ಜಿಲ್ಲೆ

ನಾಗಮ್ಮ ಕೇಶವಮೂರ್ತಿ ಸೇವೆ ಅನನ್ಯ

ರಮೇಶ ಜಹಗೀರದಾರ್

ದಾವಣಗೆರೆ : ಮಾಜಿ ಸಚಿವೆ ನಾಗಮ್ಮ ಕೇಶವಮೂರ್ತಿ ಅವರು ತಮ್ಮ ಅಧಿಕಾರಾವಧಿಯಲ್ಲಿ ಮಾಡಿರುವ ಸಮಾಜ ಸೇವೆ, ಕೈಗೊಂಡ ಯೋಜನೆಗಳು ಮಾದರಿಯಾಗಿವೆ ಎಂದು ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಸ್ಮರಿಸಿದರು.  ವಿಧಾನಸಭೆಯಲ್ಲಿ ಸೋಮವಾರದಿಂದ ಆರಂಭವಾಗಿರುವ ಮುಂಗಾರು ಅಧಿವೇಶನದಲ್ಲಿ ಅಗಲಿದ ನಾಯಕರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಬಳಿಕ ಮಾತನಾಡಿದರು.  ಸರಳ ಸಜ್ಜನಿಕೆಯ ಮಾತೃಹೃದಯಿ ನಾಗಮ್ಮ ಕೇಶವಮೂರ್ತಿ ಅವರು ಅಧಿಕಾರವಧಿಯಲ್ಲಿ ಅನೇಕ ವೃದ್ಧಾಶ್ರಮ, ಅಂಧ ಮಕ್ಕಳ ಶಾಲೆ ತೆರೆದಿದ್ದಾರೆ. ವಿಶೇಷವಾಗಿ ನನ್ನ ಕ್ಷೇತ್ರದಲ್ಲಿ ಸರ್ಕಾರಿಗಳು ಇವೆಯೆಂದರೆ ಅದು ನಾಗಮ್ಮ ಕೇಶವಮೂರ್ತಿ ಅವರ ಕೊಡುಗೆಯಾಗಿದೆ ಎಂದು ತಿಳಿಸಿದರು.  ಮಾಯಕೊಂಡ ಕ್ಷೇತ್ರದಲ್ಲಿ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ವಿಧಾನಸಭೆಯ ಉಪಸಭಾಪತಿಯಾಗಿ, ಬೃಹತ್ ಮತ್ತು ಕೈಗಾರಿಕೆ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವೆಯಾಗಿ ಮಾಡಿದ ಕಾರ್ಯಗಳು ಇತಿಹಾಸದಲ್ಲಿ ಅಚ್ಚಳಿಯದೆ ಉಳಿದಿವೆ ಎಂದರು.  ಅಲ್ಲದೇ ನಾಗಮ್ಮನವರು ಕರ್ನಾಟಕದ ಶಿಕ್ಷಣ ಕ್ಷೇತ್ರಕ್ಕೆ ಅಪಾರ ಸೇವೆ ಸಲ್ಲಿಸಿದ್ದು, ಶಿಕ್ಷಣ ಸಚಿವರಾಗಿದ್ದಾಗ 1ರಿಂದ 4ನೇ ತರಗತಿಯವರೆಗೆ ಕನ್ನಡ ಮಾಧ್ಯಮ ಕಡ್ಡಾಯಗೊಳಿಸಿದರು. ಪ್ರಾಥಮಿಕ ಶಾಲಾ ಹಂತದಲ್ಲಿ ಮಹಿಳೆಯರಿಗೆ ಶೇ.50ರಷ್ಟು ಮೀಸಲಾತಿ ಸೇರಿ ಅವರು ಕೈಗೊಂಡ ಹಲವಾರು ಯೋಜನೆ ಇಂದಿಗೂ ಮಾದರಿಯಾಗಿವೆ ಎಂದರು.  ನಾಗಮ್ಮ ಕೇಶವಮೂರ್ತಿ ಅವರು ಮಾಯಕೊಂಡ ಕ್ಷೇತ್ರವಲ್ಲದೇ, ಜಿಲ್ಲೆಯ ನೂರಾರು ಗ್ರಾಮೀಣ ಪ್ರದೇಶಗಳಲ್ಲಿ ಶಿಕ್ಷಣಕ್ಕೆ ಒತ್ತು ನೀಡಿ ಶಾಲೆಗಳನ್ನು ಆರಂಭಿಸಿದ್ದರು. ಪ್ರತಿ ಗ್ರಾಮಗಳಲ್ಲಿ ಸರ್ಕಾರಿ ಮತ್ತು ಖಾಸಗಿ ಶಾಲೆಗಳ ತೆರೆದು ನನ್ನ ಕ್ಷೇತ್ರವನ್ನು ಶಿಕ್ಷಣ ಕ್ಷೇತ್ರವನ್ನಾಗಿ ಮಾಡಿದ್ದಾರೆ ಎಂದರು.