ಜಿಲ್ಲೆ

ಹಿರಿಯ ನಾಗರಿಕರ ದಿನಾಚರಣೆ

ರಮೇಶ ಜಹಗೀರದಾರ್

ದಾವಣಗೆರೆ : ಮಕ್ಕಳು ಕೇವಲ ಶಿಕ್ಷಣ ಪಡೆದರೆ ಸಾಲದು, ಸಂಸ್ಕೃತಿ ಹಾಗೂ ಸಂಸ್ಕಾರ ವೃದ್ಧಿಗೆ ಹಿರಿಯರ ಒಡನಾಟ ಬೇಕು ಎಂದು ದೃಷ್ಟಿ ಕಣ್ಣಿನ ಆಸ್ಪತ್ರೆ ನೇತ್ರತಜ್ಞ ಡಾ. ರವೀಂದ್ರನಾಥ್ ಹೇಳಿದರು.  ವನಿತಾ ಸಮಾಜ, ಆಶ್ರಯ ಹಿರಿಯ ವನಿತೆಯರ ಆನಂದಧಾಮ, ವಾತ್ಸಲ್ಯ ಹಿರಿಯ ವನಿತೆಯರ ವಸತಿ ನಿಲಯ ಸಹಯೋಗದಲ್ಲಿ ನಗರದ ಆನಂದ ಧಾಮದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.  ಇತ್ತೀಚಿನ ದಿನಗಳಲ್ಲಿ ಮಕ್ಕಳು ಉನ್ನತ ಶಿಕ್ಷಣ ಪಡೆಯುತ್ತಾರೆ. ಆದರೆ, ಶೈಕ್ಷಣಿಕವಾಗಿ ಎಷ್ಟೇ ಪದವಿ ಗಳಿಸಿದರೂ ಜೀವನದಲ್ಲಿ ಸಂಸ್ಕಾರ ಕಲಿಯುವುದು ಬಹಳ ಮುಖ್ಯ ಎಂದು ತಿಳಿಸಿದರು.  ಹಿರಿಯರ ಮಾರ್ಗದರ್ಶನದಲ್ಲಿ ಯುವ ಪೀಳಿಗೆ ಹೆಜ್ಜೆ ಹಾಕುವ ಜತೆಗೆ ಅವರ ಆದರ್ಶ ಗುಣ ಅಳವಡಿಸಿಕೊಳ್ಳಬೇಕು. ಕುಟುಂಬ ಹಾಗೂ ಸಮಾಜದಲ್ಲಿ ವೃದ್ಧರನ್ನು ಗೌರವದಿಂದ ಕಾಣಬೇಕು ಎಂದರು.  ಆನಂದಧಾಮದ ಹಿರಿಯರ ಕಣ್ಣಿನ ಆರೋಗ್ಯದ ಬಗ್ಗೆ ಕಾಳಜಿ ವಹಿಸಲಾಗುವುದು ಎಂದು ಹೇಳಿದರು.  ದಾವಣಗೆರೆ-ಹರಿಹರ ಅರ್ಬನ್ ಸಹಕಾರ ಬ್ಯಾಂಕಿನ ಅಧ್ಯಕ್ಷ ಎನ್.ಎ. ಮುರುಗೇಶ್ ಮಾತನಾಡಿ, ಹೆತ್ತವರು ಬದುಕಿದ್ದಾಗಲೇ ಅವರನ್ನು ಪ್ರೀತಿ ಹಾಗೂ ಕಾಳಜಿಯಿಂದ ಕಾಣಬೇಕು. ಇತ್ತೀಚಿನ ದಿನಗಳಲ್ಲಿ ಹಿರಿಯರ ಪ್ರೀತಿ-ವಾತ್ಸಲ್ಯ ಕಳೆದುಕೊಳ್ಳಲಾಗುತ್ತಿದೆ ಎಂದು ವಿಷಾದಿಸಿದರು.   ಸ್ತ್ರೀ ರೋಗ ತಜ್ಞೆ ಡಾ. ರಶ್ಮಿ ಸುಬೋಧ್ ಶೆಟ್ಟಿ, ವನಿತಾ ಸಮಾಜದ ಅಧ್ಯಕ್ಷೆ ಪದ್ಮ ಪ್ರಕಾಶ್, ಆಶ್ರಯ ಸಂಸ್ಥೆಯ ಅಧ್ಯಕ್ಷೆ ಸುನಿತಾ ವೀರನಾರಾಯಣ, ಕಾರ್ಯದರ್ಶಿ ಟಿ.ಎಸ್. ಶೈಲಜಾ, ವಾತ್ಸಲ್ಯ ಸಂಸ್ಥೆಯ ಅಧ್ಯಕ್ಷೆ ಮಮತಾ ಚಂದ್ರಶೇಖರ್, ಕಾರ್ಯದರ್ಶಿ ದೀಪಾ ಪ್ರಶಾಂತ್ ಶೆಟ್ಟಿ ಇದ್ದರು. ಸುಧಾ ಪ್ರಸಾದ್ ಪ್ರಾಸ್ತಾವಿಕ ಮಾತನಾಡಿದರು. ಸುಷ್ಮಾ ಮೋಹನ್ ಸ್ವಾಗತಿಸಿದರು.