ದಾವಣಗೆರೆ : ಹೊಸ ಸಂವತ್ಸರಕ್ಕೆ ಕಾಲಿಡುವ ಯುಗಾದಿ ಹಬ್ಬದ ಮುನ್ನಾದಿನವಾದ ಶನಿವಾರ ಪ್ರತಿಮಾ ಸಭಾ ಸಂಸ್ಥೆಯಿಂದ ನಗರದ ಬಾಪೂಜಿ ಸಭಾಂಗಣದಲ್ಲಿ ಆಯೋಜಿಸಿದ್ದ ಸಂವಾದ ರಂಗಭೂಮಿ, ಜಾನಪದ ಮತ್ತು ಕಿರುತೆರೆಯ ಸ್ಥಿತಿಗತಿಗಳ ಮೇಲೆ ಬೆಳಕು ಚೆಲ್ಲಿತು. ನಿರ್ದೇಶಕ, ನಟ ಟಿ.ಎನ್. ಸೀತಾರಾಮ್, ಸಾಂಸ್ಕೃತಿಕ ಸಂಘಟಕ ಶ್ರೀನಿವಾಸ ಜಿ. ಕಪ್ಪಣ್ಣ ಹಾಗೂ ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ. ನಾಗರಾಜ ಮೂರ್ತಿ ತಮ್ಮ ವಿಚಾರಗಳನ್ನು ದಾವಣಗೆರೆಯ ಜನರ ಮುಂದೆ ಮಂಡಿಸಿದರು. ನಂತರ ನಡೆದ ಪ್ರಶ್ನೋತ್ತರ ವೇಳೆಯಲ್ಲೂ ಅರ್ಥಪೂರ್ಣ ಚರ್ಚೆ ನಡೆಯಿತು. ಪ್ರತಿಮಾ ಸಭಾದ ಅಧ್ಯಕ್ಷ ಬಾ.ಮ. ಬಸವರಾಜಯ್ಯ ಪ್ರಾಸ್ತಾವಿಕ ಮಾತನಾಡಿದರು. ಗೌರವ ಅಧ್ಯಕ್ಷ ಪ್ರೊ. ಎಸ್. ಹಾಲಪ್ಪ, ಪ್ರಧಾನ ಕಾರ್ಯದರ್ಶಿ ಬಿ.ಎನ್. ಮಲ್ಲೇಶ್ ಇದ್ದರು. ಕೋಶಾಧ್ಯಕ್ಷ ಸಂಪನ್ನ ಮುತಾಲಿಕ್ ಸ್ವಾಗತಿಸಿದರು. ಮುರುಗೇಶ ಬಾಬು, ಡಾ. ಶೃತಿ ರಾಜ್, ಅನುರಾಧಾ, ಬಿ.ಟಿ. ಜಾಹ್ನವಿ ಗಾಯನ ನಡೆಸಿಕೊಟ್ಟರು. ... (ಬಾಕ್ಸ್) ಗ್ರಾಮೀಣ ಕಲೆಯ ಅವಜ್ಞೆ ‘ನಮ್ಮ ಜಾನಪದ : ಇಂದಿನ ಸ್ಥಿತಿಗತಿ’ ಕುರಿತು ಸಾಂಸ್ಕೃತಿಕ ಸಂಘಟಕ ಶ್ರೀನಿವಾಸ ಜಿ. ಕಪ್ಪಣ್ಣ ಮಾತನಾಡಿ, ಶಿಷ್ಟ ಕಲಾವಿದರಿಗೆ ಸಿಗುವ ಗೌರವ ಗ್ರಾಮೀಣ ಕಲಾವಿದರಿಗೆ (ಜನಪದರು) ದೊರೆಯುತ್ತಿಲ್ಲ ಎಂದು ವಿಷಾದಿಸಿದರು. ಶಾಸ್ತ್ರೀಯ ನೃತ್ಯ ಕಲಾವಿದರಿಗೆ ಹೆಚ್ಚು ಮನ್ನಣೆ ನೀಡಲಾಗುತ್ತದೆ. ಉತ್ತಮ ಹೋಟೆಲ್‌ಗಳಲ್ಲಿ ಅವರಿಗೆ ತಂಗಲು ವ್ಯವಸ್ಥೆ ಮಾಡಲಾಗುತ್ತದೆ. ಆದರೆ ಗ್ರಾಮೀಣ ಕಲಾವಿದರನ್ನು ಛತ್ರಗಳಲ್ಲಿ ಚಾಪೆ ಮೇಲೆ ಮಲಗುವಂತೆ ಮಾಡುವ ವ್ಯವಸ್ಥೆ ಇದೆ. ಇಬ್ಬರೂ ಕಲಾವಿದರೇ ಆದರೂ, ಸರ್ಕಾರ ಮತ್ತು ವ್ಯವಸ್ಥೆ ನೋಡುವ ದೃಷ್ಟಿಕೋನದಲ್ಲಿ ವ್ಯತ್ಯಾಸವಿದೆ. ಇದರಿಂದ ಜಾನಪದ ಕಲೆ ಹಾಳಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ಗ್ರಾಮೀಣ ಕಲಾವಿದರನ್ನು ದೆಹಲಿಗೆ ಕರೆಸುವ ಸರ್ಕಾರ ಅವರಿಗೆ ಒಳ್ಳೆಯ ಬಟ್ಟೆಯನ್ನೂ ಕೊಡದೇ ಅವಮಾನ ಮಾಡುತ್ತದೆ. ಹಲವು ಸಂದರ್ಭಗಳಲ್ಲಿ ಜಾನಪದ ಕಲಾವಿದರನ್ನು