದ ಪಾಲಾಗಲಿದ್ದ ರೈತ ಸಂಪರ್ಕ ಕೇಂದ್ರವನ್ನು ಮಾಯಕೊಂಡದಲ್ಲೇ ಆರಂಭಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಮಾಯಕೊಂಡ ರೈಲು ನಿಲ್ದಾಣದ ಬಳಿ ಇದ್ದ ವಿಶಾಲವಾದ ಜಾಗದಲ್ಲಿ ವೇರ್‌ಹೌಸ್ ಸ್ಥಾಪನೆಯಾಗಲು ಕಾರಣಕರ್ತರಾಗಿದ್ದರು.  ಎಂ.ಎಸ್.ಕೆ. ಶಾಸ್ತ್ರಿ ಅವರು, 1940ರ ಮೇ 25 ರಂದು ಮಾಯಕೊಂಡ ಗ್ರಾಮದಲ್ಲಿ ಜನಿಸಿದರು. 23 ವರ್ಷದವರಿದ್ದಾಗಲೇ ಹೆಗಲಿಗೆ ಹಸಿರು ಶಾಲು ಧರಿಸಿ ಸಮಾಜ ಸೇವೆಯಲ್ಲಿ ತೊಡಗಿಕೊಂಡರು.