ಜಿಲ್ಲೆ

ಅಜ್ಞಾನದಿಂದ ಜ್ಞಾನದ ಕಡೆ ಸಾಗುವ ಸನ್ಮಾರ್ಗ ದೀಪಾವಳಿ

ದಾವಣಗೆರೆ  : ಬೆಳಕಿನ ಹಬ್ಬ ದೀಪಾವಳಿಯನ್ನು ಆಚರಿಸುವ ಮೂಲಕ ಅಜ್ಞಾನದಿಂದ ಜ್ಞಾನದ ಕಡೆ ಸಾಗುವ ಸನ್ಮಾರ್ಗವನ್ನು ಕಂಡುಕೊಳ್ಳೋಣ ಎಂದು ಜಿಲ್ಲೆಯ ಸಶಸ್ತ್ರ ಮೀಸಲು ಪಡೆಯ ಡಿವೈಎಸ್ಪಿ ಪಿ.ಬಿ. ಪ್ರಕಾಶ್ ಹೇಳಿದರು.  ಹರಿಹರ ತಾಲೂಕಿನ ಕೊಂಡಜ್ಜಿ ಗ್ರಾಮದ ಪೊಲೀಸ್ ಪಬ್ಲಿಕ್ ಶಾಲೆಯಲ್ಲಿ ಆಯೋಜಿಸಿದ್ದ ದೀಪಾವಳಿ ಹಬ್ಬದ ಆಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದರು.  ಕತ್ತಲು ಎಂದರೆ ಅಜ್ಞಾನ, ಬೆಳಕು ಎಂದರೆ ಜ್ಞಾನ. ಬೆಳಕು ಒಳಿತನ್ನು ಸೂಚಿಸುತ್ತದೆ. ಅನಾದಿ ಕಾಲದಿಂದಲೂ ಭಾರತೀಯ ಸಂಸ್ಕೃತಿಯಲ್ಲಿ ಬೆರೆತಿರುವ ಈ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ, ಪೌರಾಣಿಕ ಹಿನ್ನೆಲೆಯೊಂದಿಗೆ ಆಚರಿಸುವ ಮೂಲಕ ಮುಂದಿನ ತಲೆಮಾರಿಗೆ ನಮ್ಮ ಸಂಸ್ಕೃತಿಯನ್ನು ಪಸರಿಸಬೇಕಾದ ಜವಾಬ್ದಾರಿ ಮಕ್ಕಳ ಮೇಲಿದೆ ಎಂದು ತಿಳಿಸಿದರು.  ಶಾಲಾ ಆವರಣದಲ್ಲಿ 5 ಸಾವಿರ ದೀಪಗಳನ್ನು ಬೆಳಗುವ ಮೂಲಕ ವಿಶಿಷ್ಟ ಹಾಗೂ ವಿಭಿನ್ನವಾಗಿ ಹಬ್ಬವನ್ನು ಆಚರಿಸಲಾಯಿತು. ಶಾಲಾ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಡಿಎಆರ್‌ನ ಪೊಲೀಸ್ ಇನ್ಸ್‌ಪೆಕ್ಟರ್‌ಗಳಾದ ಮಹೇಶ್ ಪಾಟೀಲ್ ಹಾಗೂ ನಾಗರಾಜ್ ಇದ್ದರು.  ಶಾಲಾ ಪ್ರಾಚಾರ್ಯೆ ಚಂಪಾ ಸತೀಶ್, ಬೋಧಕ, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಪಾಲಕರು ಪಾಲ್ಗೊಂಡಿದ್ದರು.