ದಾವಣಗೆರೆ : ಯೋಗವು ಸರ್ವ ರೋಗಗಳನ್ನು ನಿವಾರಿಸುವ ಸಿದ್ಧೌಷಧ ಎಂದು ಯೋಗ ಶಿಕ್ಷಕ ಆರ್. ಸುರೇಶ್ ಹೇಳಿದರು.
ನಗರದ ವಿಶ್ವಚೇತನ ವಿದ್ಯಾನಿಕೇತನ ಶಾಲೆಯಲ್ಲಿ ಬುಧವಾರ, ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿದ್ಯಾರ್ಥಿಗಳಿಗೆ ಜ್ಞಾಪಕ ಶಕ್ತಿಯನ್ನು ಹೆಚ್ಚಿಸುವ, ಮನಸ್ಸಿಗೆ ಶಾಂತಿಯನ್ನು ನೀಡುವ, ದೈಹಿಕ ಮತ್ತು ಮಾನಸಿಕ ಸದೃಢತೆಯನ್ನು ಹೆಚ್ಚಿಸಲು ಹಾಗೂ ದೀರ್ಘಾಯುಷ್ಯಕ್ಕೆ ಯೋಗ ಸಹಕಾರಿಯಾಗಿದೆ. ಪ್ರತಿಯೊಬ್ಬರೂ ಯೋಗವನ್ನು ನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸುರೇಶ್ ಅವರು ಮಕ್ಕಳಿಗೆ ಯೋಗದ ಕುರಿತು ಮಾರ್ಗದರ್ಶನ ನೀಡಿದರು. ಹಿರಿಯ ಶಿಕ್ಷಕ ಬಿ. ನಾಗರಾಜ್, ಮಯೂರಾಸನ, ಸರ್ವಾಂಗಾಸನ ಸೇರಿ ವಿವಿಧ ಆಸನಗಳನ್ನು ಪ್ರದರ್ಶಿಸಿದರು. ಪ್ರಾಚಾರ್ಯ ಸತ್ಯನಾರಾಯಣ ರೆಡ್ಡಿ, ಮುಖ್ಯ ಶಿಕ್ಷಕ ಬಿ.ಎಂ. ಬಸವರಾಜಯ್ಯ, ಶಾಲಾ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.