ಜಿಲ್ಲೆ

ವ್ಯಾಪಾರ ನಡೆಸಿ ಕೌಶಲ ಮೆರೆದ ಮಕ್ಕಳು

ರಮೇಶ ಜಹಗೀರದಾರ್

ದಾವಣಗೆರೆ : ತಾಜಾ ಸೊಪ್ಪು, ತರಕಾರಿ, ಹಣ್ಣುಗಳು, ಕಿರಾಣಿ ಸಾಮಾನುಗಳು ಮತ್ತು ಸಿಹಿ ಪದಾರ್ಥಗಳ ಮಾರಾಟ ನಗರದಲ್ಲಿ ಮಂಗಳವಾರ ಭರದಿಂದ ನಡೆಯಿತು. ಪುಟಾಣಿ ಮಕ್ಕಳು ಸಂತೆಯಲ್ಲಿ ಕುಳಿತು ವ್ಯಾಪಾರ ನಡೆಸುವ ಮೂಲಕ ಜನಮನ ಸೆಳೆದರು.
 ನಗರದ ನಿಟುವಳ್ಳಿಯ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಮೈದಾನದಲ್ಲಿ ಮಾರ್ಕೇಟ್ ಡೇ ಪ್ರಯುಕ್ತ ಶಾಲೆಯ ಪ್ಲೇ ಗ್ರೂಪ್‌ನಿಂದ ಎರಡನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಸಂತೆಯಲ್ಲಿ ಮಕ್ಕಳು ಅತ್ಯಂತ ಉತ್ಸಾಹದಿಂದ ಭಾಗವಹಿಸಿದ್ದರು.
 ಶಾಲೆಯ ವಿಶಾಲ ಅಂಗಳದಲ್ಲಿ ದೈನಂದಿನ ಜೀವನಕ್ಕೆ ಬೇಕಾದ ತರಕಾರಿ ಹಾಗೂ ಮತ್ತಿತರೆ ವಸ್ತುಗಳನ್ನು ಸಾಲಾಗಿ ಜೋಡಿಸಿದ ಮಕ್ಕಳು ಮರದ ನೆರಳು ಹಾಗೂ ದೊಡ್ಡ ಛತ್ರಿಗಳ ಆಶ್ರಯದಲ್ಲಿ ಬಿಸಿಲಿನಿಂದ ರಕ್ಷಣೆ ಪಡೆದು ವ್ಯವಹಾರ ನಡೆಸಿದರು. ಈರುಳ್ಳಿ, ಟೊಮೆಟೊ, ಮೆಣಸಿನಕಾಯಿ, ಕ್ಯಾರೆಟ್ ಮೊದಲಾದ ವಸ್ತುಗಳಿಗೆ ಮಾರುಕಟ್ಟೆ ದರ ನಿಗದಿಪಡಿಸಿ ಮಾರಾಟ ಮಾಡಿದರು.
 ತರಕಾರಿ ಮಾರಾಟಕ್ಕೆ ಬೇಕಾದ ಅಗತ್ಯ ತಕ್ಕಡಿ ಹಾಗೂ ತೂಕದ ಕಲ್ಲುಗಳೊಂದಿಗೆ ಬಂದಿದ್ದ ಮಕ್ಕಳು ಗ್ರಾಹಕರು ಕೇಳಿದ ತೂಕಕ್ಕೆ ಅನುಗುಣವಾಗಿ ತರಕಾರಿಗಳನ್ನು ತೂಕ ಮಾಡಿಕೊಟ್ಟಿದ್ದು ವಿಶೇಷ. ಮಕ್ಕಳ ಪಾಲಕರು, ನೆರೆಹೊರೆಯವರು, ಶಾಲಾ ಶಿಕ್ಷಕರು ಹಾಗೂ ಆಡಳಿತ ಮಂಡಳಿಯವರು ತರಕಾರಿ ಮೊದಲಾದ ವಸ್ತು ಖರೀದಿಸಿದರು.
 ಮಕ್ಕಳಲ್ಲಿ ವ್ಯವಹಾರಿಕ ಜ್ಞಾನ ಬೆಳೆಸುವ ಉದ್ದೇಶದಿಂದ ಶಾಲೆಯಲ್ಲಿ ಪ್ರತಿವರ್ಷ ಒಂದೊಂದು ತರಗತಿಯ ಮಕ್ಕಳಿಗೆ ಮಾರ್ಕೇಟ್ ಡೇ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಂದ ಉತ್ತಮ ಪ್ರತಿಕ್ರಿಯೆ ಕಂಡು ಬಂದಿದೆ ಎಂದು ಶಾಲೆಯ ಶಿಕ್ಷಕರು ತಿಳಿಸಿದರು.
 ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಕಾರ್ಯದರ್ಶಿ ಜಯಣ್ಣ ಹಾಗೂ ಶಾಲಾ ಸಮಿತಿ ಸದಸ್ಯೆ ಭಾರತಿ ಹೆಗಡೆ ಕಾರ್ಯಕ್ರಮ ಉದ್ಘಾಟಿಸಿದರು. ಸಮಿತಿ ಸದಸ್ಯರಾದ ವಿನಾಯಕ ರಾನಡೆ, ಶಂಭುಲಿಂಗಪ್ಪ ಶಾಲೆ ಮುಖ್ಯಶಿಕ್ಷಕಿ ಸುಗುಣ ಇತರರು ಇದ್ದರು.