ದಾವಣಗೆರೆ : ಮಕ್ಕಳಲ್ಲಿ ಸಾಮಾಜಿಕ ಹಾಗೂ ನೈತಿಕ ಮೌಲ್ಯಗಳನ್ನು ಬೆಳೆಸಿದಾಗ ಶಿಕ್ಷಣಕ್ಕೆ ಅರ್ಥ ಬರುತ್ತದೆ ಎಂದು ಪೊಲೀಸ್ ಇನ್ಸ್‌ಪೆಕ್ಟರ್ ವೈ.ಎಸ್. ಶಿಲ್ಪಾ ಹೇಳಿದರು. ನಗರದ ಮಾಗನೂರು ಬಸಪ್ಪ ಶಾಲಾ ಸಮುಚ್ಚಯದಲ್ಲಿ ಇತ್ತೀಚೆಗೆ, ಸಾಂಸ್ಕೃತಿಕ ಹಾಗೂ ಕ್ರೀಡಾಕೂಟದ ಬಹುಮಾನ ವಿತರಣಾ ಸಮಾರಂಭದಲ್ಲಿ ಮಾತನಾಡಿದರು. ಶಿಕ್ಷಕರು ಹಾಗೂ ಪಾಲಕರು ಮಕ್ಕಳನ್ನು ಕೇವಲ ಪುಸ್ತಕ ಓದಿ ಅಂಕ ಪಡೆಯುವುದಕ್ಕೆ ಸೀಮಿತಗೊಳಿಸದೇ, ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸಬೇಕು ಎಂದು ತಿಳಿಸಿದರು. ಮಕ್ಕಳು ಮೊಬೈಲ್ ಗೀಳನ್ನು ಬಿಟ್ಟು ಓದಿನ ಕಡೆಗೆ ಗಮನ ಹರಿಸಬೇಕು. ಸಮಾಜದ ಸ್ವಾಸ್ಥೃವನ್ನು ಕಾಪಾಡುವ ಹೆಚ್ಚಿನ ಜವಾಬ್ದಾರಿ ಶಿಕ್ಷಕರ ಮೇಲಿರುತ್ತದೆ ಎಂದು ಹೇಳಿದರು. ಗೌರವ ಕಾರ್ಯದರ್ಶಿ ಎಂ.ಬಿ. ಸಂಗಮೇಶ್ವರ ಗೌಡರು ಮಾತನಾಡಿ, ವಿದ್ಯಾರ್ಥಿಗಳು ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಿ ಬಹುಮಾನ ಪಡೆದುಕೊಳ್ಳಬೇಕು. ವಿದ್ಯಾರ್ಥಿಗಳು ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಬದುಕಬೇಕು ಎಂದು ತಿಳಿಸಿದರು. ಸಂಸ್ಥೆಯ ಹಳೆಯ ವಿದ್ಯಾರ್ಥಿಗಳಾದ ಕೆ.ಎ. ಸದ್ವಿಕಾಸ್, ಡಾ.ಜಿ.ವಿ. ರಾಕೇಶ್, ಸಂಸ್ಥೆಯ ಆಡಳಿತಾಧಿಕಾರಿ ಎಸ್.ಆರ್. ಶಿರಗಂಬಿ. ಶಾಲಾ ಮುಖ್ಯಸ್ಥರಾದ ಎ.ಎಸ್. ಕುಸುಮಾ, ಎಸ್. ಮಂಜುನಾಥ್, ಶಿಕ್ಷಕರು ಇದ್ದರು. ದೈಹಿಕ ಶಿಕ್ಷಕ ಎಂ.ಎಸ್. ಕರಿಬಸವ ಸ್ವಾಮಿ ಕ್ರೀಡಾ ವಾರ್ಷಿಕ ವರದಿ ಓದಿದರು.