ಜಿಲ್ಲೆ

ಕ್ವಾಂಟಮ್ ಟೆಕ್ನಾಲಜಿ ಭವಿಷ್ಯದ ತಂತ್ರಜ್ಞಾನ

ರಮೇಶ ಜಹಗೀರದಾರ್

ದಾವಣಗೆರೆ : ಕ್ವಾಂಟಮ್ ಟೆಕ್ನಾಲಜಿ ಭವಿಷ್ಯದ ತಂತ್ರಜ್ಞಾನವಾಗಿದ್ದು ವಿವಿಧ ಕ್ಷೇತ್ರಗಳಿಗೆ ಇದರಿಂದ ಪ್ರಯೋಜನವಾಗಲಿದೆ ಎಂದು ದಾವಣಗೆರೆ ವಿಶ್ವವಿದ್ಯಾಲಯದ ಭೌತಶಾಸ್ತ್ರ ಪ್ರಾಧ್ಯಾಪಕ ಡಾ.ಕೆ.ಎಂ. ಈಶ್ವರಪ್ಪ ಹೇಳಿದರು.  ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ಜಿಲ್ಲಾ ಬಾಲಭವನ ಸಮಿತಿ ಸಂಯುಕ್ತ ಆಶ್ರಯದಲ್ಲಿ ನಗರದ ಬಾಪೂಜಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಶುಕ್ರವಾರ ಆಯೋಜಿಸಿದ್ದ, ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಹಾಗೂ ಜಿಲ್ಲಾ ಶಿಕ್ಷಣ ಮಹಾವಿದ್ಯಾಲಯಗಳ ಪ್ರಶಿಕ್ಷಣಾಧಿಕಾರಿಗಳ ವಿಜ್ಞಾನ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಮಾತನಾಡಿದರು.  ಕ್ವಾಂಟಮ್ ಕಂಪ್ಯೂಟರ್‌ಗಳ ಆವಿಷ್ಕಾರ ನಡೆಯುತ್ತಿದ್ದು ವಿವಿಧ ಕಂಪನಿಗಳು ಆ ಪ್ರಯತ್ನದಲ್ಲಿವೆ. ಇನ್ನೂ 10 ವರ್ಷದೊಳಗೆ ಅವು ಲಭ್ಯವಾಗಬಹುದು. ಮೆಡಿಕಲ್, ಪ್ಯಾರಾ ಮೆಡಿಕಲ್, ಮೆಟಲರ್ಜಿ, ಡಿಸೈನಿಂಗ್ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.  ಈಗಿನ ಸೂಪರ್ ಕಂಪ್ಯೂಟರ್‌ಗಳಿಗಿಂತಲೂ ಕ್ವಾಂಟಮ್ ಕಂಪ್ಯೂಟರ್‌ಗಳು ಶ್ರೇಷ್ಠವಾಗಿರಲಿವೆ. ಅಪಾರ ಪ್ರಮಾಣದ ಮಾಹಿತಿಯನ್ನು ವೇಗವಾಗಿ ರವಾನಿಸುವ ಸಾಮರ್ಥ್ಯ ಅವುಗಳಿಗಿರಲಿದೆ ಎಂದು ಅಭಿಪ್ರಾಯಪಟ್ಟರು.  ಈ ಹೊಸ ತಂತ್ರಜ್ಞಾನ ಕ್ಷೇತ್ರದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಮಾಡಲು ಕೇಂದ್ರ ಸರ್ಕಾರ 6 ಸಾವಿರ ಕೋಟಿ ರೂ.ಗಳನ್ನು ಒದಗಿಸಿದೆ. ವಿಕಸಿತ ಭಾರತದ ಸಾಕಾರಕ್ಕಾಗಿ ವಿಜ್ಞಾನ ಮತ್ತು ತಂತ್ರಜ್ಞಾನದ ಸಂಶೋಧನೆ ಮಾಡಲು ಯುವಜನರಿಗೆ ಪ್ರೋತ್ಸಾಹ ನೀಡುತ್ತಿದೆ. ಶಾಲಾ ಮಕ್ಕಳು ಮತ್ತು ಇತರರಿಗಾಗಿ ಹಲವು ಯೋಜನೆಗಳು ರೂಪುಗೊಂಡಿವೆ ಎಂದು ಮಾಹಿತಿ ನೀಡಿದರು.  