ಜಿಲ್ಲೆ

ಅಕ್ರಮ ಮರಳು ಗಣಿಗಾರಿಕೆ ವಿರುದ್ಧ ಕ್ರಮ

ರಮೇಶ ಜಹಗೀರದಾರ್

ದಾವಣಗೆರೆ : ಜಿಲ್ಲೆಯಲ್ಲಿ ಅಕ್ರಮ ಮರಳು ಗಣಿಗಾರಿಕೆ ಕುರಿತು ಹಲವು ದೂರುಗಳು ಕೇಳಿ ಬರುತ್ತಿವೆ. ಅಂಥವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಸೂಚಿಸಿದರು.  ಜಿಲ್ಲಾಡಳಿತ ಭವನದಲ್ಲಿ ಶನಿವಾರ, ಜಿಲ್ಲಾ ಮರಳು ಉಸ್ತುವಾರಿ ಸಮಿತಿ ಸಭೆಯಲ್ಲಿ ಮಾತನಾಡಿದರು.  ನಿಯಮಾನುಸಾರ ವೇ-ಬ್ರಿಡ್ಜ್‌ಗಳಲ್ಲಿ ತೂಕ ನಿರ್ದಿಷ್ಟವಾಗಿದ್ದರೂ, ತದನಂತರ ನಿಗದಿತ ತೂಕಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಅಕ್ರಮವಾಗಿ ಸಾಗಣೆ ಮಾಡಲಾಗುತ್ತಿದೆ. ವಾಹನಗಳ ಮೇಲ್ಪದರಗಳಲ್ಲಿ ಎಂಸ್ಯಾಂಡ್ ಮತ್ತು ಮಧ್ಯ ಭಾಗದಲ್ಲಿ ಮರಳು ತುಂಬಿ, ಎಂಸ್ಯಾಂಡ್ ರೂಪದಲ್ಲಿ ಮರಳು ಸಾಗಣೆ ಮಾಡುತ್ತಿರುವ ಬಗ್ಗೆ ದೂರುಗಳಿವೆ ಎಂದು ತಿಳಿಸಿದರು.  ಕೆರೆ ಹೂಳೆತ್ತುವ ವೇಳೆ ತೆಗೆಯುವ ಮಣ್ಣನ್ನು ರೈತರು ಕೃಷಿ ಚಟುವಟಿಕೆಗಳಿಗೆ ಬಳಸಿಕೊಳ್ಳಬಹುದು. ಜಿಲ್ಲೆಯಲ್ಲಿರುವ ಯಾವುದೇ ಕೆರೆಗಳ ಮಣ್ಣನ್ನು ರೈತರು ತಮ್ಮ ತೋಟ, ಹೊಲಗಳಿಗೆ ಬಳಸಿಕೊಳ್ಳಬಹುದು ಎಂದು ಹೇಳಿದರು.  ಇದರಿಂದ ಕೆರೆಯ ನೀರಿನ ಸಂಗ್ರಹಣಾ ಸಾಮರ್ಥ್ಯ ಹೆಚ್ಚುವ ಜತೆಗೆ ರೈತರ ಜಮೀನಿನ ಫಲವತ್ತತೆ ಜಾಸ್ತಿಯಾಗಿ ರಸಗೊಬ್ಬರಗಳ ಬಳಕೆ ಪ್ರಮಾಣ ಕಡಿಮೆ ಮಾಡುವರು. ಆದರೆ ಆಳವಾಗಿ ತೆಗೆಯಲು ಮತ್ತು ವಾಣಿಜ್ಯ ಉದ್ದೇಶಕ್ಕೆ ಬಳಕೆ ಮಾಡುವಂತಿಲ್ಲ. ಮಾಡಿದಲ್ಲಿ ರಾಜಧನ ಪಾವತಿಸಿ ಅನುಮತಿ ಪಡೆದುಕೊಳ್ಳಬೇಕಾಗುತ್ತದೆ. ಆದರೆ ಕೃಷಿ ಚಟುವಟಿಕೆಗಳಿಗೆ ಅನುಮತಿ ಬೇಕಿಲ್ಲ ಎಂದು ಸಷ್ಟಪಡಿಸಿದರು.  ಆದ್ದರಿಂದ ಅಧಿಕಾರಿಗಳು ತಾಲೂಕುವಾರು ಹೂಳೆತ್ತಲು ಅರ್ಹವಿರುವ ಕೆರೆಗಳ ಸಮಗ್ರ ವರದಿಯನ್ನು ಒಂದು ವಾರದೊಳಗೆ ನೀಡಬೇಕೆಂದು ಅಧಿಕಾರಿಗಳಿಗೆ ನಿರ್ದೇಶಿಸಿದರು.  ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಿತ್ತೆ ಮಾಧವ ವಿಠ್ಠಲರಾವ್, ಎಸ್ಪಿ ಉಮಾ ಪ್ರಶಾಂತ್, ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್ ಇನ್ನಿತರ ಅಧಿಕಾರಿಗಳು ಇದ್ದರು.