ಗಣ್ಯರ ಸ್ವಾಗತಕ್ಕೆ ಸೀಮಿತವಾಗಿ ಕರೆಸಲಾಗುತ್ತದೆ ಎಂದು ಹೇಳಿದರು. ... (ಬಾಕ್ಸ್) ಮನದ ಕೊಳೆ ತೊಳೆಯುವ ಶಕ್ತಿ ‘ಪ್ರಸ್ತುತ ಸಂದರ್ಭದಲ್ಲಿ ರಂಗಭೂಮಿ ಒಲವು-ನಿಲುವುಗಳು’ ಕುರಿತು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ. ನಾಗರಾಜ ಮೂರ್ತಿ ಮಾತನಾಡಿ, ರಂಗಭೂಮಿ ಮತ್ತು ಲಲಿತ ಕಲೆಗಳಿಗೆ ಮನದ ಕೊಳೆಯನ್ನು ತೊಳೆಯುವ ಶಕ್ತಿ ಇದೆ ಎಂದು ಹೇಳಿದರು. ಸಂಗೀತ, ನಾಟಕಗಳನ್ನು ಆಸ್ವಾದಿಸಿದರೆ ಮಾನಸಿಕ ಸ್ಥೈರ್ಯ ಮೂಡುತ್ತದೆ. ಖಿನ್ನತೆ ದೂರವಾಗಿ ಆತ್ಮಹತ್ಯೆ, ವಿವಾಹ ವಿಚ್ಛೇದನಗಳು ಕಡಿಮೆಯಾಗುತ್ತವೆ. ಮಕ್ಕಳಲ್ಲಿ ಸಾಂಸ್ಕೃತಿಕ ಅಭಿರುಚಿ ಬೆಳೆಸಬೇಕು ಎಂದು ತಿಳಿಸಿದರು. ರಂಗಭೂಮಿಗೆ ವ್ಯವಸ್ಥೆಯನ್ನೇ ಬದಲಿಸುವ ಶಕ್ತಿ ಇದೆ. ಸರ್ಕಾರ ಇದರ ಮತ್ವವನ್ನು ಅರಿಯಬೇಕು. ದಪ್ಪ ಚರ್ಮದ ರಾಜಕಾರಣಿಗಳಿಗೆ ಮನವರಿಕೆ ಮಾಡಿಕೊಡುವ ಅಗತ್ಯವಿದೆ ಎಂದು ತಿಳಿಸಿದರು. ...
(ಬಾಕ್ಸ್)
ಎಐಗಿಂತ ಆರ್‌ಐ ನಂಬಿ ಇತ್ತೀಚೆಗೆ ಕೃತಕ ಬುದ್ಧಿಮತ್ತೆ (ಎಐ) ಹೆಚ್ಚು ಪ್ರಚಲಿತದಲ್ಲಿದೆ. ಆದರೆ ಅದಕ್ಕಿಂತ ರಿಯಲ್ ಇಂಟೆಲಿಜೆನ್ಸಿಯನ್ನು (ಆರ್‌ಐ) ನಾವು ನಂಬಬೇಕಿದೆ ಎಂದು ನಿರ್ದೇಶಕ, ನಟ ಟಿ.ಎನ್. ಸೀತಾರಾಮ್ ಹೇಳಿದರು. ‘ಪ್ರಸ್ತುತ ಸಂದರ್ಭದಲ್ಲಿ ದೃಶ್ಯ ಮಾಧ್ಯಮಗಳು’ ಕುರಿತು ಮಾತನಾಡಿ, ಯಂತ್ರಗಳ ಮೇಲಿನ ಅವಲಂಬನೆ ಕಡಿಮೆಯಾಗಬೇಕು. ಕೃತ್ರಿಮವಾದುದನ್ನು ದೂರವಿಡಬೇಕು. ಮನುಷ್ಯತ್ವ ಮುಖ್ಯವಾಗಬೇಕು ಎಂದು ತಿಳಿಸಿದರು. ಕೆರೆಗಳನ್ನು ನಾಶ ಮಾಡಿ ನಿವೇಶನ ರಚಿಸಲಾಗುತ್ತಿದೆ. ಪರಿಸರ ಹಾಳಾಗುತ್ತಿದೆ. ಪ್ಲಾೃಸ್ಟಿಕ್ ಮತ್ತು ರಾಸಾಯನಿಕಗಳ ಬಳಕೆ ಕಡಿಮೆಯಾಗಬೇಕು ಅಭಿಪ್ರಾಯಪಟ್ಟರು. ... (ಕೋಟ್) ಅಭಿವ್ಯಕ್ತಿ ಸ್ವಾತಂತ್ರೃ ಪ್ರಜಾಪ್ರಭುತ್ವದ ಮೂಲ ತತ್ವ. ಇತ್ತೀಚಿನ ದಿನಗಳಲ್ಲಿ ಸಂವಾದದ ಜಾಗ ಕುಗ್ಗುತ್ತಿದೆ. ಜನರು ಅಕ್ಷರಸ್ಥರಾದಷ್ಟೂ ಸಂವಾದಗಳು ಹೆಚ್ಚಾಗಿ ನಡೆಯಬೇಕಿತ್ತು. ಆದರೆ ಕಂದಕ ಸೃಷ್ಟಿಯಾಗುತ್ತಿದೆ. ಸಂವಾದಗಳು ಹೆಚ್ಚಾದಷ್ಟೂ ಸಾಂಸ್ಕೃತಿಕ ವಾತಾವರಣ ಸೃಷ್ಟಿಯಾಗುತ್ತದೆ. ಡಾ. ರವಿಕಾಂತೇಗೌಡ, ಪೂರ್ವ ವಲಯ ಐಜಿಪಿ ...