ಲೇಸರ್ ಸಂಶೋಧನೆಯ ನಂತರ ರಾಮನ್ ಎಫೆಕ್ಟ್‌ಗೆ ಮಹತ್ವ ಬಂದಿದೆ. ಹಲವಾರು ಕ್ಷೇತ್ರಗಳಲ್ಲಿ ಅದು ಬಳಕೆಯಾಗುತ್ತಿದೆ ಎಂದು ತಿಳಿಸಿದರು.  ಬಿ.ಐ.ಇ.ಟಿ ಕಾಲೇಜು ನಿರ್ದೇಶಕ ಪ್ರೊ. ವೈ. ವೃಷಭೇಂದ್ರಪ್ಪ ಮಾತನಾಡಿ, ನಮ್ಮ ದೇಶದ ವಿಜ್ಞಾನಿಗಳ ಕುರಿತು ಶಾಲೆಗಳಲ್ಲಿ ಮಕ್ಕಳಿಗೆ ಮಾಹಿತಿ ನೀಡಬೇಕು. ಆ ಮೂಲಕ ಅವರಲ್ಲಿ ವಿಜ್ಞಾನದ ಬಗ್ಗೆ ಪ್ರೀತಿ, ಆಸಕ್ತಿ ಬೆಳೆಸಬೇಕು ಎಂದರು.  ಪ್ರಕೃತಿ ಮತ್ತು ವಿಜ್ಞಾನ ಜತೆ ಜತೆಯಾಗೇ ಹೋಗುತ್ತವೆ. ಹಲವು ಸಮಸ್ಯೆಗಳಿಗೆ ವಿಜ್ಞಾನದಲ್ಲಿ ಉತ್ತರವಿದೆ. ಸಂಸ್ಕೃತ ಶ್ಲೋಕಗಳಲ್ಲಿ ವಿಜ್ಞಾನವಿದೆ ಎಂದು ತಿಳಿಸಿದರು.  ದಾವಣಗೆರೆಯಲ್ಲಿ ಇತ್ತೀಚೆಗೆ ಜಲಸಿರಿ ಯೋಜನೆಯಡಿ ನದಿ ನೀರನ್ನು ಪೂರೈಸಲಾಗುತ್ತಿದೆ. ಆ ನೀರಿನ ಶುದ್ಧೀಕರಣಕ್ಕೆ ಮನೆಯಲ್ಲಿ ಆರ್‌ಒ ಯುನಿಟ್ ಉಪಯೋಗಿಸುವುದು ಆರೋಗ್ಯದ ದೃಷ್ಟಿಯಿಂದ ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.  ರಾಜ್ಯ ವಿಜ್ಞಾನ ಪರಿಷತ್ ದಾವಣಗೆರೆ ಘಟಕದ ಗೌರವಾಧ್ಯಕ್ಷ ಡಾ.ಜೆ.ಬಿ. ರಾಜ್ ಮಾತನಾಡಿ, ವಿಜ್ಞಾನ ಯಾವಾಗಲೂ ವಿಶ್ವಾಸಾರ್ಹವಾದುದು. ಅದರ ಮೂಲಕ ಇನ್ನೊಬ್ಬರಿಗೆ ನೆರವಾಗಬೇಕು. ಸಮಾಜಕ್ಕೆ ಇದರ ಲಾಭ ಆಗಬೇಕು ಎಂದು ಆಶಯ ವ್ಯಕ್ತಪಡಿಸಿದರು.  ಬಿಐಇಟಿ ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಎನ್.ಎಸ್. ಬಸವರಾಜಪ್ಪ, ರಾಸಾಯನಶಾಸ್ತ್ರ ವಿಭಾಗದ ಮುಖಸ್ಥ ಡಾ. ಪ್ರಸನ್ನಕುಮಾರ್, ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಎಂ.ಆರ್. ಜಗದೀಶ, ಉದ್ಯಮಿಗಳಾದ ಕೆ. ಗಿರೀಶ್, ಎಲ್.ಎಂ. ವಾಗೀಶ್, ರಾಘವೇಂದ್ರ ಹೈಟೆಕ್ ವಿಜ್ಞಾನ ಕಾಲೇಜು ಪ್ರಾಚಾರ್ಯ ಡಾ.ಎಂ.ಆರ್. ಅನಿಲ್ ಕುಮಾರ್, ವಿಜ್ಞಾನ ಪರಿಷತ್ತಿನ ಖಜಾಂಚಿ ಅಂಗಡಿ ಸಂಗಪ್ಪ, ಜಿಲ್ಲಾ ಸಮಿತಿ ಸದಸ್ಯ ಕೆ. ಸಿದ್ದೇಶ್, ಲೇಖಕ ಟಿ. ಸುರೇಶ್ ಇದ್ದರು.