ಜಿಲ್ಲೆ

ಈಶ್ವರಮ್ಮ ಶಾಲೆಯಲ್ಲಿ ಮಂತ್ರಿಮಂಡಲ ರಚನೆ

ರಮೇಶ ಜಹಗೀರದಾರ್

ದಾವಣಗೆರೆ :  ಮುಖ್ಯಮಂತ್ರಿ ಸೇರಿ 25 ಜನ ಸಚಿವರನ್ನೊಳಗೊಂಡ ನೂತನ ಮಂತ್ರಿಮಂಡಲ ಸೋಮವಾರ ಅಸ್ತಿತ್ವಕ್ಕೆ ಬಂದಿತು! ಸೂಟು ಧರಿಸಿ ಬಂದಿದ್ದ ಎಲ್ಲರೂ ಅತ್ಯುತ್ಸಾಹದಿಂದ ಭಾಗವಹಿಸಿ ಪ್ರತಿಜ್ಞಾವಿಧಿ ಸ್ವೀಕರಿಸಿದರು.  ನಗರದ ಪಿ.ಜೆ.ಬಡಾವಣೆಯ ಈಶ್ವರಮ್ಮ ಶಾಲೆಯಲ್ಲಿ ಹಮ್ಮಿಕೊಂಡಿದ್ದ 2024-25ನೇ ಸಾಲಿನ ಶೈಕ್ಷಣಿಕ ಶಾಲಾ ಮಂತ್ರಿ ಮಂಡಲದ ಪ್ರತಿಜ್ಞಾ ಸ್ವೀಕಾರ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಉತ್ಸಾಹ ಇಮ್ಮಡಿಸಿತ್ತು.  10 ನೇ ತರಗತಿ ವಿದ್ಯಾರ್ಥಿನಿ ಬಿ.ಎನ್.ಭಾವನಾ ಮುಖ್ಯಮಂತ್ರಿಯಾಗಿ, ಎ.ಪಿ.ಯಶಸ್ವಿನಿ ವಿರೋಧ ಪಕ್ಷದ ನಾಯಕಿಯಾಗಿ ಹಾಗೂ ಇತರ 25 ವಿದ್ಯಾರ್ಥಿಗಳು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.  ಶಾಲೆಯ ಪ್ರಾಚಾರ್ಯ ಕೆ.ಎಸ್.ಪ್ರಭುಕುಮಾರ್ ರಾಜ್ಯಪಾಲರಾಗಿ ಪ್ರತಿಜ್ಞಾವಿಧಿ ಬೋಧಿಸಿದರು, ಸಭಾಪತಿಯಾಗಿ ಉಪ ಪ್ರಾಚಾರ್ಯೆ ಜಿ.ಎಸ್.ಶಶಿರೇಖಾ, ಸಂಪುಟ ಕಾರ್ಯದರ್ಶಿಯಾಗಿ ಸಹ ಶಿಕ್ಷಕಿ ರೋಹಿಣಿ ಎಂ. ಭಾವಿ ನಾಯಕರಾಗುವ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾದರು.  ಶಾಲಾಡಳಿತ ಮಂಡಳಿಯ ಅಧ್ಯಕ್ಷೆ ಕೆ.ಆರ್.ಸುಜಾತ ಕೃಷ್ಣ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಂತ್ರಿ ಮಂಡಲದ ಎಲ್ಲ ವಿದ್ಯಾರ್ಥಿಗಳು ಪ್ರಮಾಣ ವಚನ ಸ್ವೀಕರಿಸಿದಂತೆ ಜೀವನದಲ್ಲಿ ಮೌಲ್ಯಗಳನ್ನು  ಅಳವಡಿಸಿಕೊಂಡು ಉತ್ತಮ ನಾಗರಿಕರಾಗಿ ಬದುಕಬೇಕು ಎಂದರು.  ಮಕ್ಕಳು ಮೊದಲು ದೇಶಭಕ್ತಿ ಬೆಳೆಸಿಕೊಳ್ಳಬೇಕು. ನಮ್ಮ ಮಾತೃಭೂಮಿ, ತಂದೆ-ತಾಯಿಯರನ್ನು ಗೌರವಿಸಬೇಕು. ಸ್ವಾಮಿ ವಿವೇಕಾನಂದರಂತೆ ದೇಶಭಕ್ತರಾಗಿ ಉತ್ತಮ ನಾಯಕತ್ವ ಬೆಳೆಸಿಕೊಳ್ಳಬೇಕು ಹಾಗೂ ಕಿವಿಮಾತು ಹೇಳಿದರು.  ಮಹಾನಗರ ಪಾಲಿಕೆ ಸದಸ್ಯ ಗಡಿಗುಡಾಳ್ ಮಂಜುನಾಥ್, ಈಶ್ವರಮ್ಮ ಟ್ರಸ್ಟ್ ಕಾರ್ಯದರ್ಶಿ ಜಿ.ಆರ್ ವಿಜಯಾನಂದ್, ಜಿ.ಎಸ್.ಶಶಿರೇಖಾ, ಎನ್.ಎಸ್.ಸವಿತ, ಎಂ.ರೋಹಿಣಿ ಇದ್ದರು. ಸಹ ಶಿಕ್ಷಕಿ ಹೇಮಲತಾ ಚುನಾವಣಾ ಪ್ರಕ್ರಿಯೆ ವಿವರಿಸಿದರು. ಸಹಶಿಕ್ಷಕಿ ಬಿ.ಶ್ರೀದೇವಿ ವಿದ್ಯಾರ್ಥಿ ಸಂಘಗಳನ್ನು ಪರಿಚಯಿಸಿದರು.