ದಾವಣಗೆರೆ : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ನಗರದಲ್ಲಿ ನಡೆಯಲಿರುವ ಪತ್ರಕರ್ತರ ರಾಜ್ಯಮಟ್ಟದ 38ನೇ ಸಮ್ಮೇಳನವನ್ನು ಯಶಸ್ವಿಗೊಳಿಸಲು ನಗರದಲ್ಲಿ ಗುರುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಸಂಕಲ್ಪ ಮಾಡಲಾಯಿತು.
ಅಪೂರ್ವ ಹೋಟೆಲ್ ಸಭಾಂಗಣದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಹಲವು ಸಲಹೆಗಳು ವ್ಯಕ್ತವಾದವು. ಸಮ್ಮೇಳನದ ಯಶಸ್ಸಿಗೆ ಆಗಬೇಕಿರುವ ತಯಾರಿಯ ಕುರಿತು ಚರ್ಚೆ ನಡೆಯಿತು.
ಸಂಘದ ಜಿಲ್ಲಾಧ್ಯಕ್ಷ ಇ.ಎಂ. ಮಂಜುನಾಥ ಮಾತನಾಡಿ, ಸಮ್ಮೇಳನವನ್ನು ಹಬ್ಬದ ರೀತಿಯಲ್ಲಿ ಆಚರಿಸೋಣ. ಇದು ಪತ್ರಕರ್ತರ ಜಾತ್ರೆಯಾಗಿದ್ದು ಯಶಸ್ಸಿಗೆ ಎಲ್ಲರ ಸಹಕಾರ ಮುಖ್ಯವಾಗಿದೆ ಎಂದರು.
ಹಿರಿಯ ಪತ್ರಕರ್ತ ಬಿ.ಎನ್. ಮಲ್ಲೇಶ್, ಸಮ್ಮೇಳನ ನಡೆಸುವ ದಿನಾಂಕ ಮತ್ತು ಸ್ಥಳವನ್ನು ಶೀಘ್ರ ಘೋಷಣೆ ಮಾಡಬೇಕು ಎಂದು ಸಲಹೆ ನೀಡಿದರು. ಬಾ.ಮ. ಬಸವರಾಜಯ್ಯ ಮಾತನಾಡಿ, ಸಮ್ಮೇಳನದ ವಿವಿಧ ಸಮಿತಿಗಳನ್ನು ರಚನೆ ಮಾಡುವಾಗ ನಗರದ ಗಣ್ಯ ವ್ಯಕ್ತಿಗಳನ್ನು ಸೇರಿಸಿಕೊಳ್ಳಬೇಕು ಎಂದು ಹೇಳಿದರು. ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ಕೆ. ಏಕಾಂತಪ್ಪ ಮಾತನಾಡಿದರು.
ಅನಾರೋಗ್ಯದಿಂದ ಬಳಲುತ್ತಿರುವ ಪತ್ರಕರ್ತರಾದ ಜಿ.ಎಂ.ಆರ್. ಆರಾಧ್ಯ ಮತ್ತು ಚನ್ನಗಿರಿಯ ಅಣ್ಣೋಜಿ ರಾವ್ ಅವರಿಗೆ ಇದೇ ಸಂದರ್ಭದಲ್ಲಿ ಸಹಾಯಧನದ ಚೆಕ್ ವಿತರಣೆ ಮಾಡಲಾಯಿತು.
ಪ್ರಧಾನ ಕಾರ್ಯದರ್ಶಿ ಎ. ಫಕೃದ್ದೀನ್, ಖಜಾಂಚಿ ಎನ್.ವಿ. ಬದರಿನಾಥ್, ರಾಷ್ಟ್ರೀಯ ಸಮಿತಿ ಸದಸ್ಯ ಎಸ್.ಕೆ. ಒಡೆಯರ್, ಕಾರ್ಯದರ್ಶಿ ಜೆ.ಎಸ್. ವೀರೇಶ್, ಜಿಲ್ಲಾ ವರದಿಗಾರರ ಕೂಟದ ಖಜಾಂಚಿ ಮಧು ನಾಗರಾಜ್, ಪತ್ರಕರ್ತರಾದ ಮಲ್ಲಿಕಾರ್ಜುನ್ ಕಬ್ಬೂರು, ತಾರಾನಾಥ್ ಇದ್ದರು.