ದಾವಣಗೆರೆ : ಮಕ್ಕಳು ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ಓದಿನಲ್ಲೂ ಚುರುಕಾಗುತ್ತಾರೆ, ಜೀವನವನ್ನು ಎದುರಿಸುವ ಧೈರ್ಯ ಬೆಳೆಯುತ್ತದೆ ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನೇಶ ಕೆ. ಶೆಟ್ಟಿ ಹೇಳಿದರು. ಪದವಿಪೂರ್ವ ಶಿಕ್ಷಣ ಇಲಾಖೆ ಮತ್ತು ಆನಂದ ಪದವಿಪೂರ್ವ ಕಾಲೇಜಿನ ಆಶ್ರಯದಲ್ಲಿ ನಗರದಲ್ಲಿ ಆಯೋಜಿಸಿರುವ ಪದವಿಪೂರ್ವ ಕಾಲೇಜುಗಳ ರಾಜ್ಯಮಟ್ಟದ ಫುಟ್‌ಬಾಲ್ ಪಂದ್ಯಾವಳಿಯನ್ನು ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ಉದ್ಘಾಟಿಸಿ ಮಾತನಾಡಿದರು. ಕ್ರೀಡೆ ಮತ್ತು ಶಿಕ್ಷಣ ಒಂದೇ ನಾಣ್ಯದ ಎರಡು ಮುಖಗಳಾಗಿದ್ದು ಎರಡೂ ಜತೆ ಜತೆಯಲ್ಲೇ ಸಾಗಬೇಕು. ಯಾವುದೇ ಹಂತದಲ್ಲೂ ಕ್ರೀಡೆಯನ್ನು ಬಿಡಬಾರದು ಎಂದು ಸಲಹೆ ನೀಡಿದರು. ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆ, ಶಿಕ್ಷಣ ಎಲ್ಲದರಲ್ಲೂ ಸಕ್ರಿಯವಾಗಿ ಭಾಗವಹಿಸಬೇಕು. ಇದರಿಂದ ಪ್ರತಿಭೆ ಬೆಳಕಿಗೆ ಬರುತ್ತದೆ. ಭವಿಷ್ಯದಲ್ಲಿ ನೆರವಾಗುತ್ತದೆ. ಇದು ಸ್ಪರ್ಧಾತ್ಮಕ ಯುಗ ಆಗಿರುವುದರಿಂದ ಪ್ರತಿಭೆಗೆ ಬೆಲೆ ಇದೆ. ಸಂವಹನ ಕಲೆಯನ್ನು ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. ರಾಜ್ಯಮಟ್ಟದ ಕ್ರೀಡಾಕೂಟಗಳಿಗೆ ಸಾಮಾನ್ಯವಾಗಿ ಬೆಂಗಳೂರು, ಮೈಸೂರು ಭಾಗದ ಕ್ರೀಡಾಪಟುಗಳೇ ಆಯ್ಕೆಯಾಗುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ದಾವಣಗೆರೆಯಿಂದಲೂ ಬಹಳಷ್ಟು ಕ್ರೀಡಾಪಟುಗಳು ಬೆಳಕಿಗೆ ಬರುತ್ತಿದ್ದಾರೆ ಎಂದು ತಿಳಿಸಿದರು. ಎಸ್.ಎಸ್. ಮಲ್ಲಿಕಾರ್ಜುನ್ ಸಚಿವರಾದ ನಂತರ ಇದುವರೆಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಜಿಲ್ಲೆಗೆ 16 ಕೋಚ್‌ಗಳು ಬಂದಿದ್ದಾರೆ. ಜಿಲ್ಲೆಯ ಮಕ್ಕಳಿಗೆ ಉತ್ತಮ ತರಬೇತಿ ಸಿಗುತ್ತಿದೆ. ಅವರಿಗೆ ಟ್ರಾೃಕ್ ಸೂಟ್, ಶೂ ಇನ್ನಿತರ ಸೌಲಭ್ಯಗಳು ದೊರೆಯುತ್ತಿವೆ. ಕ್ರೀಡೆ ಬೆಳವಣಿಗೆಗೆ ಇದರಿಂದ ಅನುಕೂಲವಾಗಿದೆ ಎಂದರು. ಡಿಡಿಪಿಯು ಡಿ. ಪಳನಿವೇಲು, ಜಿಲ್ಲಾ ಪದವಿಪೂರ್ವ ಉಪನ್ಯಾಸಕರ ಸಂಘದ ಅಧ್ಯಕ್ಷ ಸಿ.ಬಿ. ರವಿ, ಪ್ರಾಚಾರ್ಯ ಅವಿನಾಶ್ ಜೆ. ನಾಯ್ಕ ಇತರರು ಇದ್ದರು. ಶುಕ್ರವಾರ ಹಾಗೂ ಶನಿವಾರ ಎರಡು ದಿನಗಳ ಕಾಲ ನಡೆಯುವ ಈ ಟೂರ್ನಿಗೆ ರಾಜ್ಯದ 33 ಶೈಕ್ಷಣಿಕ ಜಿಲ್ಲೆಗಳಿಂದ ತಂಡಗಳು ಭಾಗವಹಿಸುತ್ತಿವೆ. ಗುರುವಾರ ಸಂಜೆಯ ವರೆಗೆ ಬಾಲಕರ 25, ಬಾಲಕಿಯರ 22 ತಂಡಗಳು ಆಗಮಿಸಿದ್ದವು. ನಾಕೌಟ್ ಮಾದರಿಯ ಈ ಪಂದ್ಯಗಳು ಜಿಲ್ಲಾ ಕ್ರೀಡಾಂಗಣ, ಯುಬಿಡಿಟಿ ಕಾಲೇಜು ಮೈದಾನ ಹಾಗೂ ತರಳಬಾಳು ಹೈಸ್ಕೂಲ್ ಮೈದಾನದಲ್ಲಿ ಬೆಳಗ್ಗೆ 8ರಿಂದ ಸಂಜೆ 6ರ ವರೆಗೆ ನಡೆಯಲಿವೆ. ... (ಬಾಕ್ಸ್) ಕ್ರೀಡೆಗೂ ಇದೆ ಮನ್ನಣೆ ಐಎಎಸ್, ಐಪಿಎಸ್ ಮಾಡಿದವರು ಉನ್ನತ ಹುದ್ದೆಗಳಿಗೆ ಹೋಗುತ್ತಾರೆ. ಅದೇ ರೀತಿ ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡಿದವರಿಗೂ ಉತ್ತಮ ಅವಕಾಶಗಳಿವೆ ಎಂದು ಆನಂದ್ ಎಜುಕೇಶನಲ್ ಟ್ರಸ್ಟ್ ಚೇರ್‌ಮನ್ ಆನಂದ್ ಪೋತಿನ ಹೇಳಿದರು. ಯುವಶಕ್ತಿಯ ಅಭಿವೃದ್ಧಿಗೆ ಸರ್ಕಾರ ನೀಡುವ ಅನುದಾನ ಹೊರೆಯಲ್ಲ, ಅದರಿಂದ ದೇಶಕ್ಕೇ ಒಳಿತಾಗುತ್ತದೆ. ಕ್ರೀಡೆಗೆ ಉತ್ತೇಜನ ನೀಡಬೇಕು ಎಂದು ಆಗ್ರಹಿಸಿದರು. ಕ್ರೀಡೆಯಯಲ್ಲಿ ಆಸಕ್ತಿ ಹೊಂದಬೇಕು. ಜತೆಗೆ ಜೀವನದಲ್ಲಿ ಸಂಸ್ಕಾರವನ್ನೂ ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.