ದಾವಣಗೆರೆ : ಹದಿನಾರು ವರ್ಷಗಳ ಕಾಯುವಿಕೆಯ ನಂತರ ದಾವಣಗೆರೆಯ ಶ್ರೀಮದ್ ಅಭಿನವ ರೇಣುಕ ಮಂದಿರದಲ್ಲಿ ಸೋಮವಾರ, ವೀರಶೈವ ಪೀಠಾಚಾರ್ಯರ ಹಾಗೂ ಶಿವಾಚಾರ್ಯರ ಶೃಂಗ ಸಮ್ಮೇಳನದಲ್ಲಿ ಪಂಚ ಪೀಠಾಧೀಶ್ವರರು ಒಂದೇ ವೇದಿಕೆಯಲ್ಲಿ ಸಮಾಗಮ ಗೊಳ್ಳುವುದರೊಂದಿಗೆ ಭಕ್ತರ ಬಹು ವರ್ಷಗಳ ನಿರೀಕ್ಷೆ ಈಡೇರಿತು. ಈ ಮಹತ್ವದ ಬೆಳವಣಿಗೆಯು ವೀರಶೈವ ಲಿಂಗಾಯತ ಸಮಾಜದ ಒಗ್ಗಟ್ಟನ್ನು ಪ್ರದರ್ಶಿಸಿತು. ಜತೆಗೆ ಸಂಘಟನೆ ಮತ್ತು ಭವಿಷ್ಯದ ಬಗ್ಗೆ ಭರವಸೆಯ ಬೆಳಕು ಮೂಡಿಸಿತು. ಶ್ರೀಮದ್ ರಂಭಾಪುರಿ, ಉಜ್ಜಿನಿ, ಕೇದಾರ, ಶ್ರೀಶೈಲ ಮತ್ತು ಕಾಶಿ ಪೀಠದ ಜಗದ್ಗುರುಗಳು ಒಗ್ಗೂಡಿದ ಐತಿಹಾಸಿಕ ದೃಶ್ಯವನ್ನು ಭಕ್ತರು ಕಣ್ತುಂಬಿಕೊಂಡರು. ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಉತ್ತರಾಂಚಲ, ಗೋವಾ ಇನ್ನಿತರ ರಾಜ್ಯಗಳಿಂದ ಆಗಮಿಸಿದ್ದ 500ಕ್ಕೂ ಹೆಚ್ಚು ಶಿವಾಚಾರ್ಯರ ಉಪಸ್ಥಿತಿಯಿಂದ ಸಮಾರಂಭ ಕಳೆಗಟ್ಟಿತ್ತು. ಪಂಚ ಪೀಠಾಧೀಶರು ವೇದಿಕೆಯನ್ನು ಅಲಂಕರಿಸುತ್ತಿದ್ದಂತೆ ನಾಡಿನ ಹಾಗೂ ದೇಶದ ವಿವಿಧೆಡೆಯಿಂದ ಆಗಮಿಸಿದ್ದ ಸಹಸ್ರಾರು ಭಕ್ತರು ಚಪ್ಪಾಳೆ ತಟ್ಟಿ ಹರ್ಷೋದ್ಗಾರ ಮಾಡಿದರು. ಶ್ರೀಮದ್ ಜಗದ್ಗುರು ಪಂಚಾಚಾರ್ಯ ಮಹಾರಾಜ್ ಕೀ ಜೈ ಎಂಬ ಘೋಷಣೆ ಮೊಳಗಿದವು. ಶೃಂಗ ಸಮ್ಮೇಳನವನ್ನು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ, ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಉದ್ಘಾಟಿಸಿದರು. ವೀರಶೈವ-ಲಿಂಗಾಯತ ಎರಡೂ ಒಂದೇ. ಸಮಾಜ ಹಿತದ ಪ್ರಶ್ನೆ ಬಂದಾಗ ಒಳ ಪಂಗಡ ಭೇದ ಮರೆಯಬೇಕು. ಜಾತಿಗಣತಿಯಲ್ಲಿ ಹೆಸರು ನಮೂದಿಸುವಲ್ಲಿ ಒಮ್ಮತಕ್ಕೆ ಬರಬೇಕು ಎಂಬ ಅಭಿಪ್ರಾಯ ಸಮ್ಮೇಳನದಲ್ಲಿ ವ್ಯಕ್ತವಾಯಿತು. ಇದು ಮೊದಲ ಹೆಜ್ಜೆ. ಮುಂಬರುವ ದಿನಗಳಲ್ಲಿ ಗುರು-ವಿರಕ್ತರ ಸಮಾಗಮದ ಮೂಲಕ ಇಡೀ ಸಮಾಜ ಒಗ್ಗೂಡಬೇಕು. ಇದರಿಂದ ಸಂಘಟನೆ ಬಲಿಷ್ಠವಾಗಲಿದೆ ಎಂಬ ಸಂದೇಶ ರವಾನೆಯಾಯಿತು. ರಾಜ್ಯ ಸರ್ಕಾರ ನಡೆಸಿದ ಜಾತಿಗಣತಿಯಲ್ಲಿ ವೀರಶೈವ ಲಿಂಗಾಯತ ಸಮಾಜದ ಜನಸಂಖ್ಯೆ 60 ಲಕ್ಷ ಎಂಬ ವಿಚಾರ ಬೆಳಕಿಗೆ ಬಂದಿತ್ತು. ಈ ಸಮೀಕ್ಷೆ ಅವೈಜ್ಞಾನಿಕ ಎಂದು ಸಮ್ಮೇಳನದಲ್ಲಿ ಪುನರುಚ್ಚರಿಸಲಾಯಿತು. ಎಲ್ಲಿ ಲೋಪವಾಗಿದೆ ಎಂಬುದನ್ನು ಮನಗಂಡು ಸರಿಪಡಿಸಬೇಕಿದೆ ಎಂಬ ಮಾತುಗಳು ಕೇಳಿಬಂದವು. ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಮಾತನಾಡಿ, ರಾಜ್ಯ ಸರ್ಕಾರದ ಕುತಂತ್ರದಿಂದಾಗಿ ಜಾತಿಗಣತಿಯನ್ನು ಅವೈಜ್ಞಾನಿಕವಾಗಿ ನಡೆಸಲಾಯಿತು. ಭವಿಷ್ಯದ ದೃಷ್ಟಿಯಿಂದ ಸಮಾಜದಲ್ಲಿ ಜಾಗೃತಿ ಮೂಡುವುದು ಅನಿವಾರ್ಯವಾಗಿದೆ. ಮೀಸಲಾತಿಯ ಬಗ್ಗೆ ಸಮಗ್ರ ಚಿಂತನೆ ನಡೆಯಬೇಕು ಎಂದು ಸಲಹೆ ನೀಡಿದರು. ಸಮಾಜವು ತನ್ನ ಶಕ್ತಿಯನ್ನು ಹೆಚ್ಚಿಸಿಕೊಂಡು ಒಗ್ಗಟ್ಟಿನಿಂದ ಸಾಗಿದರೆ ಎಲ್ಲ ಸವಾಲುಗಳನ್ನು ಎದುರಿಸಲು ಸಾಧ್ಯವಿದೆ ಎಂದು ಅಭಿಪ್ರಾಯಪಟ್ಟರು. ಕಾನೂನಾತ್ಮಕ ಅಡಚಣೆಗಳನ್ನು ದೂರ ಮಾಡಲು ಸಮಾಜದ ತಜ್ಞರ ಸಮಿತಿ ರಚಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಸಲಹೆ ನೀಡಿದರು. ಪಂಚ ಪೀಠಾಧೀಶ್ವರರು ಒಂದುಗೂಡಿರುವುದು ಐತಿಹಾಸಿಕ ಬೆಳವಣಿಗೆಯಾಗಿದೆ. ಮುಂದಿನ ದಿನಗಳಲ್ಲಿ ಗುರು, ವಿರಕ್ತ, ಶರಣ ಪರಂಪರೆಯ ಗುರುಗಳನ್ನು ಒಗ್ಗೂಡಿಸಬೇಕಿದೆ. ಪಂಚ ಪೀಠಾಧೀಶರು ಪ್ರತಿ ವರ್ಷ ಒಂದು ನಿರ್ದಿಷ್ಟ ಸ್ಥಳದಲ್ಲಿ ಸಮಾಗಮಗೊಂಡು ಭಕ್ತರಿಗೆ ಮಾರ್ಗದರ್ಶನ ಕೊಡಿಸಬೇಕಿದೆ ಎಂದು, ವೀರಶೈವ ಲಿಂಗಾಯತ ಮಹಾಸಭಾ ರಾಜ್ಯಾಧ್ಯಕ್ಷ ಶಂಕರ್ ಬಿದರಿ ಅವರು ಸದಾಶಯ ಸಂಕಲ್ಪ ನುಡಿಯಲ್ಲಿ ತಿಳಿಸಿದರು. ಜಾತಿ ಗಣತಿಯಲ್ಲಿ ಒಮ್ಮತದ ನಿಲುವು ತಾಳಿ ಒಂದೇ ಹೆಸರು ಬರೆಸಿದರೆ ನಮ್ಮ ಸಮಾಜ ನಂ. 1 ಸ್ಥಾನಕ್ಕೇರಲಿದೆ. ಗತ ವೈಭವ ಮರುಕಳಿಸಲಿದೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ವಿಶ್ವಾಸ ವ್ಯಕ್ತಪಡಿಸಿದರು. ಪಂಚ ಪೀಠಾಧೀಶರು ಇದೇ ವರ್ಷ ಕೂಡಲ ಸಂಗಮಕ್ಕೆ ಆಗಮಿಸಬೇಕು ಎಂದು ಶಾಸಕ ವಿಜಯಾನಂದ ಕಾಶಪ್ಪನವರ್ ಆಹ್ವಾನ ನೀಡಿದರು.