ದಾವಣಗೆರೆ : ಭವಿಷ್ಯದ ಯಶಸ್ಸಿಗೆ ಕೌಶಲ ಆಧಾರಿತ ಪಠ್ಯಕ್ರಮ ಮತ್ತು ವಿದ್ಯಾರ್ಥಿ ಕೇಂದ್ರಿತ ಕಲಿಕೆ ಅಗತ್ಯ ಎಂದು ರಾಷ್ಟ್ರೀಯ ಕೌಶಲ ಅಭಿವೃದ್ಧಿ ನಿಗಮದ ಸಿಎಸ್ಆರ್ ಮತ್ತು ಕೌಶಲಾಭಿವೃದ್ಧಿ ಕನ್ಸಲ್ಟಂಟ್ ಡಾ. ಒ.ಪಿ. ಗೋಯಲ್ ಹೇಳಿದರು.
ನಗರದ ಜಿ.ಎಂ. ವಿಶ್ವವಿದ್ಯಾಲಯದ ವಾಣಿಜ್ಯ ಮತ್ತು ನಿರ್ವಹಣಾ ವಿಭಾಗದಿಂದ ಜಿಎಂಐಟಿ ಕಾಲೇಜಿನಲ್ಲಿ ಹಮ್ಮಿಕೊಂಡಿರುವ ‘ವಾಣಿಜ್ಯ ಶಿಕ್ಷಣ-ಗಡಿ ದಾಟಿ ಸಂಪರ್ಕ-ಭವಿಷ್ಯ ರೂಪಿಸುವುದು’ ವಿಷಯ ಕುರಿತ ಅಂತಾರಾಷ್ಟ್ರೀಯ ವಿಚಾರ ಸಂಕಿರಣದ ಎರಡನೇ ದಿನವಾದ ಬುಧವಾರ ಮಾತನಾಡಿದರು.
ಇಪ್ಪತ್ತೊಂದನೇ ಶತಮಾನದಲ್ಲಿ ಜಗತ್ತೇ ಒಂದು ಹಳ್ಳಿಯಂತೆ ಆಗಿರುವ ಈ ಸಂದರ್ಭದಲ್ಲಿ ಯಶಸ್ಸು ಕೇವಲ ವಿಷಯ, ನಿರ್ದಿಷ್ಟ ಜ್ಞಾನಕ್ಕಿಂತ ಹೆಚ್ಚಿನದನ್ನು ಬಯಸುತ್ತದೆ. ವಿದ್ಯಾರ್ಥಿಗಳು ಶ್ರಮ ಮತ್ತು ವಿಮರ್ಶಾತ್ಮಕ ಚಿಂತನೆ, ಸಾಂಸ್ಕೃತಿಕ ತಿಳಿವಳಿಕೆ, ಸಹಾನುಭೂತಿ ಮತ್ತು ಸಹಯೋಗದಂತಹ ಸಾಮರ್ಥ್ಯಗಳನ್ನು ಪಡೆಯಬೇಕು ಎಂದು ಸಲಹೆ ನೀಡಿದರು.
ವಿದ್ಯಾರ್ಥಿಗಳು ಕಲಿಕೆಯ ಜವಾಬ್ದಾರಿಯನ್ನು ತೆಗೆದುಕೊಳ್ಳುವ ಮೂಲಕ, ಸ್ವಯಂ ಪ್ರೇರಣೆ, ಸಮಯ ನಿರ್ವಹಣೆ ಮತ್ತು ಪರಿಶ್ರಮದಂತಹ ನಿರ್ಣಾಯಕ ಜೀವನ ಕೌಶಲಗಳನ್ನು ಅಭಿವೃದ್ಧಿ ಪಡಿಸಿಕೊಂಡು ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು.
ಲಂಡನ್ ಸೌತ್ ಬ್ಯಾಂಕ್ ಯೂನಿವರ್ಸಿಟಿಯ ಪ್ರಾಧ್ಯಾಪಕ ಡಾ. ಲೆಬರ್ನ್ ರೋಸ್, ಸಹ ಉಪನ್ಯಾಸಕ ಡಾ. ಲಾರೆನ್ಸ್ ಫಿಶೆರ್, ವಿಶ್ವವಿದ್ಯಾಲಯದ ಕುಲಪತಿ ಡಾ. ಎಸ್.ಆರ್. ಶಂಕಪಾಲ್, ಉಪ ಕುಲಪತಿ ಡಾ.ಡಿ. ಮಹೇಶಪ್ಪ, ಕುಲಸಚಿವ ಡಾ. ಬಿ.ಎಸ್. ಸುನೀಲ್ ಕುಮಾರ್, ಎಂಬಿಎ ವಿಭಾಗದ ನಿರ್ದೇಶಕ ಡಾ. ಬಕಪ್ಪ, ಜಿಎಂಐಟಿ ಕಾಲೇಜಿನ ಪ್ರಾಚಾರ್ಯ ಡಾ.ಎಂ.ಬಿ. ಸಂಜಯ್ ಪಾಂಡೆ, ಜಿಎಂಐಟಿ ಕಾಲೇಜಿನ ಎಂಬಿಎ ವಿಭಾಗದ ಮುಖ್ಯಸ್ಥ ಡಾ.ಪಿ.ಎಸ್. ಬಸವರಾಜ್, ವಿವಿಧ ವಿಭಾಗದ ಮುಖ್ಯಸ್ಥರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.