ದಾವಣಗೆರೆ : ಶಾಲೆಗಳಲ್ಲಿ ಎಲ್ಲ ಸಮುದಾಯದ ಮಕ್ಕಳಿದ್ದು ಸಮಾನತೆಯನ್ನು ಕಾಣಬಹುದಾಗಿದೆ. ಸಂವಿಧಾನದ ರಕ್ಷಣೆ ಮಾಡುವ ಜವಾಬ್ದಾರಿ ಭಾವೀ ಪ್ರಜೆಗಳಾದ ಮಕ್ಕಳ ಮೇಲಿದೆ ಎಂದು ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ನಗರದ ಗಾಜಿನ ಮನೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಂವಿಧಾನ ದಿನ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜಾತ್ಯತೀತ, ಸಾಮರಸ್ಯದ ದೇಶವಾಗಲು ಸಂವಿಧಾನದಡಿ ಆಡಳಿತ ನಡೆಸಿದಾಗ ಮಾತ್ರ ಸಾಧ್ಯವಾಗಲಿದೆ. ಸಂವಿಧಾನದಿಂದ ಎಲ್ಲ ಸಮುದಾಯದವರಿಗೆ ನ್ಯಾಯ ಸಿಗಲಿದೆ. ಈ ಹಿನ್ನೆಲೆಯಲ್ಲಿ ವಿವಿಧತೆಯಲ್ಲಿಯೂ ಏಕತೆಯನ್ನು ಕಾಪಾಡಿಕೊಳ್ಳಲಾಗಿದೆ ಎಂದು ತಿಳಿಸಿದರು. ಸಂವಿಧಾನ ಪೀಠಿಕೆ ಓದಿದರೆ ಜಾತಿ ವ್ಯವಸ್ಥೆಯನ್ನು ನಿರ್ಮೂಲನೆ ಮಾಡಬಹುದಾಗಿದೆ. ಎಲ್ಲ ಧರ್ಮಗಳ ಮೇರು ಗ್ರಂಥವಾಗಿದ್ದು ಸಮಾಜದಲ್ಲಿ ಶಾಂತಿ ಇರಬೇಕೆಂದರೆ ಸಂವಿಧಾನ ಮಹತ್ವವನ್ನು ಎಲ್ಲರೂ ಅರಿತುಕೊಳ್ಳಬೇಕಾಗಿದೆ ಎಂದು ಹೇಳಿದರು. ಅಂತಹ ಸಂವಿಧಾನವನ್ನು ಬರೆದವರು ಬಾಬಾ ಸಾಹೇಬ್ ಅಂಬೇಡ್ಕರ್ ಅವರಾಗಿದ್ದು ಅವರ ಅನುಯಾಯಿಗಳು ಪ್ರಾಮಾಣಿಕರಾಗಿರಬೇಕು. ದೂರದೃಷ್ಟಿ ಹೊಂದಿದ್ದ ನಮ್ಮ ಸಂವಿಧಾನದ ಶಿಲ್ಪಿಗಳು ಭಾರತದ ರಾಷ್ಟ್ರೀಯತೆಯ ಮೇಲೆ ಸಂಪೂರ್ಣ ವಿಶ್ವಾಸ ಹೊಂದಿದ್ದರು ಎಂಬುದನ್ನು ಇದು ತೋರಿಸುತ್ತದೆ. ಈ ಸಂವಿಧಾನದ ಮೂಲಕ ವಿಶ್ವದ ಅತಿ ದೊಡ್ಡ ಮತ್ತು ಯಶಸ್ವಿ ಪ್ರಜಾಪ್ರಭುತ್ವ ಎಂಬ ಗೌರವ ನಮಗಿದೆ ಎಂದು ತಿಳಿಸಿದರು. ಮೇಯರ್ ಕೆ. ಚಮನ್ ಸಾಬ್ ಮಾತನಾಡಿ, ಸಂವಿಧಾನ ಇಲ್ಲದೇ ದೇಶ ಮುನ್ನಡೆಯಲು ಅಸಾಧ್ಯ. ಡಾ. ಬಿ.ಆರ್. ಅಂಬೇಡ್ಕರ್ ಅವರು ದೇಶ ವಿದೇಶಗಳಿಗೆ ಹೋಗಿ ಓದಿಕೊಂಡು ನಮಗೆ ಉತ್ತಮವಾದ ಸಂವಿಧಾನವನ್ನು ನೀಡಿದ್ದಾರೆ. ಅವರು ಎಲ್ಲ ಧರ್ಮಗಳ ಒಳಿತಿಗಾಗಿ ಸಂವಿಧಾನವನ್ನು ಬರೆದಿದ್ದಾರೆ ಎಂದು ಹೇಳಿದರು. ದೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ಮಾತನಾಡಿ, ದೇಶದಲ್ಲಿ ಪ್ರಜಾಪ್ರಭುತ್ವ ಯಶಸ್ವಿಯಾಗಿದೆ ಎಂದರೆ ಅದಕ್ಕೆ ಬಾಬಾ ಸಾಹೇಬ್ ಅಂಬೇಡ್ಕರ್ ಬರೆದಿರುವ ಸಂವಿಧಾನವೇ ಕಾರಣ ಎಂದು ತಿಳಿಸಿದರು. ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಮಾತನಾಡಿ ಅನೇಕ ಹೋರಾಟಗಳ ಮೂಲಕ ದೇಶ ಸ್ವಾತಂತ್ರ್ಯ ಹೊಂದಿತು. ಈ ಅವಧಿಯಲ್ಲಿ ಬ್ರಿಟಿಷರು ಅನೇಕ ಕಾನೂನು ಜಾರಿಗೆ ತಂದರು. ಜಾತ್ಯತೀತ ದೇಶದಲ್ಲಿ ಎಲ್ಲರನ್ನು ಒಳಗೊಳ್ಳುವ ಸಂವಿಧಾನವನ್ನು ಡಾ. ಬಿ.ಆರ್. ಅಂಬೇಡ್ಕರ್ ಬರೆದಿದ್ದು ಪ್ರಪಂಚದಲ್ಲಿ ಮಾದರಿಯಾಗಿದೆ ಎಂದರು. ನಿವೃತ್ತ ಕೆ.ಎ.ಎಸ್ ಅಧಿಕಾರಿ ರುದ್ರಪ್ಪ ಹನಗವಾಡಿ, ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಸದಸ್ಯ ಮಲ್ಲಿಕಾರ್ಜುನ್ ಆರ್ ಹಲಸಂಗಿ ಉಪನ್ಯಾಸ ನೀಡಿದರು. ಉಪ ಮೇಯರ್ ಸೋಗಿ ಶಾಂತಕುಮಾರ್, ಪಾಲಿಕೆ ಆಯುಕ್ತೆ ರೇಣುಕಾ, ಸದಸ್ಯರಾದ ಮಂಜುನಾಥ ಗಡಿಗುಡಾಳ್, ಸವಿತಾ ಹುಲ್ಮನಿ, ಸುಧಾ ಇಟ್ಟಿಗುಡಿ ಮಂಜುನಾಥ್, ಮೀನಾಕ್ಷಿ ಜಗದೀಶ್, ಗೋಣೆಪ್ಪ, ಆಶಾ ಉಮೇಶ್, ನಿವೃತ್ತ ಪ್ರಾಧ್ಯಾಪಕ ಎ.ಬಿ.ರಾಮಚಂದ್ರಪ್ಪ ಇದ್ದರು. ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಕೆ. ನಾಗರಾಜ ಸ್ವಾಗತಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ ನಿರೂಪಿಸಿದರು.